ಭದ್ರಾವತಿ: ಶಾಸಕ ಬಿ.ಕೆ ಸಂಗಮೇಶ್ ಎರಡನೇ ಪುತ್ರ ಬಿ.ಕೆ. ಬಸವೇಶ್ ಕೊಲೆಗೆ ಇಲ್ಲಿನ ಜೈಲಿನಿಂದಲೇ ಸಂಚು ರೂಪಿಸಿರುವ ಆರೋಪದ ಮೇಲೆ ಇಲ್ಲಿನ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವೇಶ್ ಸ್ನೇಹಿತ ಹೊಸಮನೆ ಎನ್.ಎಂ.ಸಿ ನಿವಾಸಿಯೊಬ್ಬರು ಆಗಸ್ಟ್ 19ರಂದು ಠಾಣೆಗೆ ಬಂದು ದೂರು ನೀಡಿದ್ದಾರೆ.
‘ಆಗಸ್ಟ್ 17ರಂದು ಮಧ್ಯಾಹ್ನ ರಂಗಪ್ಪ ಸರ್ಕಲ್‌ನಲ್ಲಿ ನಿಂತಿದ್ದಾಗ ಸೀಗೆಬಾಗಿ ನಿವಾಸಿ ಟಿಪ್ಪು ಹಾಗೂ ಮತ್ತೊಬ್ಬರು ಪರಸ್ಪರ ಮಾತನಾಡುವುದನ್ನು ಕೇಳಿಸಿಕೊಂಡಿದ್ದೇನೆ. ಅವರು ಜೈಲಿನಲ್ಲಿರುವ ಡಿಚ್ಚಿ ಮುಬಾರಕ್ ತಮಗೆ ಕರೆ ಮಾಡಿ ಶಾಸಕ ಬಿ.ಕೆ.ಸಂಗಮೇಶ ಪುತ್ರ ಬಸವೇಶ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿರುವ ಬಗ್ಗೆ ಚರ್ಚಿಸುತ್ತಿದ್ದರು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಬಸವೇಶ್ ಸ್ನೇಹಿತ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದೇವೆ. ಟಿಪ್ಪು ಹಾಗೂ ಆತನ ಜೊತೆಗೆ ಇದ್ದವನ ವಿಚಾರಣೆ ನಡೆಸಿದ್ದೇವೆ. ಅವರು ನೀಡಿದ ಮಾಹಿತಿ ಆಧರಿಸಿ ಡಿಚ್ಚಿ ಮುಬಾರಕ್‌ನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದೇವೆ. ತಾಂತ್ರಿಕ ಮಾಹಿತಿ ಆಧರಿಸಿಯೂ ತನಿಖೆ ಕೈಗೊಂಡಿದ್ದೇವೆ’ ಎಂದು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ’ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.