ADVERTISEMENT

ಪ್ರಜಾಪ್ರಭುತ್ವ ಗಟ್ಟಿಯಾಗಲು ಸಂವಿಧಾನ ಕಾರಣ; ಶಾಸಕ ಗೋಪಾಲಕೃಷ್ಣ ಬೇಳೂರು

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 5:43 IST
Last Updated 27 ಜನವರಿ 2026, 5:43 IST
ಸಾಗರದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು
ಸಾಗರದಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು   

ಸಾಗರ: ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಇನ್ನೂ ಗಟ್ಟಿಯಾಗಿರಲು ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣವಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ತಾಲ್ಲೂಕು ಆಡಳಿತ ಸೋಮವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಸಾಮಾಜಿಕ ಸಮಾನತೆಯ ಜೊತೆಗೆ ಆರ್ಥಿಕ ಸಮಾನತೆ ಸಾಧಿಸಬೇಕು ಎಂಬ ಸದಾಶಯವನ್ನು ನಮ್ಮ ಸಂವಿಧಾನ ಹೊಂದಿದೆ. ದೇಶದ ಎಲ್ಲಾ ಪ್ರಜೆಗಳಿಗೂ ಪವಿತ್ರವಾದ ಗ್ರಂಥವೆಂದರೆ ಅದು ಸಂವಿಧಾನ ಎಂಬುದು ನಿಸ್ಸಂಶಯ ಎಂದರು. 

ADVERTISEMENT

ಜಗತ್ತಿನ ಶ್ರೇಷ್ಟ ಸಂವಿಧಾನಗಳಲ್ಲಿ ಭಾರತದ ಸಂವಿಧಾನ ಮುಂಚೂಣಿಯಲ್ಲಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆ ತರುವ ಸಂಗತಿಯಾಗಿದೆ. ಸಂವಿಧಾನದಲ್ಲಿ ಹೇಳಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ಆ ಪ್ರಕಾರ ನಡೆದುಕೊಂಡಾಗ ಗಣರಾಜ್ಯೋತ್ಸವ ಆಚರಣೆ ಹೆಚ್ಚು ಸಾರ್ಥಕತೆ ಪಡೆಯುತ್ತದೆ ಎಂದು ಧ್ವಜಾರೋಹಣ ನೆರವೇರಿಸಿದ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಹೇಳಿದರು.

ವಿಜ್ಞಾನ, ವೈದ್ಯಕೀಯ, ಸಹಕಾರ ಕ್ಷೇತ್ರದಲ್ಲಿನ ಸಾಧನೆಗಾಗಿ ಜೀವನ್, ಡಾ.ವಿದ್ಯಾಶ್ರೀ, ಬಿ.ಎ.ಇಂದೂಧರ ಬೇಸೂರು ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ದಿಶಾ ಎಚ್.ಆರ್., ಮೇಘಾ ಗಣೇಶ್ ಪ್ರಸಾದ್, ರಾಹುಲ್ ಕೆ.ಎಸ್. , ತನಿಷ್ಕಾ ಅವರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. 

ಎಎಸ್ ಪಿ ಬೆನಕ ಪ್ರಸಾದ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದಸ್ವಾಮಿ ಇದ್ದರು. ಪೊಲೀಸ್, ಗೃಹರಕ್ಷಕ ದಳ, ಅರಣ್ಯ ಇಲಾಖೆ, ಎನ್‌ಸಿಸಿ, ನಿವೃತ್ತ ಯೋಧರು, ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.