ADVERTISEMENT

ಸಂವಿಧಾನದ ಓದಿನಿಂದ ಪ್ರಜಾಪ್ರಭುತ್ವದ ಅರಿವು ವಿಸ್ತಾರ

ಸಂವಿಧಾನ ಓದು ಅಧ್ಯಯನ ಶಿಬಿರ: ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:52 IST
Last Updated 21 ಜೂನ್ 2025, 15:52 IST
ಶಿವಮೊಗ್ಗದಲ್ಲಿ ಶನಿವಾರ ಜಿಲ್ಲಾಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು
ಶಿವಮೊಗ್ಗದಲ್ಲಿ ಶನಿವಾರ ಜಿಲ್ಲಾಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು   

ಶಿವಮೊಗ್ಗ: ಸಂವಿಧಾನದ ಓದು ಪ್ರಜಾಪ್ರಭುತ್ವದ ಅರಿವನ್ನು ವಿಸ್ತರಿಸುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ ದಾಸ್ ಹೇಳಿದರು.

ಸಂವಿಧಾನ ಓದು ಅಭಿಯಾನ ಕರ್ನಾಟಕ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಲ್ಲಿಗೇನಹಳ್ಳಿಯ ಸನ್ನಿಧಿ ಪಾಲನಾ ನವೀಕರಣ ಕೇಂದ್ರದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಂವಿಧಾನ ಓದು ಅಧ್ಯಯನ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ದೇಶವನ್ನು ಅರಿಯದೇ ಭಾರತದ ಸಂವಿಧಾನ ತಿಳಿಯಲು ಸಾಧ್ಯವಿಲ್ಲ. ಸಂವಿಧಾನ ತಿಳಿಯದೇ ಅದರ ಮೂಲ ತತ್ವವನ್ನು ಅರಿಯಲು ಸಾಧ್ಯವಾಗುವುದಿಲ್ಲ. ಅಧಿಕಾರ, ನ್ಯಾಯಾಂಗ, ಕಾರ್ಯಾಂಗದ ವ್ಯಾಪ್ತಿಗಳು ಅದರ ಸ್ವೇಚ್ಛಾಚಾರ ಇವುಗಳನ್ನೆಲ್ಲಾ ಸಂವಿಧಾನದ ಮೂಲಕವೇ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಸಂಸ್ಕೃತಿ, ಉಪಸಂಸ್ಕೃತಿ, ಧರ್ಮ, ಜಾತಿ, ಆರ್ಥಿಕ, ಸಾಮಾಜಿಕ ಸಂಬಂಧಗಳು ಇವೆಲ್ಲವೂ ಸಂವಿಧಾನದ ಓದುವಿನಿಂದ ಮನನವಾಗುತ್ತವೆ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದರಿಂದ ಸಹಿಷ್ಣುತೆ ಹೆಚ್ಚುತ್ತದೆ ಎಂದರು.

ADVERTISEMENT

ಸಮ ಸಮಾಜದ ನಿರ್ಮಾಣ ಭಾರತೀಯತೆ, ಮಾನವೀಯತೆ ಈ ಮುಂತಾದ ಅಂಶಗಳನ್ನಿಟ್ಟುಕೊಂಡೇ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಸಂವಿಧಾನದ ಆಶಯಗಳು ಕಟ್ಟಕಡೆಯ ಮನುಷ್ಯರನ್ನು ತಲುಪಬೇಕು. ಸಂವಿಧಾನ ಎಲ್ಲಾ ಮನುಷ್ಯರು ಸಮಾನರು ಎಂಬ ತತ್ವದ ಅಡಿಯಲ್ಲಿಯೇ ರೂಪುಗೊಂಡಿದೆ ಎಂದರು.

ಸಂಯೋಜಕ ಕೆ.ಪಿ. ಶ್ರೀಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನ ಓದು ಅಧ್ಯಯನ ಶಿಬಿರದಿಂದ ಭಾರತ ಸಂವಿಧಾನದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಸಂವಿಧಾನ ಓದು ಇಂದು ಅನಿವಾರ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಸನ್ನಿಧಿ ಪಾಲನಾ ನವೀಕರಣ ಕೇಂದ್ರದ ನಿರ್ದೇಶಕ ಫಾ. ಕ್ಲಿಫರ್ಡ್ ರೋಷನ್ ಪಿಂಟೋ, ಹಿರಿಯ ವಕೀಲ ಜಿ.ಎಸ್. ನಾಗರಾಜ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಸಿಇಒ ಎನ್. ಹೇಮಂತ್, ಸಂಪನ್ಮೂಲ ವ್ಯಕ್ತಿ ಬಿ. ರಾಜಶೇಖರ್ ಮೂರ್ತಿ, ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು. 

‘ಸಂವಿಧಾನದ ಓದು ಮೌಲ್ಯ ಹೆಚ್ಚಿಸಬೇಕು’

‘ಸಂವಿಧಾನವನ್ನು ಓದುವ ಮೂಲಕ ಅದರ ಮೌಲ್ಯ ಹೆಚ್ಚಾಗಬೇಕು. ದೇಶದ ಒಗ್ಗಟ್ಟಿಗೆ ಸಂವಿಧಾನವೇ ಪ್ರೇರಣೆ. ಹೀಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಭಾಗವಹಿಸುವುದೇ ಒಂದು ಪುಣ್ಯದ ಕೆಲಸ. ಇದು ನಮ್ಮ ಕರ್ತವ್ಯವೂ ಹೌದು. ನೆಲ ಜಲ ಭಾಷೆ ಧರ್ಮ. ಎಲ್ಲವೂ ಸೇರಿಯೇ ಭಾರತವಾಗಿದೆ. ಇದರ ರಕ್ಷಣೆಗೆ ಸಂವಿಧಾನವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಇಂದು ಸಂವಿಧಾನವನ್ನು ರಕ್ಷಿಸಬೇಕಾದ ಸಂದರ್ಭ ಬಂದಿರುವುದು ವಿಷಾದನೀಯ. ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ 1 -10ನೇ ತರಗತಿ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದುವುದನ್ನು ಶಿಕ್ಷಣ ಸಚಿವನಾದ ಮೇಲೆ ಕಡ್ಡಾಯ ಮಾಡಿದ್ದೇನೆ. ಶಿಕ್ಷಕರು ಕಡ್ಡಾಯವಾಗಿ ಸಂವಿಧಾನ ಪೀಠಿಕೆ ಓದಿಸಬೇಕು ಎಂದು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.