
ಶಿಕಾರಿಪುರ: ‘ಸಹಕಾರ ಸಂಘಗಳ ಮೂಲಕ ಜಿಲ್ಲೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಪುನರ್ಧನ ಅನುದಾನ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅದು ಹೆಚ್ಚಾಗಬೇಕು. ಇಲ್ಲವಾದರೆ ಸಹಕಾರಿ ಕ್ಷೇತ್ರ ಹಿನ್ನಡೆ ಅನುಭವಿಸುತ್ತದೆ’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸುರಭಿ ಭವನದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್, ಡಿಸಿಸಿ ಬ್ಯಾಂಕ್, ತಾಲ್ಲೂಕಿನ ಎಲ್ಲ ಸಹಕಾರ ಸಂಘಗಳ ಸಹಯೋಗದಲ್ಲಿ ಶನಿವಾರ ನಡೆದ 72ನೇ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜ್ಯಕ್ಕೆ ನರ್ಬಾಡ್ ನೀಡುತ್ತಿದ್ದ ಅನುದಾನ ಶೇ 50ಕ್ಕೂ ಹೆಚ್ಚು ಕಡಿತಗೊಂಡಿದೆ. ಅದರಿಂದ ರಾಜ್ಯದಲ್ಲಿ ರೈತರಿಗೆ ನೀಡುವ ಬೆಳೆಸಾಲ ಕಡಿಮೆಯಾಗುವ ಆತಂಕ ಇದೆ. ಅದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿನ ಸಹಕಾರಿ ಸಂಸ್ಥೆಗಳನ್ನು ಬಲಗೊಳಿಸುವ ಅನಿವಾರ್ಯತೆ ಇದೆ. ಜಿಲ್ಲೆಯ ಡಿಸಿಸಿ ಬ್ಯಾಂಕ್ ₹ 1,200 ಕೋಟಿ ಬೆಳೆಸಾಲ ನೀಡಿದ್ದು, ಕೃಷಿಯೇತರ ಸಾಲ ₹ 500 ಕೋಟಿ ನೀಡುವ ಮೂಲಕ ಸಮನ್ವಯತೆ ಸಾಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಸಹಕಾರ ತತ್ವ ಬಲಿಷ್ಠವಾದದ್ದು. ಅದು ರಾಜಕೀಯ ಹೊರತಾಗಿ ಕಟ್ಟಿ ಬೆಳೆಸಬೇಕು. ಆಗ ಗ್ರಾಮೀಣ ಪ್ರದೇಶದ ಎಲ್ಲ ರೈತರಿಗೆ ಅದರ ಸದುಪಯೋಗ ದೊರೆಯುತ್ತದೆ’ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಸ್. ರವೀಂದ್ರ ಧ್ವಜಾರೋಹಣ ಮಾಡಿದರು. ತಾಲ್ಲೂಕಿನ ಉತ್ತಮ ಸಹಕಾರಿಗಳಾಗಿ ಸುದರ್ಶನನಾಯ್ಡು, ಆರ್.ಬಿ.ನಾಗರಾಜ, ಶಾಂತಪ್ಪ, ಇಂದ್ರಮ್ಮ, ಮಹೇಂದ್ರಪ್ಪ, ಗಂಗಾಧರಪ್ಪ, ಹೇಮಂತ್ ಶೆಟ್ಟರ್, ನಿರ್ಮಲಾ ಕೊಟ್ರೇಶ್ ಅವರನ್ನು ಸನ್ಮಾನಿಸಲಾಯಿತು.
ಕಿಟ್ಟದಹಳ್ಳಿ, ಎಳಗೆರೆ, ಬೇಗೂರು ಗ್ರಾಮದ ಸಹಕಾರ ಸಂಘಗಳು, ಹಿರೇಜಂಬೂರು, ತಡಗಣಿ, ಮಾಯತಮ್ಮನ ಮುಚಡಿ, ಸುರಗಿಹಳ್ಳಿ, ಕಲ್ಮನೆ, ಅಗ್ರಹಾರ ಮುಚಡಿ ಹಾಲು ಉತ್ಪಾದಕರ ಸಂಘಗಳಿಗೆ ಮತ್ತು ಜಗದ್ಗುರು ಪಂಚಾಚಾರ್ಯ, ಅಬ್ಯುದಯ ಉತ್ತಮ ಸಹಕಾರ ಸಂಘಗಳೆಂದು ಗುರುತಿಸಿ ಗೌರವಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಶಂಕರಪ್ಪ, ಜಿಲ್ಲಾ ಸಹಕಾರ ಯೂನಿಯನ್‌ನ ಪುಷ್ಪಾ ಯಶವಂತ್, ತಾಲ್ಲೂಕಿನ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರಾದ ಪ್ರಭುಸ್ವಾಮಿ, ನಗರದ ಮಾಲತೇಶ್, ಡಿ.ಫಾಲಾಕ್ಷಪ್ಪ, ಸುರೇಂದ್ರಗೌಡ, ಚಿಕ್ಕಣ್ಣ, ಕಿರಣ್‌ಕುಮಾರ್, ನಿರಂಜನ, ಎಂ.ಎನ್. ಬಸವರಾಜ, ಸಹಕಾರ ಸಂಘಗಳ ಉಪನಿಬಂಧಕರಾದ ಸತೀಶ್‌ಕುಮಾರ್, ಅರವಿಂದ್, ಟಿ.ಸಂಗಮೇಶ್, ನವುಲೇಶಪ್ಪ, ಕೆ.ಶಿವಾನಂದಪ್ಪ ಇತರರಿದ್ದರು. ಉಷಾ, ಹುಚ್ಚುರಾಯಪ್ಪ, ಮಹೇಶ್‌ಕುಮಾರ್, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ, ಸಹಕಾರ ಯೂನಿಯನ್‌ನ ಯಶವಂತಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.