ADVERTISEMENT

ಸೊರಬ| ‘ರೈತರ ಆರ್ಥಿಕ ಸದೃಢತೆಗೆ ಸಂಘ ಸಹಕಾರಿ’

ಅಖಿಲ ಭಾರತ ಸಹಕಾರ ಸಪ್ತಾಹ: ಕೆ.ಪಿ ರುದ್ರೇಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:16 IST
Last Updated 17 ನವೆಂಬರ್ 2025, 5:16 IST
ಸೊರಬ ಪಟ್ಟಣದ ರಂಗ ಮಂದಿರದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು‌ ಗಣ್ಯರು ಉದ್ಘಾಟಿಸಿದರು.
ಸೊರಬ ಪಟ್ಟಣದ ರಂಗ ಮಂದಿರದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು‌ ಗಣ್ಯರು ಉದ್ಘಾಟಿಸಿದರು.   

ಸೊರಬ: ಸಹಕಾರಿ ಕ್ಷೇತ್ರದಲ್ಲಿ ಸಂಘಗಳ ಪಾತ್ರ ಅಪಾರವಾಗಿದ್ದು, ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸಹಕಾರ ಸಂಘಗಳಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕೆ.ಪಿ ರುದ್ರೇಗೌಡ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಹಾಲು ಒಕ್ಕೂಟ, ಸಹಕಾರ ಇಲಾಖೆ ಶಿವಮೊಗ್ಗ ಹಾಗೂ ತಾಲ್ಲೂಕಿನ ಸಹಕಾರ ಸಂಘ ಮತ್ತು ಬ್ಯಾಂಕುಗಳ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತರಿಗೆ ಕಾಲಕಾಲಕ್ಕೆ ಸಾಲ ಸೌಲಭ್ಯ ನೀಡಿ ರೈತರ ಬೆನ್ನೆಲುಬಿಗೆ ನಿಂತಿರುವುದು ಸಹಕಾರ ಸಂಘಗಳು. ಸಹಕಾರ ಸಂಘಗಳಿಂದ ಮಾತ್ರ ರೈತರ ಅಭಿವೃದ್ಧಿ ಸಾಧ್ಯ. ಸಹಕಾರ ಸಂಸ್ಥೆಗಳು ಉಳಿದು, ಬೆಳೆಯಬೇಕು. ಇದರಿಂದ ರೈತರ ಬದುಕು ಸುಧಾರಣೆಗೊಳ್ಳುತ್ತವೆ ಎಂದರು.

ADVERTISEMENT

'ಮಹಿಳೆಯರು ಕೂಡಾ ಸಹಕಾರ ಕ್ಷೇತ್ರದಲ್ಲಿ ಇಂದು ದಾಪುಗಾಲು ಇಟ್ಟಿರುವುದು ಹೆಮ್ಮೆಯ ಸಂಗತಿ. ಮಹಿಳೆಯರಿಂದ ಇಂದು ಸಹಕಾರ ಸಂಘಗಳು ಅಭಿವೃದ್ಧಿಯ ಪ್ರಗತಿ ಪಥದಲ್ಲಿವೆ. ಗ್ರಾಮೀಣ ಜನತೆಯ ಬಡವರು, ಮಧ್ಯಮ ವರ್ಗದರು ಮೇಲೆ ಬರುವ ಉದ್ದೇಶದಿಂದಲೇ ಸಹಕಾರ ಸಂಘಗಳು ಸ್ಥಾಪನೆಗೊಂಡಿದ್ದು, ಇವುಗಳ ಮೂಲಕ ಆರ್ಥಿಕ ಪ್ರಗತಿ ಹೊಂದಬೇಕು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ವಿ ಗೌಡ ತಿಳಿಸಿದರು.

ಈ ವೇಳೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗೆ ಉತ್ತಮ ಸಹಕಾರ ಸಂಘ, ಉತ್ತಮ ನೌಕರ, ಉತ್ತಮ ಸಹಕಾರಿಗಳಿಗೆ ಸನ್ಮಾನಿಸಲಾಯಿತು.

ರಾಜ್ಯ ಅಡಿಕೆ ಬೆಳೆಗಾರರ ಮಂಡಳಿ ಅಧ್ಯಕ್ಷ ಅಶೋಕ ನಾಯ್ಕ ಅಂಡಿಗೆ, ತಾ.ಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಸಿ ಕಲ್ಮನೆ ಮಾತನಾಡಿದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಎಂ.ಆರ್ ಅಶೋಕ ಹೆಗಡೆ ಮಳಲಗದ್ದೆ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಅಧಿಕಾರಿ ಪ್ರಕಾಶ್, ಆರ್.ಪಿ ವಿಜೇಂದ್ರ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರವಿಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಕಾಶ್, ಸಮಾಜ ಸೇವಕ ರಾಜು ಹಿರಿಯಾವಲಿ, ಕಲ್ಲಂಬಿ ಹಿರಿಯಪ್ಪ, ವಿನಯ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.