ADVERTISEMENT

ಕೊರೊನಾ: ಮನೆ ಮನೆ ಭೇಟಿ, ಔಷಧ ಸಿಂಪಡಣೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2020, 13:43 IST
Last Updated 29 ಮಾರ್ಚ್ 2020, 13:43 IST

ಶಿವಮೊಗ್ಗ: ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಂದ ಶಿವಮೊಗ್ಗಕ್ಕೆ ಬಂದಿರುವವರ ಪತ್ತೆಗೆ ಸ್ಟಾಫ್‌ ನರ್ಸ್‌, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಭಾನುವಾರ ನಗರದ ಪ್ರತಿ ಮನೆಗೂ ಭೇಟಿ ನೀಡಿದರು.

ಬಿಸಿಲಿನಲ್ಲಿಯೇ ಪ್ರತಿಯೊಂದು ಮನೆಗೂ ಭೇಟಿ ನೀಡಿ ‘ಕೊರೊನಾ ಸೋಂಕು ಹರಡುವುದನ್ನು ತಡೆಯಲು ಈ ಮಾಹಿತಿ ಕಲೆ ಹಾಕುತ್ತಿದ್ದೇವೆ. ನಿಮ್ಮ ಮನೆಯಲ್ಲಿ ಯಾರಾದರೂ ಬೆಂಗಳೂರಿನಿಂದ ಅಥವಾ ಬೇರೆಡೆಯಿಂದ ಬಂದಿದ್ದರೆ ಮಾಹಿತಿ ನೀಡಿ’ ಎಂದು ಮೊಬೈಲ್‌ ನಂಬರ್‌ ಕೇಳಿ ಪಡೆದರು. ಬೇರೆಡೆಯಿಂದ ಬಂದಿದ್ದರೆ 14 ದಿನ ಮನೆಯಿಂದ ಹೊರಗೆ ಬರದಂತೆ ಎಚ್ಚರಿಕೆ ನೀಡಿದರು.

ಇನ್ನೂ ಕೊರೊನಾ ಸೋಂಕು ಹರಡದಂತೆ ತಡೆಯಲು ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಭಾನುವಾರ ನಗರದಲ್ಲಿ ಔಷಧ ಸಿಂಪಡಿಸಿದರು.

ADVERTISEMENT

ಲಾಕ್‌ಡೌನ್‌ ಇದ್ದರೂ ಜನರು ಗುಂಪು ಸೇರುವುದು, ರಸ್ತೆಗಳಲ್ಲಿ ಓಡಾಡುವುದು ಮಾಡುತ್ತಿದ್ದಾರೆ. ಹಾಗಾಗಿ ನಗರದ ಪ್ರಮುಖ ರಸ್ತೆಗಳು, ವೃತ್ತಗಳು, ಬಸ್‌ನಿಲ್ದಾಣ, ಅಂಗಡಿಗಳ ಬಳಿ ಹಾಗೂ ಎಲ್ಲಾ ವಾರ್ಡ್‌ಗಳಲ್ಲಿಯೂ ಔಷಧ ಸಿಂಪಡಿಸಲಾಯಿತು.

ಸೋಡಿಯಂ ಹೈಪೊಕ್ಲೋರೈಡ್, ಫಿನಾಯಿಲ್‌ ಮತ್ತು ಬ್ಲೀಚಿಂಗ್‌ ಅನ್ನು ಮಿಶ್ರಣ ಮಾಡಿ ಅಗ್ನಿಶಾಮಕ ದಳದ ವಾಹನದಿಂದ ಸಿಂಪಡಣೆ ಮಾಡಲಾಯಿತು. ಪಾಲಿಕೆ ಸಿಬ್ಬಂದಿ ಸಹ ಬಡಾವಣೆಗಳಲ್ಲಿ, ಅಂಗಡಿಗಳ ಮುಂದೆ ಔಷಧ ಸಿಂಪಡಣೆ ಮಾಡಿದರು.

ಕೆಲವು ಔಷಧ ಅಂಗಡಿಗಳು ತೆರೆದಿದ್ದವು. ಜನರು ಅಂತರ ಕಾಯ್ದುಕೊಂಡು ಔಷಧ ತೆಗೆದುಕೊಂಡರು. ಪೆಟ್ರೋಲ್ ಬಂಕ್‌ಗಳಲ್ಲಿ ಮುಖಕ್ಕೆ ಮಾಸ್ಕ್‌ ಹಾಕಿದವರಿಗೆ ಮಾತ್ರ ಪೆಟ್ರೋಲ್ ಹಾಕಲಾಯಿತು. ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪೊಲೀಸರು ಅಲ್ಲಲ್ಲಿ ಓಡಾಡುತ್ತಿದ್ದ ಜನರನ್ನು ಬೆದರಿಸಿ ಮನೆಗೆ ಕಳುಹಿಸಿದರು.

ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಜನ ಸೇರುವ ಹಾಗಿಲ್ಲ ಎಂದು ನಿರ್ಬಂಧ ವಹಿಸಿದ್ದರೂ ಸಹ ನಿಯಮಗಳನ್ನು ಗಾಳಿಗೆ ತೂರಿ ಇಲಿಯಾಜ್ ನಗರದ ಐದನೇ ತಿರುವಿನಲ್ಲಿರುವ ಹನ್ಫಿಯಾ ಮಸೀದಿಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲು ಮುಂದಾದವರನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಶನಿವಾರ 30 ಜನರು ಮುಖಕ್ಕೆ ಮಾಸ್ಕ್ ಧರಿಸದೆ ಪ್ರಾರ್ಥನೆ ಮಾಡಲು ಮುಂದಾಗಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಕೆಲವರು ಪರಾರಿ ಆಗಿದ್ದಾರೆ. ಅವರಲ್ಲಿ 7 ಜನರನ್ನು ಬಂಧಿಸಲಾಗಿದೆ.

ಅಬ್ದುಲ್ ಸಲಾಮ್, ಅಲಿ ಮಹಮ್ಮದ್, ಅತೀಕ್ ಷರೀಫ್, ಶರೀಫ್ ಅಹಮ್ಮದ್, ಮಹಮ್ಮದ್ ನೌಶದ್, ಎಸ್.ಬಿ. ಫೈರೋಜ್ ಅಹಮ್ಮದ್ ಎಂದು ಗುರುತಿಸಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.