ADVERTISEMENT

14 ಕೋವಿಡ್ ಪೀಡಿತರ ಆರೋಗ್ಯದಲ್ಲೂ ಚೇತರಿಕೆ

38 ವರ್ಷದ ಗರ್ಭಿಣಿ–ಮಗುವೂ ಕ್ಷೇಮ, ತಂದೆ–ಮಗಳಿಗೆ ಒಂದೇ ವಾರ್ಡ್‌ನಲ್ಲಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 18 ಮೇ 2020, 12:21 IST
Last Updated 18 ಮೇ 2020, 12:21 IST

ಶಿವಮೊಗ್ಗ: ಕೊರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿರುವ 14 ರೋಗಿಗಳ ಆರೋಗ್ಯದಲ್ಲಿ ಚೇತರಿಕೆ ಕಂಡಬಂದಿದ್ದು, 8 ತಿಂಗಳ ಗರ್ಭಿಣಿಯೂ ಚೇತರಿಸಿಕೊಳ್ಳುತ್ತಿದ್ದಾರೆ.

38 ವರ್ಷದ ಮಹಿಳೆಯ ಹೊಟ್ಟೆಯೊಳಗಿನ ಮಗುವಿನ ಆರೋಗ್ಯವೂ ಚೆನ್ನಾಗಿದೆ. ಅಹಮದಾಬಾದ್‌ನಿಂದ ಬಂದಿದ್ದ 8 ಜನರ ಆರೋಗ್ಯದಲ್ಲೂ ಗಣನೀಯ ಚೇತರಿಕೆ ಕಂಡು ಬಂದಿದೆ. ಎಲ್ಲರನ್ನೂ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ.ರಿಪ್ಪನ್‌ಪೇಟೆ ಸಮೀಪದ ಬಾಳೂರಿನ ತಂದೆ, ನಾಲ್ಕು ವರ್ಷದ ಮಗಳನ್ನು ಒಂದೇ ಕೊಠಡಿಯಲ್ಲಿಟ್ಟು ಚಕಿತ್ಸೆ ಮುಂದುವರಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು.

14ನೇ ದಿನಕ್ಕೆ ಮತ್ತೆ ಪರೀಕ್ಷೆ:

ADVERTISEMENT

ಮೇ 10ರಂದು ಮೊದಲ ಪ್ರಕರಣ ದಾಖಲಾದ ಅಹಮದಾಬಾದ್‌ನಿಂದ ಬಂದಿದ್ದ ಎಲ್ಲ 8 ಕೋವಿಡ್‌ ಪೀಡಿತರಿಗೆ ಮೇ 23ರಂದು ಮತ್ತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. 14 ದಿನಗಳ ನಂತರ ನಡೆಸುವ ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ 24 ಗಂಟೆಗಳ ನಿಗಾದಲ್ಲಿ ಇರಿಸಲಾಗುತ್ತದೆ. ಆಗ ನಡೆಸುವ ಪರೀಕ್ಷೆಯಲ್ಲೂ ನೆಗೆಟಿವ್ ಇದ್ದರೆ ಮನೆಗೆ ಕಳುಹಿಸಲಾಗುತ್ತದೆ. ಇಲ್ಲದಿದ್ದರೆ ಪ್ರತಿ ಮೂರು ದಿನಕ್ಕೆ ಒಮ್ಮೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗುತ್ತದೆ. ನೆಗೆಟಿವ್ ಬರುವವರೆಗೂ ಚಿಕಿತ್ಸೆ ಮುಂದುವರಿಸಲಾಗುತ್ತದೆ. ಉಳಿದ 6 ಜನರಿಗೂ ಇದೇ ಮಾದರಿ ಅನುಸರಿಸಲಾಗುತ್ತದೆ.

ನೆಗೆಟಿವ್ ಬಂದರೂ ಕ್ವಾರಂಟೈನ್ ಕಡ್ಡಾಯ:

ಮುಂಬೈನಿಂದ ತೀರ್ಥಹಳ್ಳಿ ತಾಲ್ಲೂಕಿನ ಹಳ್ಳಿಬೈಲ್‌ಗೆ ಬಂದಿದ್ದ ವ್ಯಕ್ತಿಯ ಹೊಣೆಗೇಡಿತನದಿಂದ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು ಎನ್ನಲಾದ 12 ವ್ಯಕ್ತಿಗಳ ಗಂಟಲು ದ್ರವದ ಪರೀಕ್ಷೆ ನೆಗೆಟಿವ್ ಬಂದಿದೆ. ಆದರೆ, ಅವರು 14 ದಿನಗಳು ಕ್ವಾರಂಟೈನ್‌ನಲ್ಲಿ ಇರುವುದು ಕಡ್ಡಾಯ. ಕಾರಣ ಪ್ರಾಥಮಿಕ ಸಂಪರ್ಕಕ್ಕೆ ಬಂದು ಮೂರು, ನಾಲ್ಕು ದಿನಗಳಷ್ಟೇ ಆಗಿದೆ. ಹಾಗಾಗಿ, ವಾರಕ್ಕೊಮ್ಮೆ ಅವರನ್ನುಪರೀಕ್ಷೆಗೆ ಒಳಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಸೋಂಕಿತ ವ್ಯಕ್ತಿಯ ಗ್ರಾಮದ ಸುತ್ತ ಎರಡು ಕಿ.ಮೀ. ವ್ಯಾಪ್ತಿಯ 78 ಮನೆಗಳ ಜನರನ್ನು ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. ವಾರಕ್ಕೆ ಒಮ್ಮೆ ಅವರ ಆರೋಗ್ಯವನ್ನೂ ತಪಾಸಣೆ ಮಾಡಲಾಗುತ್ತಿದೆ. ಇಡೀ ಗ್ರಾಮಕ್ಕೆ ಅಗತ್ಯವಾದ ದಿನಸಿ ಮತ್ತಿತರ ಸಾಮಗ್ರಿಗಳನ್ನು ಅಲ್ಲಿಗೇ ಪೂರೈಸುವ ವ್ಯವಸ್ಥೆ ಮಾಡಲಾಗಿದೆ. ಅವರ ಮನೆಗೆ ತೆರಳಿ ಮಾಹಿತಿ ನೀಡಿದ್ದ ಆಶಾ ಕಾರ್ಯಕರ್ತೆಯನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಉಳಿದವರ ಸಮಸ್ಯೆ ಇಲ್ಲ:

ಕೋವಿಡ್‌ ಪೀಡಿತರಲ್ಲಿ ಹಳ್ಳಿಬೈಲಿನ ವ್ಯಕ್ತಿ ಹೊರತುಪಡಿಸಿದರೆ ಉಳಿದ ಎಲ್ಲರೂ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಬಂದ ತಕ್ಷಣ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಹಾಗಾಗಿ, ಉಳಿದ 13 ಕೋವಿಡ್‌ ರೋಗಿಗಳಿಂದ ಸಮುದಾಯಕ್ಕೆ ಯಾವುದೇ ಅಪಾಯ ಇಲ್ಲ. ಸಮಾಜಕ್ಕೆ ಆತಂಕ ಸೃಷ್ಟಿಸಿದ ಹಳ್ಳಿಬೈಲಿನ ವ್ಯಕ್ತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಜನರು ಜಿಲ್ಲಾಡಳಿತದ ಮೇಲೆ ಒತ್ತಡ ಹಾಕಿದ್ದಾರೆ.

5.12 ಲಕ್ಷ ಜನರ ಆರೋಗ್ಯದ ಮೇಲೆ ನಿಗಾ:

ಜಿಲ್ಲೆಯಲ್ಲಿ ಎರಡನೇ ಹಂತದ ಮನೆ ಮನೆ ಆರೋಗ್ಯ ಸಮೀಕ್ಷೆ ಪೂರ್ಣಗೊಂಡಿದೆ.3.26 ಜನರ ಆರೋಗ್ಯದ ಮಾಹಿತಿ ಪಡೆಯಲಾಗಿದೆ. ಮೂರನೇ ಹಂತದ ಸಮೀಕ್ಷೆ ಆರಂಭಿಸಲಾಗಿದ್ದು, ಒಟ್ಟು 5.12ಲಕ್ಷ ಜನರ ಆರೋಗ್ಯ ಮಾಹಿತಿ ಪಡೆಯಲಾಗುತ್ತಿದೆ. 18 ಸಾವಿರ ಗರ್ಭಿಣಿಯರು, 83 ಸಾವಿರ ಡಯಾಬಿಟಿಸ್ ವ್ಯಕ್ತಿಗಳು, 60 ವರ್ಷ ಮೇಲ್ಪಟ್ಟವರು ಸೇರಿದ್ದಾರೆ. ಆಶಾ ಕಾರ್ಯಕರ್ತೆಯರು ಮತ್ತುಬಿಎಲ್‍ಒಗಳು ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.