ADVERTISEMENT

ಶಿವಮೊಗ್ಗ: ದೆಹಲಿಯಿಂದ ಹಿಂದಿರುಗಿದ 10 ಜನರ ಮೇಲೆ ನಿಗಾ

ಹೊರ ಜಿಲ್ಲೆಗಳಿಂದ ಬರುವವರ ತಪಾಸಣೆಗೆ 15 ಚೆಕ್‌ಪೋಸ್ಟ್‌ಗಳು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 14:43 IST
Last Updated 1 ಏಪ್ರಿಲ್ 2020, 14:43 IST
ಕೊಪ್ಪಳದ ತಿರುಪತಿ–ಚಂದವ್ವ ದಂಪತಿ
ಕೊಪ್ಪಳದ ತಿರುಪತಿ–ಚಂದವ್ವ ದಂಪತಿ   

ಶಿವಮೊಗ್ಗ: ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ 11 ಜನರು ಜಿಲ್ಲೆಗೆ ಮರಳಿರುವ ಸುದ್ದಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ಜನರಿಗೆ ಕೊರೊನಾ ಸೋಂಕು ತಗುಲಿರುವ ಕಾರಣ ಅವರು ಯಾವ ಜಿಲ್ಲೆಗಳಿಗೆ ಸೇರಿದ್ದಾರೆ ಎಂಬ ಪಟ್ಟಿ ರಾಜ್ಯ ಸರ್ಕಾರ ಆಯಾ ಜಿಲ್ಲೆಗೆ ನೀಡಿದೆ. ಸಮಾಧಾನದ ಸಂಗತಿ ಎಂದರೆ ಆ 11 ಜನರಲ್ಲಿ 6 ಜನರು ಈಗಾಗಲೇ 14 ದಿನಗಳ ಹೋಂ ಕ್ವಾರಂಟೈನ್ ಪೂರೈಸಿದ್ದಾರೆ. ಗಂಟಲು ದ್ರವದ ಮಾದರಿ ಪ್ರಯೋಗದಲ್ಲೂ ಪಾಸಿಟಿವ್ ಪತ್ತೆಯಾಗಿಲ್ಲ. ಉಳಿದ ನಾಲ್ವರು ಮೆಗ್ಗಾನ್ ಆಸ್ಪತ್ರೆಯ ನಿಗಾ ಘಟಕದಲ್ಲಿ ಇದ್ದಾರೆ. ಒಬ್ಬರ ವಿಳಾಸ ಪತ್ತೆಯಾಗಿಲ್ಲ. ಆ ವ್ಯಕ್ತಿ ಬೆಂಗಳೂರಿನಲ್ಲೇ ಇರುವ ಮಾಹಿತಿ ಲಭಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಭದ್ರಾವತಿ, ಸಾಗರತಾಲ್ಲೂಕಿನ ಕೆಲವರು ಬೇರೆ ರಾಜ್ಯಗಳಿಗೆ ಹೋಗಿ ಬಂದ ಪರಿಣಾಮ ಅವರ ಮೇಲೂ ನಿಗಾ ಇಡಲಾಗಿದೆ.

ADVERTISEMENT

15 ಕಡೆ ಚೆಕ್‌ಪೋಸ್ಟ್:

ಹೊರ ಜಿಲ್ಲೆಗಳಿಂದ ಜಿಲ್ಲೆಗೆ ಆಗಮಿಸುವ ವಾಹನಗಳು, ಜನರ ಮೇಲೆ ನಿಗಾ ವಹಿಸಲು ಜಿಲ್ಲಾಡಳಿತ 15 ಚೆಕ್‌ಪೋಸ್ಟ್‌ ತೆರೆದಿದೆ. ತಪಾಸಣೆ ಬಿಗಿಗೊಳಿಸಿದೆ. ವೈದ್ಯಕೀಯ ಕಾರಣ ಹೊರತುಪಡಿಸಿ ಉಳಿದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ.

ಕಾರ್ಕಳದಿಂದ ಕೊಪ್ಪಳಕ್ಕೆ ಕಾಲ್ನಡಿಗೆ:ಗಾರೆ ಕೆಲಸಕ್ಕೆ ಉಡುಪಿ ಜಿಲ್ಲೆ ಕಾರ್ಕಳಕ್ಕೆ ಹೋಗಿದ್ದ ಕೊಪ್ಪಳ ಜಿಲ್ಲೆಯ ತಿರುಪತಿ ನಾಯ್ಕ, ಚಂದವ್ವ ದಂಪತಿ 400 ಕಿ.ಮೀ. ಕಾಲ್ನಡಿಗೆಯಲ್ಲೇ ಊರಿಗೆ ಪಯಣ ಬೆಳೆಸಿದ್ದಾರೆ. 200 ಕಿ.ಮೀ. ಕ್ರಮಿಸಿರುವ ಅವರು ಬುಧವಾರ ಶಿವಮೊಗ್ಗ ದಾಟಿದರು. ಸಂಘ, ಸಂಸ್ಥೆಗಳು ಅವರಿಗೆ ಊಟೋಪಚಾರ ಮಾಡಿದರು.

ಮನೆಯಲ್ಲಿ ಮೂವರು ಮಕ್ಕಳು ಇದ್ದಾರೆ. ಎರಡು ವಾರದ ಹಿಂದೆ ಕಾರ್ಕಳಕ್ಕೆ ಹೋಗಿದ್ದೆವು. ನಿರ್ಬಂಧ ಜಾರಿಯಾದ ಕಾರಣ ಕೆಲಸವಿಲ್ಲ. ಅಲ್ಲೇ ಇರಲು ಮಕ್ಕಳ ಬಿಡುತ್ತಿಲ್ಲ. ಹಠ ಮಾಡುತ್ತಿದ್ದಾರೆ. ಹಾಗಾಗಿ, ನಡೆದುಕೊಂಡು ಹೋಗುವ ನಿರ್ಧಾರ ಮಾಡಿದೆವು. 5 ದಿನಗಳು ಪ್ರಯಾಣ ಮಾಡಿದ್ದೇವೆ. ಇನ್ನು 5 ದಿನಗಳಲ್ಲಿ ಊರು ತಲುಪುತ್ತೇವೆ.ದಾರಿಯದ್ದಕ್ಕೂ ಜನರು ಊಟ, ತಿಂಡಿ ನೀಡುತ್ತಿದ್ದಾರೆ ಎಂದು ದಂಪತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.