ADVERTISEMENT

ಕೆಲಸದ ಆದೇಶಕ್ಕೆ ವಿ.ಸಿ ಹಣ ಪಡೆದ ಆರೋಪ?

ಆಡಿಯೊ ಸಂಭಾಷಣೆ ನಕಲಿ: ಕುವೆಂಪು ವಿ.ವಿ.ಕುಲಪತಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 16:17 IST
Last Updated 2 ಜೂನ್ 2023, 16:17 IST

ಶಿವಮೊಗ್ಗ: ಅತಿಥಿ ಉಪನ್ಯಾಸಕ ಹುದ್ದೆಯ ನೇಮಕಾತಿಗೆ ಲಂಚ ಪಡೆದರೂ ಆದೇಶ ಕೊಡಲು ವಿಳಂಬ ಮಾಡಿದ ಕಾರಣ  ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅವರಿಗೆ ವ್ಯಕ್ತಿಯೊಬ್ಬರು ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾದ ಆಡಿಯೊ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಆದರೆ ಆಡಿಯೊ ಸಂಭಾಷಣೆಯನ್ನು ಪ್ರೊ.ಬಿ.ಪಿ.ವೀರಭದ್ರಪ್ಪ ನಿರಾಕರಿಸಿದ್ದಾರೆ.

‘ನನಗೂ ಆ ಸಂಭಾಷಣೆಯನ್ನು ಯಾರೋ ಕಳುಹಿಸಿದ್ದರು. ಕೇಳಿಸಿಕೊಂಡಿದ್ದೇನೆ. ಅದರಲ್ಲಿ ಮಾತನಾಡಿರುವುದು ನಾನಲ್ಲ. ಬದಲಿಗೆ ನನ್ನ ಧ್ವನಿಯನ್ನು ಯಾರೋ ಅನುಕರಣೆ ಮಾಡಿ ತೇಜೋವಧೆಗೆ ಪ್ರಯತ್ನಿಸಿದ್ದಾರೆ. ನಾನು ಯಾರಿಂದಲೂ ಹಣ ಪಡೆದು ಕೆಲಸದ ಆದೇಶ ಪತ್ರ ಕೊಟ್ಟಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಸಂಭಾಷಣೆ ಸಾರ: ‘ಬೈಕ್ ಮಾರಾಟ ಮಾಡಿ ನಿಮಗೆ ₹90,000 ಕೊಟ್ಟಿದ್ದೇನೆ. ಆದರೂ ನೀವು ನನಗೆ ಅತಿಥಿ ಉಪನ್ಯಾಸಕ ಕೆಲಸದ ಆದೇಶ ಕೊಡಿಸಲಿಲ್ಲ. ಈಗ ಬೇರೆ ಕಡೆ ಕಮಿಟ್ ಆಗಿ ಕೆಲಸಕ್ಕೆ ಹೋಗುತ್ತಿದ್ದೇನೆ. ದಯವಿಟ್ಟು ನನಗೆ ಹಣ ವಾಪಸ್ ಕೊಡಿ’ ಎಂದು ಆಡಿಯೊದಲ್ಲಿ ವ್ಯಕ್ತಿಯೊಬ್ಬರು ಕೇಳುತ್ತಾರೆ.

ADVERTISEMENT

ಅದಕ್ಕೆ ಪ್ರತಿಕ್ರಿಯಿಸುವ ಕುಲಪತಿ ಎಂದು ಹೇಳಲಾದ ವ್ಯಕ್ತಿ, ‘ಕೆಲಸದ ಆದೇಶ ನಾನು ಮಾಡಿಸಿದ್ದೇನೆ. ನೀವು ಅದನ್ನು ಪಡೆದು ಕೆಲಸ ಮಾಡಿ. ಈಗ ಅಷ್ಟೊಂದು ದೊಡ್ಡ ಮೊತ್ತ ಒಮ್ಮೆಲೆ ಕೇಳಿದರೆ ಕೊಡುವುದು ಹೇಗೆ? ಹಣ ಕೊಡಲು ಸಮಯ ಕೊಡಿ’ ಎಂದು ಹೇಳುತ್ತಾರೆ.

‘ನನ್ನ ಕುಟುಂಬದ ಸದಸ್ಯರೊಬ್ಬರಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವುದಿದೆ. ಮೊದಲ ಕಂತಿನಲ್ಲಿ ₹ 45,000 ಕೊಡಿ. ಉಳಿದ ಹಣವನ್ನು ಜೂನ್ 5ರಂದು ಕೊಡಿ’ ಎಂದು ಆ ವ್ಯಕ್ತಿ ಮನವಿ ಮಾಡುತ್ತಾರೆ.

‘ಸೋಮವಾರ ಬೆಳಿಗ್ಗೆ ನಿಮ್ಮ ಚೇಂಬರ್‌ಗೆ ಬರುತ್ತೇನೆ. ನೀವು ಹಣ ಕೊಡದಿದ್ದರೆ ಬೇರೆ ರೀತಿ ವಸೂಲಿ ಮಾಡುತ್ತೇನೆ’ ಎಂದು ಇದೇ ವೇಳೆ ತಾಕೀತು ಮಾಡುತ್ತಾರೆ.

‘ನಾನು ನಿಮಗೆ ಹಣ ಕೊಡುವಾಗ ನೀವು ಸಮಯ ಕೊಟ್ಟಿದ್ದಿರಾ’ ಎಂದು ಪ್ರಶ್ನಿದಾಗ, ಅತ್ತ ಕಡೆಯಿಂದ ‘ಸೋಮವಾರ ಬೇಡ ಮಂಗಳವಾರ ಚೇಂಬರ್‌ಗೆ ಬನ್ನಿ’ ಎಂದು ಹೇಳಲಾಗುತ್ತದೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.