ADVERTISEMENT

ಶಾಸಕ ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಚಿಂತನೆ; ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 10:37 IST
Last Updated 13 ಡಿಸೆಂಬರ್ 2025, 10:37 IST
   

ಶಿವಮೊಗ್ಗ: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ ನನ್ನ ವಿರುದ್ಧ ಪದೇ ಪದೇ ಸುಳ್ಳು ಆರೋಪಗಳ ಮಾಡುತ್ತಿದ್ದಾರೆ. ಅವರ ವಿರುದ್ಧ ₹1 ಇಲ್ಲವೇ ₹1 ಕೋಟಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹಾಗೂ ವಿಜಯೇಂದ್ರ ಉಪಮುಖ್ಯಮಂತ್ರಿ ಆಗಲು ಯೋಜನೆ ನಡೆದಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಳಿಗೆ ವಿಜಯೇಂದ್ರ ಕರೆದೊಯ್ದು ಚರ್ಚೆ ನಡೆಸಿದ್ದಾರೆ ಎಂಬ ಬಸನಗೌಡ ಪಾಟೀಲ ಯತ್ನಾಳ ಆರೋಪ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ‘ಯತ್ನಾಳ ಅವರಿಗೆ ನನ್ನ ಬಗ್ಗೆ ಮಾತನಾಡದಿದ್ದರೆ ಊಟ ಸೇರುವುದಿಲ್ಲ. ನನ್ನ ತಾಳ್ಮೆಗೂ ಮಿತಿ ಇದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಗಾಂಜಾ ಸೇರಿದಂತೆ ಡ್ರಗ್ಸ್‌ ಹಾವಳಿ ಮಿತಿಮೀರಿದೆ. ನೂರಾರು ಕೋಟಿ ಮೊತ್ತದ ಡ್ರಗ್ಸ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಈ ಡ್ರಗ್ಸ್ ಜಾಲದ ಬುಡಕ್ಕೆ ಹೋಗಿ ಅದರ ಹಿಂದೆ ಇರುವ ಪ್ರಭಾವಿ ಶಕ್ತಿಗಳನ್ನು ಮಟ್ಟಹಾಕುವ ಕೆಲಸ ಮಾಡಬೇಕು’ ಎಂದು ವಿಜಯೇಂದ್ರ ಆಗ್ರಹಿಸಿದರು.

ADVERTISEMENT

'ರಾಜ್ಯದಲ್ಲಿ ಕುರ್ಚಿ ಗದ್ದಲದಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ರೈತರ ಹಿತ ಕಡೆಗಣಿಸಲ್ಪಟ್ಟಿದೆ. ಯತೀಂದ್ರ ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಹೈಕಮಾಂಡ್ ಸಿದ್ಧರಾಮಯ್ಯನವರೇ ಇರಬಹುದೇ ಎಂಬ ಸಂದೇಹ ಕಾಡುತ್ತಿದೆ' ಎಂದು ವ್ಯಂಗ್ಯವಾಡಿದ ವಿಜಯೇಂದ್ರ, 'ಹೈಕಮಾಂಡ್ ರೀತಿ ವರ್ತಿಸುತ್ತಾ ಯತೀಂದ್ರ ಸಿಎಂ ಸ್ಥಾನದ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಖಾಸಗಿಯಾಗಿ ಮಾತಾಡುವಾಗ ಸ್ವತಃ ಕಾಂಗ್ರೆಸ್ ಶಾಸಕರೇ ಯತೀಂದ್ರ ಅವರನ್ನು ಪಕ್ಷದ ಹೈಕಮಾಂಡ್ ಎಂದು ಕಾಲೆಳೆಯುತ್ತಾರೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.