ಶಿವಮೊಗ್ಗ: ಇಲ್ಲಿನ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯನ್ನು ಹಾಲಿ ಇರುವ 695 ಚದರ ಕಿ.ಮೀ ವಿಸ್ತೀರ್ಣದಿಂದ 395.6 ಚದರ ಕಿ.ಮೀ ವ್ಯಾಪ್ತಿಗೆ ಮರು ವಿನ್ಯಾಸಗೊಳಿಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಕೇಂದ್ರದ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದೆ.
37 ಮೀಸಲು ಅರಣ್ಯವನ್ನೊಳಗೊಂಡಂತೆ ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಹೊಸನಗರ ತಾಲ್ಲೂಕುಗಳಲ್ಲಿ ಹರಡಿಕೊಂಡ ಅರಣ್ಯ ಪ್ರದೇಶವನ್ನು 1974ರ ನವೆಂಬರ್ 23ರಂದು ಕೇಂದ್ರ ಸರ್ಕಾರವು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಿತ್ತು.
‘ಅಭಯಾರಣ್ಯ ವ್ಯಾಪ್ತಿಯನ್ನು ಮರುನಿಗದಿಪಡಿಸಲು 2016ರಲ್ಲಿ ಅರಣ್ಯ ಇಲಾಖೆ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ರಾಜ್ಯ ವನ್ಯಜೀವಿ ಮಂಡಳಿಯೂ ಒಪ್ಪಿಗೆ ನೀಡಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಅದಕ್ಕೆ ಈಗ ಅನುಮತಿ ದೊರೆತಿದೆ. ಅಂತಿಮ ಅಧಿಸೂಚನೆ ಮಾತ್ರ ಬಾಕಿ ಇದೆ’ ಎಂದು ಶಿವಮೊಗ್ಗ ವನ್ಯಜೀವಿ ವಲಯದ ಸಿಸಿಎಫ್ ಕೆ.ಟಿ.ಹನುಮಂತಪ್ಪ ಹೇಳಿದರು.
‘1974ರಲ್ಲಿ ಅಭಯಾರಣ್ಯದ ಗಡಿ ನಿಗದಿಗೊಳಿಸುವಾಗ ಅದರಲ್ಲಿ ಕಂದಾಯ, ಖಾಸಗಿ, ಸರ್ಕಾರಿ ಭೂಮಿ, ಶಿವಮೊಗ್ಗ ನಗರ, ಆಯನೂರು ಸೇರಿದಂತೆ ಬಹಳಷ್ಟು ಜನವಸತಿ ಪ್ರದೇಶಗಳೂ ಸೇರಿದ್ದವು. ಹೀಗಾಗಿ ಅಭಯಾರಣ್ಯದ ವ್ಯಾಪ್ತಿ ಹಿಗ್ಗಿತ್ತು. ಈಗ ಬರೀ ಅರಣ್ಯಭೂಮಿಯನ್ನಷ್ಟೇ ಗುರುತಿಸಿ ವ್ಯಾಪ್ತಿಯನ್ನು ಮರು ನಿಗದಿ ಮಾಡಲಾಗಿದೆ’ ಎಂದರು.
‘ಶೆಟ್ಟಿಹಳ್ಳಿ ಅಭಯಾರಣ್ಯ ಘೋಷಣೆ ಮಾಡಿದಾಗ ಆಗಿದ್ದ ತಪ್ಪನ್ನು 50 ವರ್ಷಗಳ ನಂತರ ಸರಿಪಡಿಸಿ ಗಡಿಯನ್ನು ಮರು ವಿನ್ಯಾಸಪಡಿಸಿಕೊಂಡಿದ್ದೇವೆ. ಇದರಿಂದ ಅಂದಾಜು 30,000 ಹೆಕ್ಟೇರ್‌ನಷ್ಟು ಕಂದಾಯ, ಖಾಸಗಿ, ಸರ್ಕಾರಿ ಭೂಮಿ ಅಭಯಾರಣ್ಯದ ವ್ಯಾಪ್ತಿಯಿಂದ ಹೊರಗೆ ಬರಲಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಸೂಚನೆಯಂತೆ ಈ ಕಾರ್ಯ ನಡೆದಿದೆ’ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಪಟಗಾರ ತಿಳಿಸಿದರು.
‘ಸದ್ಯ ಶೆಟ್ಟಿಹಳ್ಳಿ ಅಭಯಾರಣ್ಯದ ಬಫರ್ ವಲಯದ ವ್ಯಾಪ್ತಿ 10 ಕಿ.ಮೀ ಇದೆ. ಅದರನ್ವಯ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ, ಬಸ್ ನಿಲ್ದಾಣ ಕೂಡ ಪರಿಸರ ಸೂಕ್ಷ್ಮ ವಲಯದೊಳಗೆ ಬರುತ್ತವೆ. ಇದರಿಂದ ನಗರೀಕರಣ ಚಟುವಟಿಕೆಗೆ ಅಡ್ಡಿಯಾಗಿದೆ. ಬಫರ್ ವಲಯದ ವ್ಯಾಪ್ತಿಯನ್ನು 1 ಕಿ.ಮೀಗೆ ಇಳಿಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಅರಣ್ಯ ಇಲಾಖೆ ಮೂಲಗಳು ಹೇಳುತ್ತವೆ.
ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲೇ ಗಾಜನೂರಿನ ತುಂಗಾ ಅಣೆಕಟ್ಟೆ, ಮಂಡಗದ್ದೆ ಪಕ್ಷಿಧಾಮ ಇವೆ. ಹುಲಿ, ಚಿರತೆ, ಆನೆ, ನರಿ, ಮಲಬಾರ್ ದೈತ್ಯ ಅಳಿಲು, ಹಾರುವ ಅಳಿಲು, ಪ್ಯಾಂಗೊಲಿನ್, ಮುಂಗುಸಿ, ಕರಡಿ, ಕಾಮನ್ ಲಂಗೂರ್, ಕಾಡು ಹಂದಿ ಈ ಅರಣ್ಯಪ್ರದೇಶದಲ್ಲಿ ಹೆಚ್ಚು ಕಾಣಸಿಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.