ADVERTISEMENT

ಕೋವಿಡ್‌ ಆರೈಕೆ ಕೇಂದ್ರವಾಗಿ ಪರಿವರ್ತನೆಗೊಂಡ ಸಮುದಾಯ ಭವನ: 100 ಹಾಸಿಗೆ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 18 ಮೇ 2021, 13:00 IST
Last Updated 18 ಮೇ 2021, 13:00 IST

ಶಿವಮೊಗ್ಗ: ವಿನೋಬನಗರ ಶುಭಮಂಗಳ ಸಮುದಾಯ ಭವನವನ್ನು ಕೋವಿಡ್‌ ಆರೈಕೆ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. ಮೇ 20ರಿಂದ ರೋಗಿಗಳನ್ನು ದಾಖಲು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಸೇವಾ ಭಾರತಿ, ಶೂಭ ಮಂಗಳ ಸಮುದಾಯ ಭವನ ಸಮಿತಿ, ಕೋವಿಡ್ ಸುರಕ್ಷಾ ಪಡೆ, ಮೆಟ್ರೊ ಆಸ್ಪತ್ರೆ, ಐಎಂಎ, ವಿಶ್ವ ಹಿಂದೂ ಪರಿಷತ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಗಾಂಧಿ ಬಜಾರ್ ವರ್ತಕರ ಸಂಘದ ಸಹಕಾರದಲ್ಲಿ ಈ ಆರೈಕೆ ಕೇಂದ್ರ ಆರಂಭಿಸಲಾಗುತ್ತಿದೆ. ಎಲ್ಲ ಸೌಲಭ್ಯಗಳನ್ನೂ ಕೇಂದ್ರಕ್ಕೆ ಒದಗಿಸಲಾಗಿದೆ. ಎಲ್ಲ ಸೇವೆಗಳೂ ಉಚಿತವಾಗಿರುತ್ತವೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಆಸ್ಪತ್ರೆಗೆ ದಾಖಲಾಗಿ ಕೋವಿಡ್ ಸೋಂಕಿನಿಂದ ಚೇತರಿಕೆ ಕಾಣುತ್ತಿರುವ ರೋಗಿಗಳನ್ನು ಕರೆತಂದು ಈ ಕೇಂದ್ರದಲ್ಲಿ ಉಪಚರಿಸಲಾಗುವುದು. ಜತೆಗೆ, ರೋಗ ಲಕ್ಷಣ ರಹಿತ ವ್ಯಕ್ತಿಗಳಿಗೂ ಆರೈಕೆ ದೊರೆಯಲಿದೆ. ಲಾಕ್‌ಡೌನ್‌ನಿಂದ ಸ್ವಲ್ಪಮಟ್ಟಿಗೆ ಕೋವಿಡ್‌ ಹರಡುವುದು ಸುಧಾರಿಸಿದ್ದರೂ, ಸೋಂಕು ವ್ಯಾಪಕವಾಗಿ ಹಬ್ಬುತ್ತಿದೆ. ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಹಾಗಾಗಿ, ಆರೈಕೆ ಕೇಂದ್ರ ಆರಂಭಿಸಲಾಗಿದೆ. ರೋಗಿಗಳಿಗೆ ಮಲಗಲು ಉತ್ತಮ ಹಾಸಿಗೆ, ದಿಂಬು, ಬ್ರಷ್, ಪೇಸ್ಟ್, ಸೋಪು ಉಚಿತವಾಗಿ ನೀಡಲಾಗುವುದು. ಬೆಳಗ್ಗೆ ತಿಂಡಿ, ಮಧ್ಯಾಹ್ನ, ರಾತ್ರಿ ಊಟ ನೀಡಲಾಗುವುದು. ಹಣ್ಣು ಹಂಪಲು ಒದಗಿಸಲಾಗುವುದು. 24 ಗಂಟೆಯೂ ಬಿಸಿನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ರೋಗ ಲಕ್ಷಣ ರಹಿತ ರೋಗಿಗಳನ್ನು ಮಾನಸಿಕವಾಗಿ ಸುಸ್ಥಿತಿಯಲ್ಲಿಡಲು ಯೋಗ, ಧ್ಯಾನ ಹಾಗೂ ಭಜನೆ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮೆಟ್ರೋ ಆಸ್ಪತ್ರೆಯ ತಂಡ 6 ಗಂಟೆಗೊಂದು ಪಾಳಿಯಂತೆ ಇಲ್ಲಿನ ಸಂಪೂರ್ಣ ವ್ಯವಸ್ಥೆ ನೋಡಿಕೊಳ್ಳಲಿದೆ. ಆಸ್ಪತ್ರೆಯ ನುರಿತ ವೈದ್ಯರು, ನರ್ಸ್, ಸ್ವೀಪರ್, ಸಿಬ್ಬಂದಿ ಸೇರಿದಂತೆ ಸುಮಾರು 55 ಸಿಬ್ಬಂದಿ ಹಗಲು, ರಾತ್ರಿ ಕೆಲಸ ಮಾಡಲಿದೆ. ಮನೆಯ ವಾತಾವರಣಕ್ಕಿಂತಲೂ ಸುರಕ್ಷತೆ ಇಲ್ಲಿ ದೊರಕಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೇವಾ ಭಾರತಿ ಮುಖ್ಯಸ್ಥ ಡಾ.ರವಿಕಿರಣ್, ಈ ಆರೈಕೆ ಕೇಂದ್ರವು ಸಚಿವ ಕೆ.ಎಸ್. ಈಶ್ವರಪ್ಪ, ಕೆ.ಈ. ಕಾಂತೇಶ್‌ ಅವರ ನೇತೃತ್ವದಲ್ಲಿ ನಡೆಯಲಿದೆ. ಎರಡು ರೀತಿಯ ಸೋಂಕಿತರಿಗೆ ಇಲ್ಲಿ ಅವಕಾಶ ನೀಡಲಾಗುವುದು. ಮೇಲಂತಸ್ತು ಮತ್ತು ಕೆಳ ಅಂತಸ್ತುಗಳಲ್ಲಿ ರೋಗಿಗಳಿಗೆ ಅವಕಾಶ ನೀಡಲಾಗಿದೆ. ಕಡಿಮೆ ರೋಗ ಲಕ್ಷಣ ಇರುವ ಸೋಂಕಿತರಿಗೆ ಮೇಲಂತಸ್ತು, ಕೆಳ ಅಂತಸ್ತಿನಲ್ಲಿ ಈಗಾಗಲೇ ಚಿಕಿತ್ಸೆ ಪಡೆದು ಮನೆಗೆ ತೆರಳಿದ ಸೋಂಕಿತರಿಗೆ ಮತ್ತೆ ಲಕ್ಷಣಗಳು ಕಾಣಿಸಿಕೊಂಡರೆ ಆಮ್ಲಜನಕ ಸಹಿತ ಚಿಕಿತ್ಸೆ ನೀಡಲಾಗುವುದು. ದಾನಿಗಳು ನೀಡಿದ ಶುದ್ಧ ಆಮ್ಲಜನಕ ಪೆಟ್ಟಿಗೆಗಳ ಮೂಲಕ ಆಮ್ಲಜನಕ ಒದಗಿಸಲಾಗುವುದು ಎಂದು ಮಾಹಿತಿ ನೀಡಿದರು.

ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್‌, ಮೇ 20ರಂದು ಬೆಳಗ್ಗೆ 11ಕ್ಕೆ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಲಾಗುವುದು. ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ, ಸಚಿವ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ, ರಾಘವೇಂದ್ರ, ಆರ್‌ಎಸ್‌ಎಸ್‌ ಪ್ರಮುಖರಾದ ಪಟ್ಟಾಭಿರಾಂ, ಬಾಲಕೃಷ್ಣ ಕಿಣಿ, ಮೇಯರ್ ಸುನೀತಾ ಅಣ್ಣಪ್ಪ ಉಪಸ್ಥಿತರಿರುವರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.