ADVERTISEMENT

ಹಳಿ ತಪ್ಪಿದ ಶಾಮಿಯಾನ ವೃತ್ತಿ ಬದುಕು

ಕೊರೊನಾದಿಂದ ಕಾರ್ಮಿಕರಿಗೂ ಸಂಕಷ್ಟ l ಪ್ರತೇಕ ನಿಗಮ ಸ್ಥಾಪನೆಗೆ ಆಗ್ರಹ

ಗಣೇಶ್ ತಮ್ಮಡಿಹಳ್ಳಿ
Published 19 ಜೂನ್ 2021, 4:06 IST
Last Updated 19 ಜೂನ್ 2021, 4:06 IST
ಟಿ.ಎಸ್.ಭವಾನಿಕುಮಾರ್
ಟಿ.ಎಸ್.ಭವಾನಿಕುಮಾರ್   

ಶಿವಮೊಗ್ಗ: ಶಾಮಿಯಾನ ವ್ಯವಹಾರಸ್ಥರು ಹಾಗೂ ಕಾರ್ಮಿಕರು ಕೊರೊನಾ ಮೊದಲನೇ ಅಲೆಯಿಂದ ಚೇತರಿಸಿಕೊಳ್ಳುವ ಮೊದಲೇ ಎರಡನೇ ಅಲೆಗೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದಾರೆ.

ಶಾಮಿಯಾನ ವ್ಯವಹಾರ ನಡೆಯುವುದೇ ಫೆಬ್ರುವರಿ, ಮಾರ್ಚ್‌, ಏಪ್ರಿಲ್‌, ಮೇನಲ್ಲಿ. ಜುಲೈ, ಆಗಸ್ಟ್‌ವರೆಗೆ ಅಲ್ಪಸ್ವಲ್ಪ ವಹಿವಾಟು ಇರುತ್ತದೆ. ಕಳೆದ ವರ್ಷ ಮದುವೆ, ಗೃಹ ಪ್ರವೇಶ, ಹಬ್ಬಗಳು ಹಾಗೂ ಸಮಾರಂಭಗಳ ಸಮಯದಲ್ಲೇ ಕೊರೊನಾ ಕಾರಣ ಲಾಕ್‌ಡೌನ್‌ ಆಗಿದ್ದರಿಂದ ಶಾಮಿಯಾನ ವಹಿವಾಟು ಮೇಲೆ ಕರಿನೆರಳು ಆವರಿಸಿತ್ತು. ಈಗ ಮತ್ತೆ ಈ ವರ್ಷವೂ ಕೊರೊನಾ ಎರಡನೇ ಅಲೆ ವ್ಯಾಪಿಸಿ ಲಾಕ್‌ಡೌನ್‌ ಮಾಡಲಾಯಿತು. ಇದು ಶಾಮಿಯಾನವನ್ನೇ ನಂಬಿ ಜೀವನ ಸಾಗಿಸುತ್ತಿರುವವರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಕ್ಟೋಬರ್‌, ನವೆಂಬರ್‌ನಲ್ಲೇ ಪೆಂಡಾಲ್‌ಗೆ ಅವಶ್ಯವಾದ ಸೌಂಡ್‌ ಸಿಸ್ಟಂ, ಮೈಕ್‌ ಸಿಸ್ಟಂ, ವಿದ್ಯುತ್‌ ಆಲಂಕಾರಿಕ ಮಂಟಪ, ಆಲಂಕಾರಿಕ ಸೆಟ್‌ಗಳು, ಹೂವು, ಟೇಬಲ್‌, ಕುರ್ಚಿ, ವಾಹನ ಸೇರಿ ಇನ್ನಿತರೆ ವಸ್ತುಗಳನ್ನು ಸಾಲ–ಸೋಲ ಮಾಡಿ ಖರೀದಿಸಿ ಇಡುತ್ತಾರೆ. ಅದಕ್ಕಾಗಿ ಗೋದಾಮು ಬಾಡಿಗೆಗೆ ಪಡೆದಿರುತ್ತಾರೆ. ಈ ಬಾರಿ ಕೊರೊನಾದಿಂದಾಗಿ ಅಂಗಡಿ ಮತ್ತು ಗೋದಾಮು ಬಾಡಿಗೆ, ವಿದ್ಯುತ್‌ ಬಿಲ್‌ ತುಂಬಲು ಸಮಸ್ಯೆ ಆಗಿದೆ. ಸಂಗ್ರಹಿಸಿಟ್ಟಿದ್ದ ಸಾಮಗ್ರಿಗಳೆಲ್ಲ ಹಾಳಾಗಿ ಹೋಗಿವೆ. ಪೆಂಡಾಲ್‌ನ ಕಬ್ಬಿಣದ ಸಾಮಗ್ರಿಗಳು ತುಕ್ಕು ಹಿಡಿದಿವೆ. ಆಲಂಕಾರಿಕ ಬಟ್ಟೆಗಳು ಕಪ್ಪುಬಣ್ಣಕ್ಕೆ ತಿರುಗಿವೆ.

ADVERTISEMENT

ಕೈ ಕೊಟ್ಟ ದುಡಿಮೆ: ಕೊರೊನಾದಿಂದ ಶಾಮಿಯಾನ ಅಂಗಡಿಗಳು ಬಾಗಿಲು ಮುಚ್ಚಿವೆ. ಇದರಿಂದ ಮಾಲೀಕರಿಗೆ ಅಲ್ಪ ಪ್ರಮಾಣದಲ್ಲಿ ನಷ್ಟವಾದರೆ, ಈ ವೃತ್ತಿಯನ್ನೇ ನಂಬಿಕೊಂಡು ಜೀವನ ನಿರ್ವಹಿಸುವ ಕಾರ್ಮಿಕರ ಬದುಕೂ ಬೀದಿಗೆ ಬಿದ್ದಿದೆ. ಲಾಕ್‌ಡೌನ್‌ದಿಂದ ಶಾಮಿಯಾನದಲ್ಲಿ ಕೆಲಸ ಮಾಡುತ್ತಿದ್ದ ಡೆಕೊರೇಟರ್, ವೇದಿಕೆ ಸಜ್ಜುಗೊಳಿಸುವವರು, ಪೆಂಡಾಲ್‌ ಹಾಕುತ್ತಿದ್ದವರು, ಆಲಂಕಾರಿಕ ಮಂಟಪ ಸಿದ್ಧಪಡಿಸುತ್ತಿದ್ದವರಿಗೆ ದುಡಿಮೆ ಇಲ್ಲದೇ ಸಂಕಷ್ಟ ಎದುರಿಸುವಂತಾಗಿದೆ.

‘ಶಾಮಿಯಾನ ವೃತ್ತಿಯನ್ನೇ ನಂಬಿಕೊಂಡು ಹಲವು ವರ್ಷದಿಂದ ಜೀವನ ನಡೆಸುತ್ತಿದ್ದೇವೆ. ವರ್ಷದಲ್ಲಿ ಕೆಲ ತಿಂಗಳು ಹೊರತುಪಡಿಸಿ ಮಿಕ್ಕ ತಿಂಗಳಲ್ಲಿ ಕೆಲಸ ಸಿಗುತ್ತಿತ್ತು. ಮಗಳ ಮದುವೆಗೆ ಸಾಲ ಮಾಡಿಕೊಂಡಿದ್ದೇನೆ. ಮದುವೆ ಸಮಾರಂಭದ ಸಮಯದಲ್ಲಿ ಒಳ್ಳೆಯ ದುಡಿಮೆಯಾಗುತ್ತಿತ್ತು. ಕೆಲಸ ಸಿಕ್ಕರೆ ಕುಟುಂಬ ನಿರ್ವಹಣೆಗೆ ಅಷ್ಟೇನೂ ಸಮಸ್ಯೆ ಆಗುವುದಿಲ್ಲ. ಆದರೆ, ಈಗ ದುಡಿಮೆ ಇಲ್ಲ. ಹಾಗಾಗಿ, ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಸಾಲ ಮರುಪಾವತಿ ಮಾಡಬೇಕಿದೆ. ಈಗ ಎರಡು ತಿಂಗಳಿಂದ ಸಾಲದ ಕಂತು ಕಟ್ಟಿಲ್ಲ. ಈಗ ಒಮ್ಮೆಲೇ ಮೂರು ತಿಂಗಳ ಕಂತು ಪಾವತಿ ಮಾಡಬೇಕು. ದುಡಿಮೆಯಿಲ್ಲ. ಎ‌ಲ್ಲಿಂದ ಕಟ್ಟಬೇಕು ಎಂಬುದೇ ಚಿಂತಿಯಾಗಿದೆ’ ಎನ್ನುತ್ತಾರೆ ಶಾಮಿಯಾನ ಕಾರ್ಮಿಕ ಸುಹಾನ್.

ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯ
‘ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಹಲವು ವರ್ಷಗಳಿಂದ ಶಾಮಿಯಾನ ವೃತ್ತಿಯನ್ನೇ ಮಾಡಿಕೊಂಡು ಬಂದಿದ್ದೇವೆ. ನಾವು ಯಾವ ಇಲಾಖೆಗೆ ಒಳಪಡುತ್ತೇವೆ ಎಂಬುದೇ ಗೊತ್ತಿಲ್ಲ. ಹೀಗಾಗಿ, ನಮಗೆ ಸರ್ಕಾರದ ಯಾವ ಸೌಲಭ್ಯವೂ ಸಿಗುತ್ತಿಲ್ಲ. ಶಾಮಿಯಾನ ಕಸುಬುದಾರರಿಗೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ವೃತ್ತಿಯನ್ನು ಯಾವುದಾದರು ಇಲಾಖೆ ಅಡಿ ತರಬೇಕು. ಕೊರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳಲು ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ದೊರಕಿಸಬೇಕು’ ಎಂದು ಒತ್ತಾಯಿಸುತ್ತಾರೆ ಶಿವಮೊಗ್ಗ ಜಿಲ್ಲಾ ಶಾಮಿಯಾನ ಮತ್ತು ಲೈಟಿಂಗ್ ಡೆಕೊರೇಶನ್ ಮಾಲೀಕರ ಸಂಘದ ಕಾರ್ಯದರ್ಶಿ ಟಿ.ಎಸ್.ಭವಾನಿಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.