ADVERTISEMENT

ಕೊರೊನಾ: ಸಾರ್ವಜನಿಕ ಆಸ್ಪತ್ರೆಗಳು ಖಾಲಿ.. ಖಾಲಿ..

ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡಿದ ಜನರು

ಕುಮಾರ್ ಅಗಸನಹಳ್ಳಿ
Published 23 ಜನವರಿ 2022, 7:57 IST
Last Updated 23 ಜನವರಿ 2022, 7:57 IST
ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರ
ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರ   

ಹೊಳೆಹೊನ್ನೂರು: ಸದಾ ಜನರಿಂದ ತುಂಬಿರುತ್ತಿದ್ದ ಸಾರ್ವಜನಿಕ ಆಸ್ಪತ್ರೆಗಳು ಕೊರೊನಾ ಕಾರಣ ಸದ್ಯ ಖಾಲಿ.. ಖಾಲಿ.. ಕೊರೊನಾ ಬಗ್ಗೆ ಭಯಪಡುತ್ತಿರುವ ಜನರು ಸಾರ್ವಜನಿಕರ ಆಸ್ಪತ್ರೆಯತ್ತ ಮುಖ ಮಾಡದೇ ಖಾಸಗಿ ಕ್ಲಿನಿಕ್‌ಗಳತ್ತ ಮುಖ ಮಾಡಿದ್ದಾರೆ.

ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ರೈತರು, ಕೂಲಿ ಕಾರ್ಮಿಕರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗದೇ ಖಾಸಗಿ ಕ್ಲಿನಿಕ್‌ಗಳಿಗೆ ಹೋಗುತ್ತಿದ್ದಾರೆ. ಜನರಲ್ಲಿ ನೆಗಡಿ, ಕೆಮ್ಮು ಹಾಗೂ ಜ್ವರ ಸಾಮಾನ್ಯವಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿರುವುದರಿಂದ ಕ್ಲಿನಿಕ್‌ಗಳತ್ತ ಮುಖ ಮಾಡಿದ್ದಾರೆ.

ಕ್ಲಿನಿಕ್‌ಗಳು ಜನರಿಂದ ತುಂಬಿ ತುಳುಕುತ್ತಿದ್ದು, ಮೆಡಿಕಲ್‌ಗಳಲ್ಲಿ ಜನರು ಜ್ವರ ಹಾಗೂ ಶೀತಕ್ಕೆ ಮಾತ್ರೆ ತೆಗೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿದೆ.

ADVERTISEMENT

‘ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಕೊರೊನಾ ಎಂದು ಕ್ವಾರಂಟೈನ್‌ನಲ್ಲಿ ಹಾಕುತ್ತಾರೆ ಎನ್ನುವ ಭಯದಿಂದ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಈಗ ಚಳಿಗಾಲವಾದ್ದರಿಂದ ನೆಗಡಿ, ಕೆಮ್ಮು ಹಾಗೂ ಜ್ವರ ಸಾಮಾನ್ಯವಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಮೊದಲು ಕೊರೊನಾ ಪರೀಕ್ಷೆ ನಡೆಸಿ ನಂತರ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದಾಗಿ ಬೇಸತ್ತ ಜನರು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ’ ಎಂದು ಅಗಸನಹಳ್ಳಿ ಕೃಷ್ಣಮೂರ್ತಿ ಹೇಳಿದರು.

‘ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿದ್ದು, ಸಾರ್ವಜನಿಕರು ಹೆದರುವ ಅವಶ್ಯಕತೆ ಇಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಪರೀಕ್ಷೆಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ’ ಎನ್ನುತ್ತಾರೆ ಅರಹತೊಳಲುಗ್ರಾಮ ಪಂಚಾಯಿತಿ ಸದಸ್ಯ ಟಿ.ಎನ್. ಸಂಗನಾಥ.

*

ಜನರು ಭಯಪಡದೇ ಕೆಮ್ಮು, ಶೀತ, ಜ್ವರದ ಲಕ್ಷಣಗಳಿದ್ದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಅನಗತ್ಯವಾಗಿ ಗೊಂದಲಕ್ಕೆ ಒಳಗಾಗಬಾರದು.
-ಡಾ.ದೇವಾನಂದ,ವೈದ್ಯಾಧಿಕಾರಿ, ಹೊಳೆಹೊನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.