ADVERTISEMENT

ಹೊಸನಗರ | ಚಿನ್ನದ ಸರ ನುಂಗಿದ ಹಸು: ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2023, 16:33 IST
Last Updated 28 ನವೆಂಬರ್ 2023, 16:33 IST
ಹಸುವಿನ ಹೊಟ್ಟೆಯಲ್ಲಿದ್ದ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದ ಡಾ. ಆನಂದ್
ಹಸುವಿನ ಹೊಟ್ಟೆಯಲ್ಲಿದ್ದ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದ ಡಾ. ಆನಂದ್   

ಹೊಸನಗರ/ ಕೋಣಂದೂರು: ದೀಪಾವಳಿ ಸಂದರ್ಭದಲ್ಲಿ ಗೋಪೂಜೆಗೆ ಹಿಂಗಾರದ ಜೊತೆಗೆ ಇಟ್ಟಿದ್ದ ಚಿನ್ನದ ಸರವನ್ನು ಹಸು ನುಂಗಿದ್ದು, ಕೋಣಂದೂರು ಪಶು ವೈದ್ಯಾಧಿಕಾರಿ ಡಾ.ಆನಂದ್ ಶಸ್ತ್ರ ಚಿಕಿತ್ಸೆಯ ಮೂಲಕ ಸರ ಹೊರ ತೆಗೆಯುವ ಮೂಲಕ ಗಮನ ಸೆಳೆದಿದ್ದಾರೆ.

ಹೊಸನಗರ ತಾಲ್ಲೂಕಿನ ನಗರದ ಮತ್ತಿಮನೆ ಗ್ರಾಮದ ಶ್ಯಾಮ ಉಡುಪ ಮತ್ತು ಸತ್ಯವತಿ ಉಡುಪ ಅವರ ಹಸು ಚಿನ್ನದ ಸರವನ್ನು ನುಂಗಿತ್ತು. ಗೋಪೂಜೆಯ ಸಂದರ್ಭದಲ್ಲಿ ಪೂಜೆಗೆಂದು ಇಟ್ಟಿದ್ದ ಚಿನ್ನದ ಸರ ಕಾಣದಾದಾಗ ಕುಟುಂಬದವರು ದಿಗಿಲುಗೊಂಡಿದ್ದರು. ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು ನುಂಗಿರುವ ಅನುಮಾನವೂ ಮೂಡಿತ್ತು. ಹಸು ಮೇವು ತಿನ್ನುವುದನ್ನು ನಿಲ್ಲಿಸಿತ್ತು. ಇದನ್ನು ಗಮನಿಸಿದ ಮಾಲೀಕರು ಚಿನ್ನದ ಸರವನ್ನು ನುಂಗಿರುವ ಸಾಧ್ಯತೆ ಇದೆ ಎಂದು ಡಾ.ಆನಂದ್ ಅವರಿಗೆ ಮಾಹಿತಿ ನೀಡಿದರು.

ಆನಂದ್ ಅವರು ಭಾನುವಾರ ಹಸುವಿನ ಹೊಟ್ಟೆಯಲ್ಲಿ ತುಂಡಾಗಿದ್ದ 15 ಗ್ರಾಂ. ಚಿನ್ನದ ಸರವನ್ನು ಯಶಸ್ವಿ ಶಸ್ತ್ರ ಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ.

ADVERTISEMENT

‘ಜಾನುವಾರುಗಳ ಹೊಟ್ಟೆಯಲ್ಲಿ 4 ಭಾಗಗಳು ಇದ್ದು, ಎರಡನೆಯ ಭಾಗವಾದ ರೆಟಿಕ್ಯುಲಮ್‌ನಲ್ಲಿ ತುಂಡಾಗಿದ್ದ ಸರ ಸಿಲುಕಿಕೊಂಡಿತ್ತು. ಇದರಿಂದ ಹೊಟ್ಟೆಯಲ್ಲಿ ಗಾಯವಾಗಿ ಹಸು ಮೇವು ತಿನ್ನುವುದನ್ನು ನಿಲ್ಲಿಸಿತ್ತು. ಆದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಬೇಕಾಯಿತು.ಈಗ ಹಸು ಆರೋಗ್ಯವಾಗಿದೆ’ ಎಂದು ‘ಪ್ರಜಾವಾಣಿ’ಗೆ ಡಾ.ಆನಂದ್ ತಿಳಿಸಿದರು.

ಲೋಹದ ವಸ್ತುಗಳು ಜಾನುವಾರಗಳ ಹೊಟ್ಟೆ ಸೇರಿದರೆ ಅವುಗಳ ಜೀವಕ್ಕೆ ಸಂಚಕಾರವಾಗುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಲೋಹದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂದು ಡಾ.ಆನಂದ್ ಮನವಿ ಮಾಡಿದರು.

ಗ್ರಾಮಸ್ಥರಾದ ವಿನಾಯಕ ಉಡುಪ, ರವಿ, ಈಶ್ವರ ಹಾಗೂ ಗಣಪತಿ ಜಿ ಪಶು ಇಲಾಖೆ ಸಿಬ್ಬಂದಿಗಳು ಈ ಕಾರ್ಯಾಚರಣೆಗೆ ಸಹಕರಿಸಿದರು.

ಹಸುವಿನ ಹೊಟ್ಟೆಯಲ್ಲಿದ್ದ 15 ಗ್ರಾಂ ಚಿನ್ನದ ಸರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.