ADVERTISEMENT

ಮೇಲ್ವರ್ಗದ ಜನರ ಅನುಕೂಲಕ್ಕಾಗಿ ಧರ್ಮ ಸೃಷ್ಟಿ: ಸಾಹಿತಿ ಕವಿರಾಜ್

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2023, 13:15 IST
Last Updated 30 ಡಿಸೆಂಬರ್ 2023, 13:15 IST
ಕವಿರಾಜ್
ಕವಿರಾಜ್   

ತೀರ್ಥಹಳ್ಳಿ: ಮೇಲ್ವರ್ಗದ ಜನರ ಅನುಕೂಲಕ್ಕಾಗಿ ಧರ್ಮ ಸೃಷ್ಟಿಯಾಗಿದೆ. ಕ್ರಿಶ್ಚಿಯನ್ ಧರ್ಮದಲ್ಲಿ ವರ್ಣಬೇಧ, ಮುಸ್ಲಿಂ ಧರ್ಮದಲ್ಲಿ ಲಿಂಗಭೇದ, ಹಿಂದೂ ಧರ್ಮದಲ್ಲಿ ಜಾತಿಭೇದ ಅಸ್ಥಿತ್ವದಲ್ಲಿದೆ ಎಂದು ಚಿತ್ರ ನಿರ್ದೇಶಕ, ಸಾಹಿತಿ ಕವಿರಾಜ್ ಹೇಳಿದರು.

ಶುಕ್ರವಾರ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪಟ್ಟಣ ಪಂಚಾಯಿತಿ ಆಯೋಜಿಸಿದ್ದ ಕರ್ನಾಟಕ ಸಂಭ್ರಮ-50 ಮತ್ತು ವಿಶ್ವಮಾನವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

‘ದೇವರ ಹೆಸರಿನಲ್ಲಿ ಮೇಲ್ವರ್ಗ ದಾಸ್ಯ ಸೃಷ್ಟಿಸಿದೆ. ವಿಶ್ವದಲ್ಲಿರುವ ಯಾವ ಧರ್ಮವೂ, ಅನುಯಾಯಿಗಳು ಸತ್ಯ ಒಪ್ಪಿಲ್ಲ. ದೌರ್ಬಲ್ಯಕ್ಕೆ ಅನುಗುಣವಾಗಿ ಮನುಷ್ಯರನ್ನು ವಿಭಜಿಸಲಾಗಿದೆ. ಧರ್ಮದ ಅಮಲಿನಿಂದಲೇ ಪ್ರಪಂಚದ ವಿನಾಶವಾಗಲಿದೆ. 20ನೇ ಶತಮಾನದ ದಾರ್ಶನಿಕ ಕುವೆಂಪು ಆಶಯದ ಪಂಚಮಂತ್ರ, ಸಪ್ತಸೂತ್ರ ಆದರ್ಶ ಪಾಲಿಸಬೇಕು. ಸಂಕುಚಿತ ಮನೋಭಾವದಿಂದ ಹೊರಬರಬೇಕು’ ಎಂದು ಹೇಳಿದರು.

ADVERTISEMENT

‘ಸ್ವಾತಂತ್ರ್ಯ ಲಭಿಸಿದರೂ ದಾಸ್ಯ ಮನೋಭಾವ ಕಡಿಮೆಯಾಗಿಲ್ಲ. ಸ್ವಜನಪಕ್ಷಪಾತ, ಭ್ರಷ್ಟಾಚಾರದಿಂದ ದೇಶ ನಲುಗಿದೆ. ಇಂಗ್ಲಿಷ್ ಭಾಷೆಗೆ ಸಿಕ್ಕ ತಾಂತ್ರಿಕ ಸೌಲತ್ತು ಕನ್ನಡಕ್ಕೆ ಸಿಗಲಿಲ್ಲ. ಯುವ ಜನತೆ ಭಾಷೆಗೆ ಶಕ್ತಿ ಕೊಡುವ ಕೆಲಸ ಮಾಡಬೇಕು’ ಎಂದು ಶಾಸಕ ಆರಗ ಜ್ಞಾನೇಂದ್ರ ಸಲಹೆ ನೀಡಿದರು.

‘ಕನ್ನಡಕ್ಕೆ ಬಂದೊದಗಿದ ಸಂಕಷ್ಟ ಗಮನಿಸಿದರೆ ಭಾಷೆ ಉಳಿಯುವ ಅನುಮಾನ ಸೃಷ್ಟಿಯಾಗಿದೆ. ಹೆಚ್ಚು ಓದುವುದರಿಂದ ಸಾಹಿತ್ಯ, ಸಾಹಿತಿ ಉಳಿಯುತ್ತಾರೆ. ಗಾಂಧಿಯನ್ನು ಓದಿಕೊಂಡರೆ ಮನುಷ್ಯತ್ವ, ಮಾನವೀಯತೆ ಅರ್ಥವಾಗುತ್ತದೆ’ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಗಣಪತಿ ಮಾತನಾಡಿದರು.

ಸಿಪಿಐ ಅಶ್ವತ್ಥ ಗೌಡ, ಸದಸ್ಯರಾದ ಶಬನಮ್, ಸುಶೀಲ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ರತ್ನಾಕರ ಶೆಟ್ಟಿ, ನವೀನ್ ಬೆಟ್ಟಮಕ್ಕಿ, ಸೊಪ್ಪುಗುಡ್ಡೆ ರಾಘವೇಂದ್ರ, ಜ್ಯೋತಿ ಗಣೇಶ್, ಜ್ಯೋತಿ ಮೋಹನ್, ಮಂಜುಳಾ, ರವೀಶ್ ಭಟ್, ಮುಖ್ಯಾಧಿಕಾರಿ ಕುರಿಯಕೊಸ್ ಉಪಸ್ಥಿತರಿದ್ದರು.

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ನಗೆಹಬ್ಬ, ನೃತ್ಯಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.

ತೀರ್ಥಹಳ್ಳಿಯಲ್ಲಿ ಕರ್ನಾಟಕ ಸಂಭ್ರಮ-50 ಮತ್ತು ವಿಶ್ವಮಾನವ ದಿನಾಚರಣೆಯನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.