ADVERTISEMENT

ಕಳವು ಪ್ರಕರಣಗಳ ಹೆಚ್ಚಳ, ನಾಗರಿಕರ ಕಳವಳ

ಪ್ರಸಕ್ತ ವರ್ಷ 7 ತಿಂಗಳಲ್ಲೇ ಜಿಲ್ಲೆಯಲ್ಲಿ 370 ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 4:50 IST
Last Updated 12 ಆಗಸ್ಟ್ 2021, 4:50 IST
.
.   

ಶಿವಮೊಗ್ಗ: ಮಲೆನಾಡಿನಲ್ಲಿ ನಿರಂತರವಾಗಿ ಕಳವು ಪ್ರಕರಣಗಳು ನಡೆಯುತ್ತಿರುವುದು, ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳು ಕಾಣೆಯಾಗುತ್ತಿರುವುದು ಜನರ ಆತಂಕ ಹೆಚ್ಚಿಸಿದೆ.

2020ನೇ ಸಾಲಿನಲ್ಲಿ ನಡೆದ ಕಳವು ಪ್ರಕರಣಗಳಿಗೆ ಹೋಲಿಸಿದರೆ 2021ರಲ್ಲಿ ನಡೆದ ಕಳವು ಪ್ರಕರಣಗಳು ಕಡಿಮೆ ಇದ್ದರೂ, ಏಳು ತಿಂಗಳಲ್ಲಿ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಶಿವಮೊಗ್ಗ ನಗರದಲ್ಲೂ ವಾಹನ ಕಳವು ಪ್ರಕರಣಗಳು ಹೆಚ್ಚಾಗುತ್ತಿದೆ. ಈಚೆಗಷ್ಟೇ ಶಿವಮೊಗ್ಗ ನಗರದ ನೆಹರೂ ರಸ್ತೆಯಲ್ಲಿ ಬೆಳಿಗ್ಗೆ ವಾಹನ ನಿಲ್ಲಿಸಿ ಸಿಟಿ ಸೆಂಟರ್‌ ಮಾಲ್‌ಗೆ ಹೋಗಿದ್ದ ವ್ಯಕ್ತಿ ಹಿಂದಿರುಗಿದ ಅರ್ಧ ಗಂಟೆಯಲ್ಲಿ ವಾಹನ ನಾಪತ್ತೆಯಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌, ಮನೆ ಕಳವು, ಸರ, ಬ್ಯಾಟರಿ ಮತ್ತಿತರ ಕಳವು ಪ್ರಕರಣಗಳು ನಗರದಲ್ಲಿ ನಡೆಯುತ್ತಲೇ ಇರುತ್ತವೆ. ಕಳೆದ ವರ್ಷ ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಕಳವು ಪ್ರಕರಣಗಳು ಕಡಿಮೆಯಾಗಿದ್ದವು. ಲಾಕ್‌ಡೌನ್‌ ನಿರ್ಬಂಧಗಳ ತೆರವಿನ ನಂತರ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದವು. ಈ ವರ್ಷವೂ ಲಾಕ್‌ಡೌನ್‌ನಲ್ಲಿ ಪ್ರಕರಣ ಕಡಿಮೆ ಇದ್ದರೂ, ಮತ್ತೆ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಪೊಲೀಸರಿಗೂ ತಲೆನೋವು ತಂದಿದೆ.

ADVERTISEMENT

ನಗರದಲ್ಲಿ ವಹಿವಾಟು ಹೆಚ್ಚು. ಹಣದ ಚಲಾವಣೆಯೂ ಅಧಿಕ. ಮನೆಗಳು ಹಾಗೂ ಜನಸಂಖ್ಯೆ ಹೆಚ್ಚು ಇರುವ ಪ್ರದೇಶದಲ್ಲಿ ಆರೋಪಿಗಳು ತಮ್ಮ ಕೈ ಚಳಕ ತೋರುತ್ತಿದ್ದಾರೆ. ಈಚೆಗೆ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿದ ಬೈಕ್‌ಗಳನ್ನೂ ಕಳವು ಮಾಡಲಾಗುತ್ತಿದೆ. ಮನೆಮುಂದೆ ವಾಹನ ನಿಲ್ಲಿಸಿ ಬೆಳಿಗ್ಗೆ ಎದ್ದು ನೋಡಿದರೆ ನಾಪತ್ತೆಯಾಗಿರುತ್ತವೆ. ಕೆಲವು ಭಾಗಗಳಲ್ಲಿ ವಾಹನಗಳ ಬಾಟರಿ ಕಳವು ಮಾಡಲಾಗಿದೆ.

ಪ್ರಕರಣ ನಡೆದ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಕಳುವಾಗಿದ್ದ ಚಿನ್ನಾಭರಣ, ನಗದು, ವಾಹನ ಸೇರಿ ಇತರ ವಸ್ತುಗಳನ್ನು ಮಾಲೀಕರಿಗೆ ಹಿಂದಿರುಗಿಸಲು ಕ್ರಮ ಕೈಗೊಂಡಿದ್ದಾರೆ.

370 ಪ್ರಕರಣಗಳು ದಾಖಲು: ಪೊಲೀಸರ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ 101 ಮನೆ ಹಾಗೂ ವಾಣಿಜ್ಯ ಮಳಿಗೆ ಕಳವು, 13 ಸರಗಳವು, 30 ದರೋಡೆ ಹಾಗೂ ದ್ವಿಚಕ್ರ ವಾಹನಗಳು ಸೇರಿದಂತೆ 226 ಸಾಮಾನ್ಯ ಕಳವು ದಾಖಲಾಗಿವೆ.
7 ತಿಂಗಳ ಅವಧಿಯಲ್ಲಿ ಒಟ್ಟು ಕಳವು ಪ್ರಕರಣಗಳ ಸಂಖ್ಯೆ 370 ತಲುಪಿದೆ.

ಕೇವಲ ಏಳು ತಿಂಗಳಲ್ಲಿ ಇಷ್ಟೊಂದು ಪ್ರಕರಣಗಳು ದಾಖಲಾಗಿವೆ. ಇವು ಠಾಣೆಯಲ್ಲಿ ದಾಖಲಾದ ಪ್ರಕರಣಗಳು. ಸಣ್ಣ ಪುಟ್ಟ ಸಾಮಗ್ರಿಗಳು ಕಳುವಾದ ಬಹುತೇಕ ಪ್ರಕರಣಗಳಲ್ಲಿ ಮಾಲೀಕರು ಪೊಲೀಸರಿಗೆ ದೂರು ನೀಡಿಲ್ಲ.

ಕಳವು ಪ್ರಕರಣಗಳ ನಿಯಂತ್ರಣಕ್ಕಾಗಿ ರಾತ್ರಿ ಗಸ್ತು ಹೆಚ್ಚಿಸಲಾಗಿದೆ. ಹಳೇ ಆರೋಪಿಗಳ ಮೇಲೆ ಹೆಚ್ಚಿನ ನಿಗಾವಹಿಸಲಾಗಿದೆ.

- ಲಕ್ಷ್ಮೀ ಪ್ರಸಾದ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.