ADVERTISEMENT

ಶಿವಮೊಗ್ಗ: ತುಂಗಾ–ಭದ್ರಾ ಸಂಗಮದಲ್ಲಿ ಮೊಸಳೆ ಪ್ರತ್ಯಕ್ಷ

ಕೂಡಲಿ ಪುಣ್ಯ ಕ್ಷೇತ್ರಕ್ಕೆ ನಿತ್ಯವೂ ಭೇಟಿ ನೀಡುವ ಪ್ರವಾಸಿಗರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 8:34 IST
Last Updated 28 ನವೆಂಬರ್ 2021, 8:34 IST
ಕೂಡಲಿಯ ತುಂಗಾ, ಭದ್ರಾ ಸಂಗಮದಲ್ಲಿ ಕಾಣಿಸಿಕೊಂಡ ಮೊಸಳೆ.
ಕೂಡಲಿಯ ತುಂಗಾ, ಭದ್ರಾ ಸಂಗಮದಲ್ಲಿ ಕಾಣಿಸಿಕೊಂಡ ಮೊಸಳೆ.   

ಶಿವಮೊಗ್ಗ: ತುಂಗಾ, ಭದ್ರಾ ನದಿಗಳ ಸಂಗಮ ಕೂಡಲಿಯಲ್ಲಿ ಶನಿವಾರ ಎರಡು ಮೊಸಳೆಗಳು ಕಾಣಿಸಿಕೊಂಡಿದ್ದು, ಪುಣ್ಯ ಕ್ಷೇತ್ರಕ್ಕೆ ಬರುವ ಭಕ್ತರು ಹಾಗೂ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

ಸ್ನಾನಕ್ಕೆ ಹೋಗಿದ್ದ ಕೆಲವರಿಗೆ ಸ್ವಲ್ಪ ದೂರದಲ್ಲಿ ಮೊಸಳೆಗಳು ಸಂಚರಿಸುತ್ತಿರುವುದು ಕಾಣಿಸಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಿತ್ಯವೂ ನೂರಾರು ಜನರು ಪವಿತ್ರ ಸಂಗಮಕ್ಕೆ ಭೇಟಿ ನೀಡುತ್ತಾರೆ. ಹಲವರು ನದಿಯಲ್ಲೇ ಸ್ನಾನ ಮಾಡಿ, ಶಾರದಾಂಬೆ ಸೇರಿ ಅಲ್ಲಿನ ದೇಗುಲಗಳಲ್ಲಿ ಪೂಜೆ ನೆರವೇರಿಸುತ್ತಾರೆ. ಸ್ಥಳೀಯರು ನದಿಯಲ್ಲೇ ಬಟ್ಟೆ ತೊಳೆಯುವುದು, ಸ್ನಾನ ಮಾಡುವುದು, ದನಕರುಗಳಿಗೆ ಸ್ನಾನ ಮಾಡಿಸುತ್ತಾರೆ.

ನದಿ ತಟದ ಬಳಿ ಮೊಸಳೆಗಳು ಕಾಣಿಸಿಕೊಂಡಿರುವುದರಿಂದ ಜನರು ಭಯಭೀತರಾಗಿದ್ದಾರೆ. ವಿಷಯ ತಿಳಿದ ನಂತರ ಯಾರೂ ನದಿಗೆ ಇಳಿದಿಲ್ಲ.ಗ್ರಾಮ ಪಂಚಾಯಿತಿಗೆ ಸುದ್ದಿ ಮುಟ್ಟಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದರು.

ADVERTISEMENT

‘ನದಿಯಲ್ಲಿ ಮೊಸಳೆಗಳು ಪತ್ತೆಯಾಗಿರುವುದು ಅಪಾಯದ ಮುನ್ಸೂಚನೆ. ಈ ಕುರಿತು ಗ್ರಾಮ ಪಂಚಾಯಿತಿಗೆ ವಿಷಯ ತಿಳಿದರೂ ಜಾಗೃತಿ ಮೂಡಿಸುವ ಕೆಲಸ ಮಾಡಿಲ್ಲ. ಅರಣ್ಯ ಇಲಾಖೆ ಗಮನಕ್ಕೆ ತಂದಿಲ್ಲ. ಪುಣ್ಯಕ್ಷೇತ್ರಕ್ಕೆ ಬರುವ ಪ್ರವಾಸಿ ವಾಹನಗಳಿಂದ ಶುಲ್ಕ ವಸೂಲಿ ಮಾಡುವುದರಲ್ಲೇ ಸ್ಥಳೀಯ ಆಡಳಿತ ಕಾಲ ಕಳೆಯುತ್ತಿದೆ’ ಎಂದು ಕೂಡಲಿ ಗ್ರಾಮದ ಮುಖಂಡ ಶ್ರೀನಿವಾಸ ಅಯ್ಯರ್ ದೂರಿದರು.

ದಶಕದ ಹಿಂದೆ ಇದೇ ರೀತಿ ಭದ್ರಾವತಿ ಬಳಿ ನದಿಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ನೀರು ತುಂಬಿಕೊಳ್ಳಲು ನದಿಗೆ ಇಳಿದಿದ್ದ ಭದ್ರಾವತಿಯ ಬಾಬು ಅವರ ಮೇಲೆ ಆಕ್ರಮಣ ನಡೆಸಿತ್ತು. ತೀವ್ರ ರಕ್ತಸ್ರಾವವಾಗಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಗ ಹಲವು ತಿಂಗಳವರೆಗೆ ಜನರು ನದಿಗೆ ಇಳಿದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.