ADVERTISEMENT

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲೋತ್ಸವ ವೇದಿಕೆ

ರಾಜ್ಯಮಟ್ಟದ ಪ್ರತಿಭಾ ಕಾರಂಜಿ: ಸಚಿವ ಬಿ.ಸಿ. ನಾಗೇಶ್ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 7:01 IST
Last Updated 8 ಜನವರಿ 2023, 7:01 IST
ಶಿವಮೊಗ್ಗದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸಿದರು (ಎಡಚಿತ್ರ). ವಿದ್ಯಾರ್ಥಿನಿಯರು ಆಕರ್ಷಕ ಜನಪದ ನೃತ್ಯ ಪ್ರದರ್ಶಿಸಿದರು.
ಶಿವಮೊಗ್ಗದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವನ್ನು ಸಚಿವ ಬಿ.ಸಿ. ನಾಗೇಶ್ ಉದ್ಘಾಟಿಸಿದರು (ಎಡಚಿತ್ರ). ವಿದ್ಯಾರ್ಥಿನಿಯರು ಆಕರ್ಷಕ ಜನಪದ ನೃತ್ಯ ಪ್ರದರ್ಶಿಸಿದರು.   

ಶಿವಮೊಗ್ಗ: ‘ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ ಪ್ರೇರೇಪಿಸುವ ಹಾಗೂ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆಗಳನ್ನು ನಿರ್ಮಿಸಿಕೊಡುವ ಕಾರ್ಯ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಿಂದ ಸಾಧ್ಯವಾಗಿದೆ’ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ನಗರದಲ್ಲಿ ಶನಿವಾರ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆಲ್ಲ ದೇಸಿ ಹಾಗೂ ಪಾರಂಪರಿಕ ಕಲೆ, ಸಂಗೀತ-ನೃತ್ಯ ಹಾಗೂ ಇತರ ಸಾಂಸ್ಕೃತಿಕ ಕಲೆಗಳು ಅವನತಿಗೊಳ್ಳಬಹುದಾದ ಸಂಧಿಕಾಲದಲ್ಲಿ ಪ್ರತಿಭಾವಂತ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಶಿಕ್ಷಣ ಇಲಾಖೆಯು ಇಂತಹ ವೇದಿಕೆಗಳನ್ನು ರೂಪಿಸಿದೆ. ಇದನ್ನು ಪೋಷಿಸದಿದ್ದರೆ ದೇಶದ ಎಲ್ಲಾ ರೀತಿಯ ಕಲೆಗಳು ನಾಶಗೊಳ್ಳಬಹುದಾದ ಆತಂಕವಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಶಿಷ್ಟ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ. ಇಲ್ಲಿನ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರತಿಭಾವಂತ ಮಕ್ಕಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಅವಕಾಶವಾಗಲಿದೆ’
ಎಂದರು.

ADVERTISEMENT

ಶಾಸಕ ಡಿ.ಎಸ್. ಅರುಣ್ ಮಾತನಾಡಿ, ‘ಇಂತಹ ಸ್ಪರ್ಧೆಗಳಲ್ಲಿ ಹಿಂದೆಂದಿಗಿಂತಲೂ ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿನಿಯರ ಭಾಗವಹಿಸುವಿಕೆ ಪ್ರಮಾಣ ಹೆಚ್ಚಾಗಿದೆ. ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರುವ ಸರ್ಕಾರದ ಯೋಜನೆಗಳ ಯಶಸ್ವಿ ಅನುಷ್ಠಾನ ಮತ್ತು ಪ್ರಯತ್ನ ಫಲ ಇದಾಗಿರುವುದು ನಿಜಕ್ಕೂ ಹರ್ಷದ ಸಂಗತಿ’ ಎಂದರು.

‘ಗ್ರಾಮೀಣ ಮಕ್ಕಳು ಸಾಧಕರಾಗಿ ಹೊರಹೊಮ್ಮುತ್ತಿರುವುದು ಸಂತಸ ತಂದಿದೆ. ಸರ್ವರಿಗೂ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ದೊರೆತಾಗ ಪ್ರತಿಯೊಬ್ಬರು ಸಹಜವಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ’ ಎಂದರು.

ವಿಧಾನಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌, ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ಆರ್. ವಿಶಾಲ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ದೇಶೀಯ ವಿದ್ಯಾಸಂಸ್ಥೆ ಅಧ್ಯಕ್ಷ ಕೊಳಲೆ ರುದ್ರಪ್ಪಗೌಡ, ರಾಜ್ಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪಿ. ಮಹದೇವಯ್ಯ , ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಿ. ಸಿದ್ಧಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಎಸ್‌ಪಿ ಜಿ.ಕೆ.ಮಿಥುನ್‍ಕುಮಾರ್, ಸಿಇಒ ಎನ್.ಡಿ.ಪ್ರಕಾಶ್, ಮಂಜುನಾಥ್ ಎಚ್., ಸಿ.ಆರ್. ಪರಮೇಶ್ವರಪ್ಪ, ಬಸವರಾಜಪ್ಪ ಬಿ.ಆರ್., ಕೃಷ್ಣಪ್ಪ ಬಿ., ಎಂ.ವೈ. ಧರ್ಮಪ್ಪ, ರಾಘವೇಂದ್ರ ಸಿ.ಎಸ್., ಡಿ.ಬಿ. ರುದ್ರಪ್ಪ ಇದ್ದರು.

...........

ಎರಡು ವರ್ಷ ಹಿಂದೆ ಕೋಲಾರದಲ್ಲಿ ಈ ರೀತಿಯ ಕಾರ್ಯಕ್ರಮದಲ್ಲಿ ನಮ್ಮ ಮಕ್ಕಳು ಭಾಗವಹಿಸಿದ್ದರು. ಆದರೆ ಕೋವಿಡ್ ನಂತರ ಮಲೆನಾಡಿನಲ್ಲಿ ಈ ರೀತಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ.

ವಂದನಾ ರೈ, ಶಿಕ್ಷಕಿ, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ, ಉಡುಪಿ ಜಿಲ್ಲೆ.

............

ನೈತಿಕ ಮೌಲ್ಯಗಳ ಅಗತ್ಯತೆ, ಅಂತರ್ಜಲ ಸಂರಕ್ಷಣೆ, ಮಾತೃಭಾಷೆ ಕಲಿಕೆ ಬಗ್ಗೆ ಕಾಳಜಿ ಕಡಿಯಾಗುತ್ತಿದೆ. ಜನರಲ್ಲಿ ಅರಿವು ಮೂಡಿಸಲು ಈ ರೀತಿಯ ಕಾರ್ಯಕ್ರಮ ಸಹಾಯಕ. –ಆಧ್ಯಾ ಪಡ್ರೆ, 8ನೇ ತರಗತಿ, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ಕಾರ್ಕಳ, ಉಡುಪಿ ಜಿಲ್ಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.