ADVERTISEMENT

ಸಂಸ್ಕೃತಿ ಮರೆತರೆ ರಾಷ್ಟ್ರದ ಅವನತಿ: ಎಸ್.ರಂಜಿತ್‌

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 5:23 IST
Last Updated 2 ನವೆಂಬರ್ 2025, 5:23 IST
ತೀರ್ಥಹಳ್ಳಿಯಲ್ಲಿ ರಾಜ್ಯೋತ್ಸವದ ಅಂಗವಾಗಿ ಶನಿವಾರ ಧ್ವಜಾರೋಹಣ ನೆರವೇರಿತು 
ತೀರ್ಥಹಳ್ಳಿಯಲ್ಲಿ ರಾಜ್ಯೋತ್ಸವದ ಅಂಗವಾಗಿ ಶನಿವಾರ ಧ್ವಜಾರೋಹಣ ನೆರವೇರಿತು    

ತೀರ್ಥಹಳ್ಳಿ: ‘ಮನೆಯ ಮುಂದೆ ಬಳಕೆಯಾಗುತ್ತಿದ್ದ ರಂಗೋಲಿ ಬದಲು ಪೇಂಟ್‌ ಬಂದಿದೆ. ಮಾವಿನ ತೋರಣದ ಬದಲು ಪ್ಲಾಸ್ಟಿಕ್‌ ತೋರಣ ಬಳಕೆಯಲ್ಲಿದೆ. ಪ್ಲಾಸ್ಟಿಕ್‌ ಬಳಕೆಯಾಗುವುದರ ಜೊತೆಗೆ ಸಂಸ್ಕೃತಿ ಮರೆಯಾಗುತ್ತಿದೆ. ಇಂತಹ ಬೆಳವಣಿಗೆ ರಾಷ್ಟ್ರದ ಅವನತಿಗೆ ಕಾರಣವಾಗುತ್ತದೆ’ ಎಂದು ತಹಶೀಲ್ದಾರ್‌ ಎಸ್.ರಂಜಿತ್‌ ಅಭಿಪ್ರಾಯಪಟ್ಟರು.

ಶನಿವಾರ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ಅಳಿವಿನಂಚಿನಲ್ಲಿರುವ ಅಂಟಿಗೆ– ಪಂಟಿಗೆ, ಹುಲಿವೇಷ, ಭೂತಾರಾಧಾನೆ ಮುಂತಾದ ಕಲೆಗಳನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳಬೇಕು. ಸಂಸ್ಕೃತಿ ಹೆಚ್ಚಿದಂತೆ ನಾಡಿನ ಶೋಭೆ ಹೆಚ್ಚುತ್ತದೆ’ ಎಂದು ಹೇಳಿದರು.

ADVERTISEMENT

‘ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸವಿದೆ. ಗಂಗಾ, ಕದಂಬ, ಚೋಳ, ರಾಷ್ಟ್ರಕೂಟ, ವಿಜಯನಗರ, ಮೈಸೂರು ಹೀಗೆ ಹರಿದು ಹಂಚಿಹೋಗಿದ್ದ ಭೂ ಪ್ರದೇಶ ಅಖಂಡ ಕರ್ನಾಟಕವಾಗಿ ರೂಪುಗೊಂಡಿದೆ. ಕಾವೇರಿ ನದಿಯಿಂದ ಗೋದಾವರಿ ನದಿವರೆಗೆ ಹಬ್ಬಿದ ಕನ್ನಡ ನಾಡನ್ನು ಒಗ್ಗೂಡಿಸಲು ಅನೇಕ ಮಹನೀಯರು ಹೋರಾಟ ನಡೆಸಿದ್ದಾರೆ. ಅವರೆಲ್ಲರ ದೂರದೃಷ್ಟಿಯಿಂದ ಅಖಂಡ ಕರ್ನಾಟಕ ರಚನೆಯಾಯಿತು’ ಎಂದು ತಿಳಿಸಿದರು.

‘ಉದ್ಯೋಗಕ್ಕಾಗಿ ಇಂಗ್ಲೀಷ್‌ ವ್ಯಾಮೋಹ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಸರ್ಕಾರವೇ ₹ 1,600 ಕೋಟಿ ಅನುದಾನ ನೀಡಿ ಬೇರೆ ಮಾಧ್ಯಮಗಳ ಶಾಲೆ ಕಟ್ಟುತ್ತಿದ್ದಾರೆ. ಇವು ರಾಜ್ಯ ಸರ್ಕಾರದ ಸಿನಿಕತನ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್‌ ಉಲ್ಲಾ ಅಸಾದಿ, ಉಪಾಧ್ಯಕ್ಷೆ ಗೀತಾ ರಮೇಶ್‌, ಕರವೇ ಅಧ್ಯಕ್ಷ ಯಡೂರು ಸುರೇಂದ್ರ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎನ್.ಶೈಲಾ, ಬಿಇಒ ವೈ.ಗಣೇಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.