ADVERTISEMENT

ಸೈಕಲ್, ಸೈಕಲ್ ಪಥ ಎಲ್ಲವೂ ಮಾಯ!

ಸ್ಮಾರ್ಟ್ ಸಿಟಿ ಯೋಜನೆಯಡಿ ₹35 ಕೋಟಿಗೂ ಹೆಚ್ಚು ಹಣ ತುಂಗಾರ್ಪಣ

ವೆಂಕಟೇಶ ಜಿ.ಎಚ್.
Published 17 ನವೆಂಬರ್ 2025, 5:23 IST
Last Updated 17 ನವೆಂಬರ್ 2025, 5:23 IST
ಶಿವಮೊಗ್ಗದ ತುಂಗಾ ನದಿ ದಂಡೆಯ ಸ್ಮಾರ್ಟ್ ಸಿಟಿ ಬಯಲು ರಂಗಮಂದಿರದ ಆವರಣದಲ್ಲಿ ದೂಳು ಹಿಡಿಯುತ್ತಿರುವ ಸೈಕಲ್‌ಗಳು
ಪ್ರಜಾವಾಣಿ ಚಿತ್ರ
ಶಿವಮೊಗ್ಗದ ತುಂಗಾ ನದಿ ದಂಡೆಯ ಸ್ಮಾರ್ಟ್ ಸಿಟಿ ಬಯಲು ರಂಗಮಂದಿರದ ಆವರಣದಲ್ಲಿ ದೂಳು ಹಿಡಿಯುತ್ತಿರುವ ಸೈಕಲ್‌ಗಳು ಪ್ರಜಾವಾಣಿ ಚಿತ್ರ   

ಶಿವಮೊಗ್ಗ: ಸ್ಮಾರ್ಟ್ ಸಿಟಿ ಸಂಸ್ಥೆ ‘ಹಸಿರು ಶಿವಮೊಗ್ಗ’ ಕನಸಿನಡಿ ಆರಂಭಿಸಿದ್ದ ಸೈಕಲ್ ಯೋಜನೆ ಆರಂಭವಾದ ಎರಡೇ ವರ್ಷಗಳಲ್ಲಿ ಮುಗ್ಗರಿಸಿದೆ. ಸೈಕಲ್ ಓಡಾಟಕ್ಕೆ ಪಥ ನಿರ್ಮಿಸಲು ಖರ್ಚು ಮಾಡಿದ್ದ ₹30 ಕೋಟಿ ಹಾಗೂ ಸೈಕಲ್‌ಗಳನ್ನು ಕೊಳ್ಳಲು ಬಳಸಿದ್ದ ₹4.43 ಕೋಟಿ ಮೊತ್ತ ತುಂಗಾರ್ಪಣವಾಗಿದೆ. ವಿಶೇಷವೆಂದರೆ ಸೈಕಲ್‌ಗಳ ನಿರ್ವಹಣೆಗೆಂದು ಗುತ್ತಿಗೆದಾರರಿಗೆ ಮಾಸಿಕ ಲಕ್ಷಾಂತರ ರೂಪಾಯಿ ಹಣ ಪಾವತಿಯಾಗುತ್ತಿದೆ! 

ಹಾಳು ಬಿದ್ದಿವೆ ಸೈಕಲ್‌:

ಸೈಕಲ್ ಪಥದಲ್ಲಿ ಓಡಾಟ ಮಾಡಲು ಸ್ಮಾರ್ಟ್ ಸಿಟಿ ಸಂಸ್ಥೆ  ₹4.43 ಕೋಟಿ ವೆಚ್ಚದಲ್ಲಿ ಒಟ್ಟು 330 ಬೈಸಿಕಲ್‌ಗಳನ್ನು ಖರೀದಿಸಿತ್ತು. ಅವುಗಳನ್ನು 2023ರ ಜೂನ್‌ನಿಂದ ರಸ್ತೆಗೆ ಇಳಿಸಿತ್ತು. ಪಿಪಿಪಿ ಮಾದರಿಯಲ್ಲಿ ಯೋಜನೆ  ಅನುಷ್ಠಾನಗೊಳಿಸಿದ್ದರಿಂದ ಸೈಕಲ್ ಖರೀದಿಗೆ ಸ್ಮಾರ್ಟ್‌ಸಿಟಿ ಸಂಸ್ಥೆ ₹3.09 ಕೋಟಿ ಹಾಗೂ ಖಾಸಗಿ ಪಾಲುದಾರರು ₹1.34 ಕೋಟಿ ಹೂಡಿಕೆ ಮಾಡಿದ್ದರು.

ADVERTISEMENT

ಆದರೆ ಎರಡೇ ವರ್ಷಗಳಲ್ಲಿ ಈ ಸೈಕಲ್‌ಗಳು ಜನರ ಪ್ರೀತಿ ಕಳೆದುಕೊಂಡಿವೆ. ಅದರ ಪರಿಣಾಮ ಸಾರ್ವಜನಿಕರ ಬಳಕೆಗೆ ಲಭ್ಯವಾಗಬೇಕಿದ್ದ ಸೈಕಲ್‌ಗಳು ಶಿವಮೊಗ್ಗದ ತುಂಗಾ ನದಿ ದಂಡೆಯಲ್ಲಿನ (ರಿವರ್ ಫ್ರಂಟ್) ಸ್ಮಾರ್ಟ್ ಸಿಟಿ ಸಂಸ್ಥೆಯ ಬಯಲು ರಂಗಮಂದಿರದ ಆವರಣದಲ್ಲಿ ಹಾಳು ಬಿದ್ದಿವೆ. ಸಾರ್ವಜನಿಕರಿಂದ ಅವಗಣನೆಗ ಒಳಗಾಗಿ ಬಹಳಷ್ಟು ಸೈಕಲ್‌ಗಳು ನಿಲ್ದಾಣದಲ್ಲಿಯೇ ದೂಳು ಹಿಡಿಯುತ್ತಿವೆ. 

ಅವೈಜ್ಞಾನಿಕ ಹಾಗೂ ಯೋಜನಾಬದ್ಧವಲ್ಲದ ಅನುಷ್ಠಾನ ಕೇಂದ್ರದ ಸ್ಮಾರ್ಟ್ ಸಿಟಿ ಸಂಸ್ಥೆಯ ಅತ್ಯುತ್ತಮ ಪರಿಕಲ್ಪನೆಯೊಂದನ್ನು ಶಿವಮೊಗ್ಗದಲ್ಲಿ ಹೊಸಕಿ ಹಾಕಿದೆ ಎಂಬುದು ನಗರದ ಸೈಕಲ್ ಪ್ರಿಯರ ಅಳಲು.

ಸೈಕಲ್ ಪಥ; ತಿಂಡಿ ಅಂಗಡಿ, ಪಾರ್ಕಿಂಗ್ ಸಾಲು..

ಸೈಕಲ್‌ಗಳ ಓಡಾಟಕ್ಕೆಂದು ಪ್ರತ್ಯೇಕ ಹಾದಿ ಗುರುತಿಸಿದ್ದ ಸ್ಮಾರ್ಟ್ ಸಿಟಿ ಸಂಸ್ಥೆ ನಗರದ ವ್ಯಾಪ್ತಿಯಲ್ಲಿ ಟೈಲ್ಸ್, ಫೇವರ್ ಹಾಗೂ ಸಿಮೆಂಟ್ ಪಟ್ಟಿ ಹಾಕಿ 34 ಕಿ.ಮೀ ದೂರದ ಸುಸಜ್ಜಿತ ಪಥ ಸಿದ್ಧಪಡಿಸಿತ್ತು. ಅದಕ್ಕೆ ಈ ಮೊದಲು ಬಳಕೆಯಲ್ಲಿದ್ದ ವಾಹನ ಪಾರ್ಕಿಂಗ್ ಹಾಗೂ ಫುಟ್‌ಪಾತ್‌ನ ಜಾಗವನ್ನೇ 1.5 ಮೀಟರ್‌ನಿಂದ 2.5 ಮೀಟರ್‌ ವಿಸ್ತೀರ್ಣದ ಸೈಕಲ್‌ ಹಾದಿಯಾಗಿ ಮಾರ್ಪಾಡು ಮಾಡಿತ್ತು. ಈಗ ಬಹುತೇಕ ಕಡೆ ಬೀದಿ ಬದಿಯ ತಿಂಡಿ ಅಂಗಡಿಗಳ ಸಾಲು ಆಗಿ ಮಾರ್ಪಟ್ಟಿದೆ. ಇನ್ನೂ ಕೆಲವೆಡೆ ವಾಹನ ಪಾರ್ಕಿಂಗ್‌ಗೆ ಬಳಕೆ ಆಗುತ್ತಿದೆ. ಮುಂಜಾನೆ ಹಾಗೂ ಸಂಜೆ ಮಾತ್ರವಲ್ಲ ದಿನವಿಡೀ ತಿಂಡಿ ಅಂಗಡಿಗಳು ನಡೆಯುವುದರಿಂದ, ಅಲ್ಲಿ ವಾಹನಗಳ ನಿಲ್ಲಿಸುವುದರಿಂದ ಅದು ಸೈಕಲ್ ಪಥ ಎಂಬುದೇ ಮರೆತು ಹೋಗಿದೆ. 

ಅವೈಜ್ಞಾನಿಕವಾಗಿ ಯೋಜನೆ ಅನುಷ್ಠಾನ:

‘ಮಲೆನಾಡಿನ ಪರಂಪರೆಯ ನಗರ ಶಿವಮೊಗ್ಗ. ಇಲ್ಲಿ ಕಾರ್‌, ಬೈಕ್‌ ಇನ್ನಿತರೆ ವಾಹನಗಳ ಬಳಕೆಗಿಂತ ನಗರದ ಒಳಗೆ ಸೈಕಲ್ ಬಳಕೆ ಮಾಡುವುದು ಹೆಚ್ಚು ಸೂಕ್ತ. ಸವಾರರ ಆರೋಗ್ಯದ ಜೊತೆಗೆ ನಗರದ ಆರೋಗ್ಯಕ್ಕೂ ಹೆಚ್ಚು ಸೂಕ್ತ. ಆರೋಗ್ಯ, ಇಂಧನ ವೆಚ್ಚ ಮೊದಲಾದ ಸಂಗತಿಗಳಿಗೆ ಹೋಲಿಸಿದರೆ ಸೈಕಲ್ ಬಳಕೆಯಿಂದ ಆಗುವ ಲಾಭದ ಬಗ್ಗೆ ಮೊದಲಿಗೆ ಸ್ಮಾರ್ಟ್‌ ಸಿಟಿ ಸಂಸ್ಥೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿತ್ತು. ಅದನ್ನು ಮಾಡದೇ ಯೋಜನೆ ಆರಂಭಿಸಿದಾಗಲೇ ಇದು ವಿಫಲವಾಗಲಿದೆ ಎಂಬುದು ನಮಗೆ ಗೊತ್ತಿತ್ತು. ಈಗ ಎಲ್ಲಿ ಬಳಕೆಯಾಗುತ್ತಿವೆ ಸೈಕಲ್’ ಎಂದು ಶಿವಮೊಗ್ಗ ನಾಗರಿಕ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್ ಪ್ರಶ್ನಿಸುತ್ತಾರೆ.

‘ಕಡೆಯ ಪಕ್ಷ ಸೈಕಲ್ ಯೋಜನೆ ಆರಂಭಿಸುವ ಮುನ್ನವಾದರೂ ಸ್ಮಾರ್ಟ್ ಸಿಟಿ ಸಂಸ್ಥೆಯವರು ನಗರದಲ್ಲಿ ಅಧ್ಯಯನ ನಡೆಸಿ ಸಾಧಕ–ಬಾಧಕಗಳ ಅರಿತು ಅನುಷ್ಠಾನಕ್ಕೆ ಮುಂದಾಗಿದ್ದರೆ ಸಾರ್ವಜನಿಕರ ಹಣ ಹೀಗೆ ಪೋಲಾಗುತ್ತಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸು‌ತ್ತಾರೆ.

‘ಶಿವಮೊಗ್ಗ ನಗರ ಮೊದಲೇ ವಾಹನ ಪಾರ್ಕಿಂಗ್ ಸಮಸ್ಯೆ ಎದುರಿಸುತ್ತಿದೆ. ಆದರೆ ಪಾರ್ಕಿಂಗ್ ಸ್ಥಳವನ್ನೇ ಸೈಕಲ್‌ಗೆ ಹಾದಿ ಮಾಡಿರುವುದು ಅವೈಜ್ಞಾನಿಕ. ಅಲ್ಲಿ ಟೈಲ್ಸ್ ಕೂರಿಸಿ ಅಷ್ಟೆಲ್ಲಾ ಹಣ ಸುರಿಯುವ ಬದಲು ರಸ್ತೆಗೆ ಗೆರೆ ಎಳೆದು ಮಾರ್ಕಿಂಗ್ ಮಾಡಿ ಸೈಕಲ್ ಓಡಾಟದ ಜಾಗವಾಗಿ ಗುರುತಿಸಬಹುದಾಗಿತ್ತು’ ಎಂಬುದು ವಸಂತಕುಮಾರ್ ಅಭಿಮತ.

ದೂಳು ಹಿಡಿದು ಜೇಡ ಕಟ್ಟಿದ ಸೈಕಲ್‌ಗಳು
ಕೆ.ಮಾಯಣ್ಣಗೌಡ
ವಸಂತಕುಮಾರ್

ಸೈಕಲ್‌ ಪರಿಚಯಿಸಿದ ಆರಂಭದಲ್ಲಿ ಜನರು ಆಸಕ್ತಿ ತೋರುತ್ತಿದ್ದರು. ಈಚೆಗೆ ಸೈಕಲ್‌ಗಳ ನಿರ್ವಹಣೆ ಸರಿಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಬಳಕೆ ಮಾಡುವುದು ಕಡಿಮೆ ಆಗಿದೆ.

-ಶ್ರೀಕಾಂತ್ ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ

ಸೈಕಲ್ ಪಥಗಳ ಮೇಲಿನ ತಿಂಡಿ ಅಂಗಡಿಗಳು ವಾಹನಗಳನ್ನು ತೆರವುಗೊಳಿಸುವಂತೆ ಟ್ರಾಫಿಕ್‌ ಪೊಲೀಸರಿಗೆ ಮನವಿ ಮಾಡಿದ್ದೇವೆ. ಇದಕ್ಕಿಂತ ಹೆಚ್ಚು ಮಾಹಿತಿ ಕೊಡಲು ನನಗೆ ಅಧಿಕಾರವಿಲ್ಲ.

-ಹೊನ್ನಕುಮಾರ್ ಸ್ಮಾರ್ಟ್ ಸಿಟಿ ಸಂಸ್ಥೆ ಅಧಿಕಾರಿ

ಸೈಕಲ್‌; ಸರ್ಕಾರಿ ಶಾಲೆಗಳಿಗೆ ಕೊಡಲಿ..

‘ಸ್ಮಾರ್ಟ್‌ ಸಿಟಿ ಸಂಸ್ಥೆ ನಿರ್ಮಿಸಿರುವ ಸೈಕಲ್ ಪಥ ತಿಂಡಿ ಅಂಗಡಿಗಳಿಗೆ ಬಳಕೆಯಾಗಿ ಹಲವರ ಹೊಟ್ಟೆ ತುಂಬಿಸುತ್ತಿದೆ. ಅಷ್ಟಾದರೂ ಒಳ್ಳೆಯದೇ ಆಗಿದೆ. ಸೈಕಲ್‌ಗಳನ್ನು ನಿಲ್ಲಿಸಿ ಅವುಗಳಿಗೆ ಪ್ರತೀ ತಿಂಗಳು ನಿರ್ವಹಣೆಯ ಖರ್ಚು ತೋರಿಸುವುದನ್ನು ಸ್ಮಾರ್ಟ್ ಸಿಟಿ ಸಂಸ್ಥೆ ನಿಲ್ಲಿಸಲಿ’ ಎಂದು ವಿನೋಬ ನಗರದ ನಿವಾಸಿ ನಿವೃತ್ತ ಶಿಕ್ಷಕ ಕುಮಾರಪ್ಪ ಆಗ್ರಹಿಸುತ್ತಾರೆ. ‘ತುಂಗಾ ನದಿ ದಂಡೆಯ ಉದ್ಯಾನ ನಡಿಗೆ ಪಥದಲ್ಲಿ ಮಾತ್ರ ಕೆಲವು ಸೈಕಲ್‌ಗಳು ಬಳಕೆ ಆಗುತ್ತಿವೆ. ಅವುಗಳನ್ನು ಉಳಿಸಿಕೊಂಡು ಉಳಿದ ಸೈಕಲ್‌ಗಳನ್ನು ನಗರದೊಳಗಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ  ಕೊಟ್ಟುಬಿಡಲಿ’ ಎಂದು ಸಲಹೆ ನೀಡುತ್ತಾರೆ.

ಪಾಲಿಕೆಗೆ ಹಸ್ತಾಂತರ; ನಂತರ ಲೋಪಕ್ಕೆ ಮದ್ದು..

‘ಈ ತಿಂಗಳ ಅಂತ್ಯಕ್ಕೆ ಸೈಕಲ್‌ ಪಥ ಸೇರಿದಂತೆ ಸ್ಮಾರ್ಟ್ ಸಿಟಿ ಸಂಸ್ಥೆಯ ಯೋಜನೆಗಳು ಮಹಾನಗರ ಪಾಲಿಕೆಗೆ ಹಸ್ತಾಂತರವಾಗಲಿವೆ. ನಂತರ ಸೈಕಲ್ ಹಾಗೂ ಸೈಕಲ್ ಪಥದ ವಿಚಾರದಲ್ಲಿರುವ ತೊಡಕುಗಳನ್ನು ನಿವಾರಿಸಿ ಸರಿಪಡಿಸುವ ಕೆಲಸ ಮಾಡಲಿದ್ದೇವೆ’ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರೂ ಆದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಮಾಯಣ್ಣಗೌಡ ಹೇಳುತ್ತಾರೆ. ‘ಶಿವಮೊಗ್ಗದಲ್ಲಿ ಸೈಕಲ್ ಯೋಜನೆಗೆ ಹಿನ್ನಡೆಯಾಗುವಲ್ಲಿ ಕೆಲ ಸಾರ್ವಜನಿಕರ ಪಾಲೂ ಇದೆ. ಸೈಕಲ್ ಒಯ್ದವರಲ್ಲಿ ಕೆಲವರು ಅದರಲ್ಲಿನ ಜಿಪಿಎಸ್ ಸಾಧನವನ್ನೇ ಕದ್ದೊಯ್ದಿದ್ದಾರೆ. ಸೈಕಲ್‌ಗಳ ಮುಂದಿನ ಬುಟ್ಟಿಯನ್ನು ಬಿಚ್ಚಿಕೊಂಡು ಗುಜರಿಗೆ ಹಾಕಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. ‘ಹಸ್ತಾಂತರ ಹಾಗೂ ನಿರ್ವಹಣೆ ವಿಚಾರದಲ್ಲಿನ ಗೊಂದಲಗಳ ಕಾರಣ ಸ್ಮಾರ್ಟ್‌ ಸಿಟಿಯಿಂದ ಕಳೆದ ಎರಡು ತಿಂಗಳಿಂದ ಗುತ್ತಿಗೆದಾರರಿಗೆ ನಿರ್ವಹಣೆ ವೆಚ್ಚವನ್ನೂ ಭರಿಸಿಲ್ಲ’ ಎಂದು ಮಾಯಣ್ಣಗೌಡ ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.