ADVERTISEMENT

ಕೃಷಿ ವಿ.ವಿ. ದಿನಗೂಲಿ ನೌಕರರ ಪ್ರತಿಭಟನೆ

ಮಹಿಳೆ ತಲೆ ಮೇಲೆ ಗೇಟ್‌ ಬಿದ್ದು ಗಾಯ; ಗೌರವಯುತವಾಗಿ ನಡೆಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2023, 13:33 IST
Last Updated 3 ನವೆಂಬರ್ 2023, 13:33 IST
ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ದಿನಗೂಲಿ ನೌಕರರು ಗೌರವಯುತವಾಗಿ ನಡೆಸಿಕೊಳ್ಳಿ ಎಂದು ವಿಶ್ವವಿದ್ಯಾಲಯದ ಮುಂದೆ ಶುಕ್ರವಾರ ಪ್ರತಿಭಟನೆ ಮಾಡಿದರು
ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ದಿನಗೂಲಿ ನೌಕರರು ಗೌರವಯುತವಾಗಿ ನಡೆಸಿಕೊಳ್ಳಿ ಎಂದು ವಿಶ್ವವಿದ್ಯಾಲಯದ ಮುಂದೆ ಶುಕ್ರವಾರ ಪ್ರತಿಭಟನೆ ಮಾಡಿದರು    

ಆನಂದಪುರ: ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಎಂದು ಆಗ್ರಹಿಸಿ ಇರುವಕ್ಕಿಯಲ್ಲಿರುವ ಶಿವಪ್ಪನಾಯಕ ಕೃಷಿ ವಿಶ್ವವಿದ್ಯಾಲಯದ ದಿನಗೂಲಿ ನೌಕರರು ಪ್ರತಿಭಟನೆ ಮಾಡಿದರು.

ದಿನಗೂಲಿ ನೌಕರರು ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಕೆಲಸ ಮಾಡುವಾಗ ಕಬ್ಬಿಣದ ಗೇಟ್ ಮಹಿಳೆಯ ತಲೆ ಮೇಲೆ ಬಿದ್ದು ಗಂಭೀರವಾಗಿ ಗಾಯವಾದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ತಕ್ಷಣಕ್ಕೆ ನೀಡಿಲ್ಲ ಎಂಬುದೇ ಈ ಪ್ರತಿಭಟನೆಗೆ ಪ್ರಮುಖ ಕಾರಣವಾಗಿದೆ.

‘ನಾವು 6 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ಯಾವುದೇ ಸಮಸ್ಯೆ ಬಂದಿರಲಿಲ್ಲ. ಈಚೆಗೆ ಬಂದ ಅಧಿಕಾರಿಗಳಿಗೆ ಮೇಲ್ವಿಚಾರಕರು ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಕೆಲಸದಿಂದ ತೆಗೆದು ಹಾಕುವ ಹುನ್ನಾರ ಮಾಡುತ್ತಿದ್ದಾರೆ. ಪ್ರಶ್ನೆ ಮಾಡಿದರೆ ನಿಮ್ಮನ್ನು ಕೆಲಸದಿಂದ ತೆಗೆದುಹಾಕಿ ಬೇರೆಯವರನ್ನು ತೆಗೆದುಕೋಳ್ಳುತ್ತೇವೆ ಎಂದು ಬೆದರಿಕೆ ಹಾಕುವ ಮೂಲಕ ನಮ್ಮ ಬಾಯಿ ಮುಚ್ಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಮೊದಲು ₹ 9,000 ಸಂಬಳ ನೀಡುತ್ತಿದ್ದರು. ಈಗ ₹ 4,000 ನೀಡುತ್ತಿದ್ದಾರೆ. ಇದರಿಂದ ಕುಟುಂಬವನ್ನು ನಿಭಾಯಿಸುವುದು ಸಾಧ್ಯವೇ’ ಎಂದು ಪ್ರಶ್ನೆ ಮಾಡಿದರು.

‘ಆರೋಗ್ಯ ಸರಿ ಇಲ್ಲದ ಸಂದರ್ಭದಲ್ಲಿ ರಜೆ ಮಾಡಿದರೆ ಸಂಬಳ ಕಟ್ ಮಾಡುತ್ತಾರೆ. ಮಧ್ಯಾಹ್ನ ಊಟಕ್ಕೆ ಕೇವಲ 30 ನಿಮಿಷ ಅವಕಾಶ ನೀಡುತ್ತಾರೆ. ಕೂತು ಊಟ ಮಾಡಲು ಹಾಗೂ ನೀರಿನ ವ್ಯವಸ್ಥೆ ಇಲ್ಲ. ನಿಮ್ಮಿಂದ ಕೆಲಸವಾಗಬೇಕು. ನಿಮ್ಮ ಸಮಸ್ಯೆ ನಮಗೆ ಬೇಕಾಗಿಲ್ಲ. ಕೆಲಸ ಮಾಡುವವರು ಬಹಳ ಜನ ಅರ್ಜಿ ಹಾಕಿದ್ದಾರೆ ಭಯ ಪಡಿಸುತ್ತಿದ್ದಾರೆ’ ಆರೋಪಿಸಿದರು.

‘ಮಹಿಳೆಗೆ ತಲೆಗೆ ಪೆಟ್ಟಾಗಿರುವುದರ ಬಗ್ಗೆ ತಿಳಿಸಿದರೆ, ‘ನಿಮ್ಮ ಆರೋಗ್ಯಕ್ಕೆ ನೀವೇ ಜವಾಬ್ದಾರರು. ಅಂಬುಲೆನ್ಸ್ ಹಾಗೂ ವೈದ್ಯರ ವ್ಯವಸ್ಥೆ ನಿಮಗಾಗಿ ಇರುವುದಲ್ಲ’ ಎಂದು ಹೇಳುತ್ತಾರೆ. ಜತೆಗೆ ಮೇಲ್ವಿಚಾರಕರು ಕುಡಿದು ಬಂದು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಈ ವಿಷಯವನ್ನು ಕುಲಪತಿಗೆ ಹೇಳುವುದಕ್ಕೂ ಬಿಡುವುದಿಲ್ಲ. ನೀರು ಕುಡಿಯುವುದಕ್ಕೂ ಸಮಯ ನೀಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಣುಕಾ, ಪ್ರಮುಖರಾದ ಚೇತನ್ ರಾಜ್ ಕಣ್ಣೂರ್, ಅರುಣ್ ಗೌಡ, ರವಿಕುಮಾರ್, ಚೇತನ್, ಶರತ್ ನಾಗಪ್ಪ, ನಾರಿ ಲೋಕಪ್ಪ, ಲೋಕೇಶ್ ಇದ್ದರು.

Cut-off box - ಕೂಲಿಕಾರರ ಸಮಸ್ಯೆ ಬಗೆಹರಿಸಲಾಗುವುದು: ದುಶ್ಯಂತ್ ಕುಮಾರ್ ‘ಕೂಲಿಕಾರರ ಸಮಸ್ಯೆಗಳು ಇಲ್ಲಿಯವರೆಗೆ ಗಮನಕ್ಕೆ ಬಂದಿರಲಿಲ್ಲ. ತಲೆಗೆ ಪೆಟ್ಟು ಬಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು. ಜತೆಗೆ ಸಂಬಳ ಸಹಿತ ರಜೆ ನೀಡಲಾಗುವುದು. ಇನ್ನು ಮುಂದೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು’ ಎಂದು ಸಂಶೋಧನಾ ನಿರ್ದೇಶಕ  ದುಶ್ಯಂತ್ ಕುಮಾರ್ ಭರವಸೆ ನೀಡಿದರು. ‘ಸಂಬಳ ಹೆಚ್ಚಿಸುವ ಬಗ್ಗೆ ಕುಲಪತಿ ನೇತೃತ್ವದ ಸಮಿತಿಯಲ್ಲಿ ಚರ್ಚಿಸಿ ತಿರ್ಮಾನಿಸಲಾಗುವುದು. ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗೆ ತಕ್ಷಣವೇ ವ್ಯವಸ್ಥೆ ಕಲ್ಪಿಸಲಾಗುವುದು. ಅಂಗವಿಕಲ ಕೂಲಿಕಾರರಿಗೆ ಬದಲಿ ವ್ಯವಸ್ಥೆ ಕಲ್ಪಿಸಲಾಗುವುದು. ದೌರ್ಜನ್ಯ ಮಾಡುವವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು. ಊಟಕ್ಕೆ ಒಂದು ಗಂಟೆ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲಾಗುವುದು’ ಎಂದು ಹೇಳಿದರು. ಈ ಎಲ್ಲ ಭರವಸೆಗಳನ್ನು ನೀಡಿದ ನಂತರ ದಿನಗೂಲಿ ನೌಕರರು ಪ್ರತಿಭಟನೆ ಹಿಂಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.