ಶಿವಮೊಗ್ಗ: ‘ದಲಿತ ಸಮುದಾಯಗಳಲ್ಲಿ ಎಡಪಂಥ– ಬಲಪಂಥ ಎನ್ನುವ ತಿಕ್ಕಾಟ ಸರಿಯಲ್ಲ’ ಎಂದು ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ವಿಭಾಗೀಯ ಸಂಚಾಲಕ ಗಣಪತಿ ಗೋ.ಛಲವಾದಿ ಅಭಿಪ್ರಾಯಪಟ್ಟರು.
ಇಲ್ಲಿನ ಕಮಲಾ ನೆಹರು ಸ್ಮಾರಕ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ‘ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ’ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ದಲಿತರು ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನಮಂತ್ರಿ ಆಗಿಲ್ಲ. ನಮ್ಮಲ್ಲಿಯೇ ಜಗಳ ಹಚ್ಚುವ ಬಾಹ್ಯ ಶಕ್ತಿಗಳಿದ್ದು, ನಾವೆಲ್ಲ ಎಚ್ಚರದಿಂದ ಇರಬೇಕು. ಹೋರಾಟಗಾರರು, ಸಂಘಟಕರು ಮಾಡುವ ಕೆಲಸವನ್ನು ಸಾಹಿತ್ಯದ ಮೂಲಕ ಮಾಡಲು ಸಾಧ್ಯವಿದೆ’ ಎಂದರು.
‘ಸಮುದಾಯ ಹಾಗೂ ಮಾನವ ಹಕ್ಕುಗಳಿಗೆ ಧಕ್ಕೆಯಾದಾಗ ದಲಿತ ಸಾಹಿತ್ಯದ ಮೂಲಕ ಧ್ವನಿ ಆಗಬೇಕು. ಬೇರೆ ಸಾಹಿತ್ಯ ಪರಿಷತ್‌ಗಳಲ್ಲಿ ದಲಿತ ಸಾಹಿತಿಗಳಿಗೆ ಅವಕಾಶ ವಿರಳ. ಬಹಳಷ್ಟು ದಲಿತ ಯುವ ಸಾಹಿತಿಗಳು ಕಾವ್ಯ ರಚಿಸಿದ್ದಾರೆ. ಅವುಗಳನ್ನು ಸಾಹಿತ್ಯ ಪರಿಷತ್ ಪ್ರಕಟಿಸುವ ಕಾರ್ಯ ಮಾಡಲಿದೆ’ ಎಂದರು.
‘ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಪ್ರಾರಂಭವಾಗಿದೆ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು. ದಲಿತ ಸಾಹಿತ್ಯ ಪರಿಷತ್ ಎಂದರೆ ಅರಮನೆಯಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ನಮಗೆ ಆಲದ ಮರವಿದ್ದಂತೆ. ಇಡೀ ಜಗತ್ತಿನಲ್ಲಿ ಅಂಬೇಡ್ಕರ್ ಅವರ ಬೇರುಗಳು ಹರಡಿವೆ. ಇದನ್ನು ಅಲುಗಾಡಿಸಲು ಮನುವಾದಿಗಳಿಂದ ಆಗುವುದಿಲ್ಲ’ ಎಂದರು.
‘ಜಿಲ್ಲೆಯಲ್ಲಿ ದಲಿತ ಸಾಹಿತ್ಯಕ್ಕೆ ಸುದೀರ್ಘ ಇತಿಹಾಸವಿದೆ. ದಲಿತ ಸಂವೇದನೆ ವಚನ ಚಳವಳಿಯಿಂದಲೂ ಇದೆ. ದಲಿತ ಸಾಹಿತ್ಯ ಎನ್ನುವುದು ಅಲಕ್ಷಿತ ನೆಲೆಯಿಂದ ಹೊರಟ ಗುರಿ. ಅದರಲ್ಲಿ ನೋವು, ಸಂಕಟ, ಅವಮಾನ, ಮನುಷ್ಯನ ಮಾನವೀಯ ಆಕಾಂಕ್ಷೆಗಳಿವೆ’ ಎಂದು ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ. ಚಂದ್ರಕಿರಣ್ ಹೇಳಿದರು.
ಕುವೆಂಪು ವಿಶ್ವವಿದ್ಯಾಲಯ ಪ್ರಾಧ್ಯಾಪಕ ನಲ್ಲಿಕಟ್ಟೆ ಸಿದ್ದೇಶ್ ಅವರು ‘ದಲಿತ ಸಾಹಿತ್ಯ ನಡೆದು ಬಂದ ದಾರಿ’ ವಿಷಯ ಕುರಿತ ಉಪನ್ಯಾಸ ನೀಡಿದರು.
ಪರಿಷತ್‌ನ ಜಿಲ್ಲಾ ಘಟಕದ ಅಧ್ಯಕ್ಷ ರಘು ಆರ್.ಮಲ್ಲಣ್ಣರ್ ಅಧ್ಯಕ್ಷತೆ ವಹಿಸಿದ್ದರು. ವಿಜಯಪುರ ಆಕಾಶವಾಣಿ ಹಿರಿಯ ಉದ್ಘೋಷಕ ಎಂ.ಕೆ.ಶಿವಕುಮಾರ್, ಪ್ರಮುಖರಾದ ಪ್ರೊ.ರಾಚಪ್ಪ, ಟಿ.ಮಂಜುಳಾ, ಬಿ.ಡಿ.ಸಾವಕ್ಕನವರ್, ಎ.ಕೆ.ಅಣ್ಣಪ್ಪ, ಎಂ.ಆರ್. ರೇವಣಪ್ಪ ಮತ್ತಿತರರಿದ್ದರು.
‘ಮಾನವ ಲೋಕದ ತಲ್ಲಣ ದಲಿತ ಸಾಹಿತ್ಯದಲ್ಲಿದೆ. ಸಿದ್ದಲಿಂಗಯ್ಯ ಅವರ ಹೊಲೆ ಮಾದಿಗರ ಹಾಡಿನ ಮೂಲಕ ದಲಿತ ಸಾಹಿತ್ಯದ ಪ್ರಕಾರಕ್ಕೆ ಇಂಬು ನೀಡಿತು. ಜಿಲ್ಲೆಯ ಬಹಳಷ್ಟು ಹಳ್ಳಿಗಳಲ್ಲಿ ಪದವಿ ಪೂರೈಸಿದವರು ಇಲ್ಲ. ದಲಿತ ಸಾಹಿತ್ಯ ಜಿಲ್ಲಾ ಪರಿಷತ್ ಶಿಕ್ಷಣದ ಅರಿವು ಮೂಡಿಸಬೇಕು’ ಎಂದು ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಬಿ. ಚಂದ್ರಕಿರಣ್ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.