ಸೊರಬ: ‘ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ತಳ ಸಮುದಾಯದ ಪರವಾಗಿ ಹೋರಾಟ ಮಾಡುವುದು ಬದುಕಿನ ಅವಿಭಾಜ್ಯ ಅಂಗ’ ಎಂದು ಚಲನಚಿತ್ರ ನಟ ಚೇತನ್ ಹೇಳಿದರು.
ಪಟ್ಟಣದಲ್ಲಿ ದಲಿತ ಮುಖಂಡರು, ಸಮಾನ ಮನಸ್ಕರು ಹಾಗೂ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಸಮಾನತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸಮಾನತೆ ಎನ್ನುವುದು ಲಿಂಗದ ದೃಷ್ಟಿಯಿಂದ, ಶೈಕ್ಷಣಿಕ ಹಾಗೂ ಆರ್ಥಿಕ ದೃಷ್ಟಿಯಿಂದ ಪ್ರಮುಖವಾಗಿದೆ. ಆದರೆ, ಪ್ರಭುತ್ವವು ಅಬಲರಿಗೆ ಸಿಗದಂತೆ ನೋಡಿಕೊಂಡಿದೆ. ಈ ವಿಚಾರಧಾರೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಅಸ್ತಿತ್ವಕ್ಕೆ ಧಕ್ಕೆ ಬಂದಾಗ ಪ್ರಶ್ನೆ ಮಾಡುವ ಮನಸ್ಥಿತಿ ಬೆಳೆಸುವಂತೆ ನೋಡಿಕೊಳ್ಳುವುದು ನಮ್ಮ ಹೊಣೆಗಾರಿಕೆ ಆಗಿದೆ’ ಎಂದು ಹೇಳಿದರು.
‘ಭಾರತವು ಪ್ರತಿಯೊಬ್ಬ ಪ್ರಜೆಗೆ ಮನೆ ಇದ್ದಂತೆ. ನಾವು ಒಂದೇ ಕುಟುಂಬದ ಸದಸ್ಯರು. ಹೀಗಿರುವಾಗ ದೇಶದಲ್ಲಿನ ಆಸ್ತಿ, ಸಂಪತ್ತು ಮತ್ತು ಅಧಿಕಾರ ಸಮಾನವಾಗಿ ಹಂಚಿಕೆಯಾಗಬೇಕು. ಉಳ್ಳವರ ಪಾಲಾಗಿರುವ ಬಂಡವಾಳ ಎಲ್ಲರಿಗೂ ಸೇರಬೇಕು ಎನ್ನುವ ಕಾರಣದಿಂದ ಬಡವರ ಪರ ಮಾತನಾಡಿದರೆ, ಸಮಾನತೆ ಬಗ್ಗೆ ಪ್ರಭುತ್ವವನ್ನು ಪ್ರಶ್ನಿಸಿದರೆ ನಮ್ಮಂತಹವರಿಗೆ ನಗರದ ನಕ್ಸಲೆಟ್ ಪಟ್ಟ ಕಟ್ಟಿ ಪ್ರಕರಣ ದಾಖಲಿಸುತ್ತಾರೆ’ ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್ ಹೇಳಿದರು.
ಡಿಎಸ್ಎಸ್‌ನ ಗುರುರಾಜ್, ನಾಗಪ್ಪ ಮೇಷ್ಟ್ರು, ಬಸವರಾಜಪ್ಪ, ಮೆಹಬೂಬ್, ರೆಹಮಾನ್ ಸಾಬ್, ಶ್ರೀಕಾಂತ್ ಚಿಕ್ಕಶಕುನ, ರತ್ನಮ್ಮ, ಶೇಖರಮ್ಮ, ರುದ್ರಪ್ಪ, ನಾಗರಾಜ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.