ADVERTISEMENT

ಡ್ಯಾಂ ಸಂತ್ರಸ್ತರನ್ನು ಎಲ್ಲಾ ಸರ್ಕಾರಗಳು ಕಡೆಗಣಿಸಿದ್ದವು: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 6:25 IST
Last Updated 13 ಜುಲೈ 2025, 6:25 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ತೀರ್ಥಹಳ್ಳಿ: ‘ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿ ಸಾಕಷ್ಟು ಡ್ಯಾಂಗಳು ನಿರ್ಮಾಣವಾಗಿದೆ. ಅದರಿಂದ ಸಂತ್ರಸ್ತರಾದ ಸ್ಥಳೀಯರ ಬೇಡಿಕೆಗಳನ್ನು ಹಿಂದಿನ ಎಲ್ಲಾ ಸರ್ಕಾರಗಳು ಕಡೆಗಣಿಸಿದ್ದವು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶ್ರಮದ ಫಲವಾಗಿ ಸಿಂಗದೂರು ಸೇತುವೆ ಕನಸು ನನಸಾಗಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಶಾಸಕರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಲಾಶಯವೆಂದರೆ ಕೇವಲ ವಿದ್ಯುತ್‌, ನೀರಾವರಿ, ನೀರು ನಿಲ್ಲಿಸುವ ಸ್ಥಳವಾಗಿ ಮಾತ್ರ ಸರ್ಕಾರಗಳು ಪರಿಗಣಿಸಿತ್ತು. ಅದರಿಂದ ಸಂತ್ರಸ್ತರಾಗುವವರಿಗೆ ಪುನರ್ವಸತಿ ನೀಡಬೇಕೆಂಬ ಕೃತಜ್ಞತಾ ಭಾವನೆ ಇಟ್ಟುಕೊಂಡಿರಲಿಲ್ಲ. ಕಳೆದ 50 ವರ್ಷಗಳ ಸತತ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’ ಎಂದರು.

‘ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಸಿಗಂದೂರು ಸೇತುವೆಗೆ ₹ 100 ಕೋಟಿ ಅನುದಾನ ಮೀಸಲಿಟ್ಟಿದ್ದರು. ಆಗ ಹಣ ಕಡಿಮೆಯಾಗಿತ್ತು. ಪುನಃ ಸಂಸದರಾದ ನಂತರ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಸೇತುವೆಗೆ ಅನುಮೋದನೆ ಪಡೆದರು. ನಂತರ ಸಂಸದ ಬಿ.ವೈ. ರಾಘವೇಂದ್ರ ಅವರ ನಿರಂತರ ಪ್ರಯತ್ನದಿಂದ ಸೇತುವೆ ಲೋಕಾರ್ಪಣೆಗೆ ಸಿದ್ಧವಾಗಿದೆ’ ಎಂದು ತಿಳಿಸಿದರು. 

ADVERTISEMENT

ಶರಾವತಿ ಮುಳುಗಡೆ ಸಂತ್ರಸ್ತರ ಕುಟುಂಬಗಳಿಗೂ ಅವರ ಹಕ್ಕು ಕೊಡಿಸುವ ಪ್ರಯತ್ನ ನಡೆಯುತ್ತಿದೆ. ಶೀಘ್ರವೆ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಲಿದೆ. ವರಾಹಿ ಮುಳುಗಡೆ ವ್ಯಾಪ್ತಿಯ ಕೊರನಕೋಟೆ, ದೊಡ್ಡಿನಬೈಲು ಗ್ರಾಮವನ್ನು ತೀರ್ಥಹಳ್ಳಿಗೆ ಸೇರ್ಪಡೆ ಮಾಡುವ ಪ್ರಯತ್ನ ಹಿಂದಿನಿಂದಲೂ ನಡೆಯುತ್ತಿದೆ. ಹೊಸನಗರ ತಾಲ್ಲೂಕು ವ್ಯಾಪ್ತಿಯ ದೃಷ್ಟಿಯಿಂದ ಯಡೂರು, ಸುಳುಗೋಡು ಗ್ರಾಮ ಪಂಚಾಯಿತಿ ತೀರ್ಥಹಳ್ಳಿಗೆ ಸೇರುತ್ತಿಲ್ಲ. ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಎಲ್ಲರು ಭಾಗವಹಿಸುವಂತೆ ಕೋರಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಸಂದೇಶ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್‌ ಕುಕ್ಕೆ, ತಾಲ್ಲೂಕು ಅಧ್ಯಕ್ಷ ಸಂತೋಷ್‌ ದೇವಾಡಿಗ, ಪ್ರಮುಖರಾದ ಪ್ರಮೋದ್‌ ಪೂಜಾರಿ, ಸಾತ್ವಿಕ್‌, ಅತೀಥ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.