ADVERTISEMENT

ಹುಣಸೋಡು ಸ್ಫೋಟದ ಹಾನಿ; ಪರಿಹಾರಕ್ಕೆ ಸಂತ್ರಸ್ತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 11:38 IST
Last Updated 29 ಸೆಪ್ಟೆಂಬರ್ 2021, 11:38 IST
ಶಿವಮೊಗ್ಗದಲ್ಲಿ ಬುಧವಾರ ಹುಣಸೋಡು ಸ್ಫೋಟದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಹುಣಸೋಡು ಸಂತ್ರಸ್ತರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಬುಧವಾರ ಹುಣಸೋಡು ಸ್ಫೋಟದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಹುಣಸೋಡು ಸಂತ್ರಸ್ತರು ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಹುಣಸೋಡು ಸ್ಫೋಟದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು. ಪ್ರಕರಣದ ತನಿಖೆ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ನೇತೃತ್ವದಲ್ಲಿ ಹುಣಸೋಡು ಸಂತ್ರಸ್ತರು ಬುಧವಾರ ಪಾದಯಾತ್ರೆ ನಡೆಸಿದರು.

ಶಿವಮೊಗ್ಗ ನಗರದ ಹೊರವಲಯದ ಹುಣಸೋಡು ಬಳಿ 2021ರ ಜವರಿ 21ರಂದು ರಾತ್ರಿ ಕಲ್ಲುಕ್ವಾರೆಗಳಿಗೆ ಪೂರೈಸಲು ತಂದಿದ್ದ ಸಿಡಿಮದ್ದುಗಳು ಸ್ಫೋಟಗೊಂಡು 6 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಶಿವಮೊಗ್ಗ ಜಿಲ್ಲೆ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಲ್ಲೂ ಸಹ ಭೂಕಂಪದ ಅನುಭವವಾಗಿತ್ತು. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಗೆಜ್ಜೇನಹಳ್ಳಿ, ಹನುಮಂತ ನಗರ, ಅಬ್ಬಲಗೆರೆ, ಮೋಜಪ್ಪ ಹೊಸೂರು, ಬಸವನಗಂಗೂರು, ಚನ್ನಮುಂಬಾಪುರ, ಬೊಮ್ಮನಕಟ್ಟೆ, ಕಲ್ಲಗಂಗೂರು ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳ ಮನೆಗಳ ಗೋಡೆಗಳು ಬಿರುಕುಬಿಟ್ಟಿದ್ದವು. ಕೆಲವು ಮನೆಗಳ ಮೇಲ್ಚಾವಣಿ, ಟಿ.ವಿಗಳು ಎಲೆಕ್ಟ್ರಾನಿಕ್ ಉಪಕರಣಗಳು ಹಾನಿಗೊಳಗಾಗಿವೆ. ಕೆಲವು ಗ್ರಾಮಸ್ಥರ ಕಿವಿ ತಮಟೆಗಳಿಗೆ ಧಕ್ಕೆಯಾಗಿವೆ. ಆದರೆ, ಯಾರಿಗೂ ಇದುವರೆಗೆ ಪರಿಹಾರ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಾನಿಗೊಳಗಾದ ಮನೆಗಳ ಸುಮಾರು 850 ಸಂತ್ರಸ್ತರು ಪರಿಹಾರ ಕೋರಿ ಅರ್ಜಿ ಸಲ್ಲಿಸಿ 8 ತಿಂಗಳು ಕಳೆದರೂ ಜಿಲ್ಲಾಡಳಿತ ಪರಿಹಾರ
ನೀಡಿಲ್ಲ. ಸಂತ್ರಸ್ತರು ನಿರಂತರ ಹೋರಾಟ ನಡೆಸಿದ ಪರಿಣಾಮ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆ ಪ್ರತಿಮನೆಗಳು ಕೇವಲ ಶೇ 10ರಷ್ಟು ಹಾನಿಯಾಗಿದೆ ಎಂದು ವರದಿ ನೀಡಿವೆ. ವರದಿಯ
ಪ್ರಕಾರ ಶೇ 10ರಷ್ಟು ಪರಿಹಾರವನ್ನು ಕೂಡ ನೀಡಿಲ್ಲ ಎಂದು ದೂರಿದರು.

ADVERTISEMENT

ಆರೋಪಿಗಳ ಮೊಬೈಲ್ ಕರೆ ಆಧರಿಸಿ ತನಿಖೆ ನಡೆಸಲು ಕೋರಿ ದೂರು ನೀಡಲಾಗಿದೆ. ನಿಜವಾದ ಆರೋಪಿಗಳನ್ನು
ಹೊರಗಿಟ್ಟು ಸತ್ಯಾಂಶ ಮುಚ್ಚಿಡಲಾಗಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದು ದುರ್ಬಲ ಆರೋಪ ಪಟ್ಟಿ ಸಲ್ಲಿಸಲಾಗಿದೆ ಎಂದು ಆರೋಪಿಸಿದರು.

ಪಾದಯಾತ್ರೆ ಜಿಲ್ಲಾಧಿಕಾರಿ ಕಚೇರಿ ತಲುಪಿದ ನಂತರ ವೇದಿಕೆಯ ಅಧ್ಯಕ್ಷ ಗೋ.ರಮೇಶ್‍ಗೌಡ, ಮುಖಂಡರಾದ ಸಂತೋಷ್, ದೇವೇಂದ್ರಪ್ಪ, ನಾಗರಾಜ್, ನಯನಾ, ನಿಂಗರಾಜ್, ರಾಜು ಗುಜ್ಜರ್, ಲೋಕೇಶ್, ಲಕ್ಷ್ಮಣ್, ಆಸೀಫ್, ಶಿವಣ್ಣ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.