ADVERTISEMENT

ವಿಶ್ವಾಸ ಕಳೆದುಕೊಳ್ಳಬೇಡಿ; ರೈತರಿಗೆ ಕಿವಿಮಾತು

ರೈತ ದಸರಾ ಕಾರ್ಯಕ್ರಮ: ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 3:53 IST
Last Updated 30 ಸೆಪ್ಟೆಂಬರ್ 2022, 3:53 IST
ಶಿವಮೊಗ್ಗದಲ್ಲಿ ಗುರುವಾರ ರೈತ ದಸರಾ ಕಾರ್ಯಕ್ರಮಕ್ಕೂ ಮುನ್ನ ಸೈನ್ಸ್ ಮೈದಾನದಿಂದ ಎತ್ತಿನ ಗಾಡಿ, ಟಿಲ್ಲರ್, ಟ್ರ್ಯಾಕ್ಟರ್‌ಗಳೊಂದಿಗೆ ಗುರುವಾರ ರೈತರಿಂದ ಅಕರ್ಷಕ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಸವ ಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಇದ್ದರು.
ಶಿವಮೊಗ್ಗದಲ್ಲಿ ಗುರುವಾರ ರೈತ ದಸರಾ ಕಾರ್ಯಕ್ರಮಕ್ಕೂ ಮುನ್ನ ಸೈನ್ಸ್ ಮೈದಾನದಿಂದ ಎತ್ತಿನ ಗಾಡಿ, ಟಿಲ್ಲರ್, ಟ್ರ್ಯಾಕ್ಟರ್‌ಗಳೊಂದಿಗೆ ಗುರುವಾರ ರೈತರಿಂದ ಅಕರ್ಷಕ ಜಾಥಾ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಸವ ಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಇದ್ದರು.   

ಶಿವಮೊಗ್ಗ: ಬೇಡುವ ಕೈ ರೈತರದ್ದಲ್ಲ, ಅದು ಕೊಡುವ ಕೈ. ಹೀಗಾಗಿ ಇಡೀ ರೈತ ಸಮುದಾಯ ಆತ್ಮವಿಶ್ವಾಸದಿಂದ ಮುಂದುವರಿದರೆ ಯಾವತ್ತೂ ಸೋಲು ಇರುವುದಿಲ್ಲ ಎಂದು ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಹೇಳಿದರು.

ಮಹಾನಗರ ಪಾಲಿಕೆಯಿಂದ ಗುರುವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ರೈತ ದಸರಾ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಸಂದರ್ಭದಲ್ಲಿ ರೈತರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಹವಾಮಾನ ಆಧಾರಿತವಾಗಿ ಬೆಳೆ ಬೆಳೆದರೆ ಯಾವತ್ತೂ ಅವು ಕೈ ಬಿಡುವುದಿಲ್ಲ’ ಎಂದರು.

ADVERTISEMENT

‘ಇರುವ ಭೂಮಿಯಲ್ಲಿಯೇ ಸಮಗ್ರ ಬೆಳೆ ಅಳವಡಿಸಿಕೊಳ್ಳಬೇಕು. ಒಂದಕ್ಕೊಂದು ಪೂರಕವಾಗಿರುವಂತೆ ಬೆಳೆ ಬೆಳೆಯಬೇಕು. ಅದಕ್ಕೆ ತಕ್ಕಂತೆ ಮಾರುಕಟ್ಟೆ ಕಲ್ಪಿಸಿಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಸಾಫ್ಟ್‌ವೇರ್‌ ಎಂಜಿನಿಯರ್ ಆಗಿದ್ದ ನಾನು ಕೃಷಿ ಕ್ಷೇತ್ರಕ್ಕೆ ಬಹಳ ಇಷ್ಟಪಟ್ಟು ಬಂದಿಲ್ಲ. ಕೃಷಿ ಕುಟುಂಬದ ನನ್ನ ಪತಿ ಬೆಂಗಳೂರಿಗೆ ಬರಲು ಒಲ್ಲೆ ಎಂದಿದ್ದರಿಂದಾಗಿ ನಾನೂ ಅನಿವಾರ್ಯವಾಗಿ ಅವರೊಂದಿಗೆ ಹಳ್ಳಿಯಲ್ಲಿ ಉಳಿಯಬೇಕಾಯಿತು. ಜೀವನೋಪಾಯಕ್ಕಾಗಿ ಕಲ್ಲು ಭೂಮಿಯಲ್ಲಿ ದಾಳಿಂಬೆ ಬೆಳೆ ಮಾಡಿ ಲಾಭಗಳಿಸಿದೆ. ಆದರೆ, ದಾಳಿಂಬೆ ಒಂದನ್ನೇ ನೆಚ್ಚಿಕೊಂಡಿದ್ದರಿಂದಾಗಿ ಅದು ಕೈಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬಂದಿತ್ತು’ ಎಂದರು.

‘ಆತ್ಮಹತ್ಯೆಯಂತಹ ಘಟನೆಯಿಂದ ಚೇತರಿಸಿಕೊಂಡ ಬಳಿಕ ಶ್ರೀಗಂಧ ಸೇರಿದಂತೆ ಇತರೆ ಹಣ್ಣಿನ ಬೆಳೆಗಳನ್ನು ಮಾಡಿದೆ. ಜೇನು, ಕುರಿ, ಕೋಳಿ ಸಾಕಣೆ ಆರಂಭಿಸಿದೆ. ಇವುಗಳಿಂದ ಆದಾಯದ ಮೂಲ ಹೆಚ್ಚಾಯಿತು. ವಿ.ವಿ ಪ್ರಶಸ್ತಿಗಳೂ ಕೂಡ ನನ್ನನ್ನು ಅರಸಿ ಬಂದಿವೆ. ಕೃಷಿಯಲ್ಲಿ ಕಷ್ಟವಿದೆ. ಆದರೆ, ಸುಖವೂ ಇದೆ. ಇದನ್ನು ತಿಳಿದು ಮುಂದುವರಿಯಿರಿ’ ಎಂದು ಕಿವಿಮಾತು ಹೇಳಿದರು.

ವೇದಿಕೆ ಕಾರ್ಯ ಕ್ರಮಕ್ಕೂ ಮುನ್ನ ರೈತರಿಂದ ಆಕರ್ಷಕ ರೈತ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ವೇಳೆ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್‌.ಸಿ.ಜಗದೀಶ್‌ಕೃಷಿ ಯಂತ್ರೋಪಕರಣ ಪ್ರದರ್ಶನ ಮಳಿಗೆ ಉದ್ಘಾಟಿಸಿದರು.

ಬಸವ ಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರೈತ ದಸರಾ ಸಮಿತಿ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಡಾ.ಡಿ.ನಾಗೇಂದ್ರ, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ರೈತ ಮುಖಂಡ ಕೆ.ಟಿ.ಗಂಗಾಧರ್, ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೀಶ್, ಮಂಜುಳಾ ಶಿವಣ್ಣ, ಸತ್ಯನಾರಾಯಣ ರಾಜು, ಸುವರ್ಣ ಶಂಕರ್,
ವಿಶ್ವನಾಥ್, ಸುರೇಖಾ ಮುರಳೀಧರ್ ಇದ್ದರು.

***

ನೋಡುಗರ ಕಣ್ಮನ ಸೆಳೆದ ರೈತ ಜಾಥಾ

ನೂರಾರು ರೈತರು ಎತ್ತಿನ ಗಾಡಿ, ಟಿಲ್ಲರ್, ಟ್ರ್ಯಾಕ್ಟರ್‌ಗಳೊಂದಿಗೆ ರೈತ ಜಾಥಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ರೈತರು ಆಗಮಿಸಿದ್ದರು.ಸೈನ್ಸ್ ಮೈದಾನದಿಂದ ನಡೆದ ಈ ಜಾಥಾ ಆಕರ್ಷಕವಾಗಿತ್ತು.

ಎತ್ತಿನ ಗಾಡಿ, ಟಿಲ್ಲರ್, ಟ್ರ್ಯಾಕ್ಟರ್‌ಗಳಿಗೆ ಬಗೆ ಬಗೆಯ ಸಿಂಗಾರ ಮಾಡಲಾಗಿತ್ತು. ಬಾಳೆ, ಮಾವು ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.ಹಸಿರು ಶಾಲು ಹಾಕಿಕೊಂಡ ರೈತರು ಹುಮ್ಮಸ್ಸಿನಿಂದ ಪೈಪೋಟಿಗೆ ಬಿದ್ದಂತೆ ಬಂಡಿ ಓಡಿಸಿದರು.ಎತ್ತಿನಗಾಡಿಯ ಹೋರಿಗಳಿಗೆ ಬಣ್ಣ ಬಳಿದು,ಬಲೂನು ಕಟ್ಟಿ ಸಿಂಗರಿಸಲಾಗಿತ್ತು. ರೈತ ಜಾಥಾ ನೋಡುಗರ ಕಣ್ಮನ ಸೆಳೆಯಿತು.

***

ಕೃಷಿ ಯಂತ್ರೋಪಕರಣ ಪ್ರದರ್ಶನ ಮಳಿಗೆ

ರೈತ ದಸರಾ ಅಂಗವಾಗಿ ಗುರುವಾರ ನಗರದ ಕುವೆಂಪು ರಂಗಮಂದಿರದಲ್ಲಿಕೃಷಿ ಯಂತ್ರೋಪಕರಣ ಪ್ರದರ್ಶನ ಮಳಿಗೆ ಏರ್ಪಡಿಸಲಾಗಿತ್ತು.ವಿವಿಧ ಭಾಗಗಳಿಂದ ರೈತರು ಬಹಳಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು.

ಈ ಪ್ರದರ್ಶನದಲ್ಲಿ ಯಂತ್ರೋಪಕರಣಗಳು ರಾರಾಜಿಸುತ್ತಿದ್ದವು. ಇನ್ನೊಂದೆಡೆ ಸಿರಿಧಾನ್ಯ ಸೇರಿ ಕೃಷಿ ಉತ್ಪನ್ನಗಳದ್ದೇ ಕಾರುಬಾರಾಗಿತ್ತು. ಇದೇ ವೇಳೆ ರೈತರು ಕೃಷಿ ಯಂತ್ರೋಪಕರಣ, ಸಾವಯವ ಗೊಬ್ಬರ, ಬಿತ್ತನೆ ಬೀಜದ ಬಗ್ಗೆ ಕೆಲ ಮಾಹಿತಿ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.