ADVERTISEMENT

ಹಣಗೆರೆ | ಅಭಿವೃದ್ಧಿ ಯೋಜನೆ: ಒಂದು ಎಕರೆ ಅರಣ್ಯ ಡಿನೋಟಿಫಿಕೇಷನ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 14:32 IST
Last Updated 20 ಜೂನ್ 2025, 14:32 IST
ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಧಾರ್ಮಿಕ ಕೇಂದ್ರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವೀಕ್ಷಿಸಿದರು
ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಧಾರ್ಮಿಕ ಕೇಂದ್ರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವೀಕ್ಷಿಸಿದರು   

ತೀರ್ಥಹಳ್ಳಿ: ಹಣಗೆರೆ ಭಕ್ತರು ಮತ್ತು ಸ್ಥಳೀಯರ ಅಗತ್ಯವನ್ನು ಪರಿಗಣಿಸಿ ಅಭಿವೃದ್ಧಿ ಕಾಮಗಾರಿ ರೂಪಿಸಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆ, ವಿವಿಧ ಅಭಿವೃದ್ಧಿ ಯೋಜನೆಗೆ ಒಂದು ಎಕರೆ ಅರಣ್ಯ ಪ್ರದೇಶವನ್ನು ಡಿನೋಟಿಫಿಕೇಷನ್‌ ಪ್ರಕ್ರಿಯೆಗೆ ಒಳಪಡಿಸುತ್ತೇವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭರವಸೆ ನೀಡಿದರು.

ಮುಜರಾಯಿ ಇಲಾಖೆಯ ‘ಎ’ ಗ್ರೇಡ್ ಧಾರ್ಮಿಕ ಕೇಂದ್ರಕ್ಕೆ ಒಳಪಟ್ಟಿರುವ ಹಜರತ್‌ ಸೈಯದ್‌ ಸಾದತ್‌ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ ಅವರ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ವ್ಯವಸ್ಥಾಪನ ಮಂಡಳಿ, ಗ್ರಾಮಸ್ಥರು, ಜನಪ್ರತಿನಿಧಿಗಳ ಜೊತೆ ಸಭೆ ನಡೆಸಿ ಸುಧಾರಣಾ ಕ್ರಮಗಳ ಬಗ್ಗೆ ಚರ್ಚಿಸಿದರು.

ನಿತ್ಯ ಸಾವಿರಾರು ಭಕ್ತರು ಆಗಮಿಸುವ ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ ಗಮನ ಹರಿಸುವುದು ಅಗತ್ಯ. ಸಮಗ್ರ ಅಭಿವೃದ್ಧಿಗೆ ತಕ್ಷಣ ಕ್ರಿಯಾ ಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು. ಯಾವುದೇ ರೀತಿಯ ಕಾನೂನಿನ ಅಡಚಣೆ ಉಂಟಾದರೂ ಭಕ್ತರ ಹಿತ ಕಾಪಾಡಲಾಗುತ್ತದೆ ಎಂದು ಭರವಸೆ ನೀಡಿದರು.

ADVERTISEMENT

‘ಶರಾವತಿ ಸಂತ್ರಸ್ತರ ಕುಟುಂಬಗಳು ಧೀರ್ಘಕಾಲದಿಂದ ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು. ಕೇಂದ್ರ, ರಾಜ್ಯ ಸರ್ಕಾರಕ್ಕೆ ಜಂಟಿ ಕ್ರಮ ಕೈಗೊಳ್ಳುವಂತೆ ಸುಪ್ರಿಂ ಕೋರ್ಟ್‌ಗೆ ಸೂಚನೆ ನೀಡಿದೆ. ಈ ಅವಕಾಶವನ್ನು ಭೂಹಕ್ಕು ನೀಡಲು ಬಳಸಿಕೊಳ್ಳಬೇಕು‘ ಎಂದು ಶಾಸಕ ಆರಗ ಜ್ಞಾನೇಂದ್ರ ಮನವಿ ಮಾಡಿದರು.

8 ಸಾವಿರ ಶರಾವತಿ ಸಂತ್ರಸ್ತರಿಗೆ ಇದರಿಂದ ಅನುಕೂಲವಾಗಲಿದೆ. 300 ಜನರಿಗೆ ತೊಂದರೆಯಾಗುತ್ತಿದ್ದು, ಅವರಿಗೂ ನ್ಯಾಯ ಒದಗಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.

ಹಣಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆರೆಹಳ್ಳಿ ರಾಘವೇಂದ್ರ, ಧಾರ್ಮಿಕ ಕೇಂದ್ರದ ಆಡಳಿತ ಮಂಡಳಿ ಅಧ್ಯಕ್ಷ ಕೆರೆಹಳ್ಳಿ ರಾಮಪ್ಪ, ಸದಸ್ಯರಾದ ಸುನಿಲ್‌ ಶಿರನಲ್ಲಿ, ಫಾರೂಕ್‌, ಸತ್ಯನಾರಾಯಣ, ಕುಣಜೆ ಮಂಜುನಾಥ, ಜುಲೇಕಾಬಿ, ಸುಮಾ, ಉಲ್ಲೇಶ್‌ ಪ್ರಮುಖರಾದ ಸಾಲೇಕೊಪ್ಪ ರಾಮಚಂದ್ರ, ಮುಡುಬ ರಾಘವೇಂದ್ರ, ತಹಶೀಲ್ದಾರ್‌ ರಂಜಿತ್‌ ಇದ್ದರು.

ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆ ಧಾರ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸ್ಥಳೀಯರೊಂದಿಗೆ ಚರ್ಚಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.