ADVERTISEMENT

ಕೋವಿಡ್ ಫಲಿತಾಂಶ ವೆಬ್‍ಸೈಟ್‍ನಲ್ಲಿ ಲಭ್ಯ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 16:43 IST
Last Updated 19 ನವೆಂಬರ್ 2020, 16:43 IST

ಶಿವಮೊಗ್ಗ: ಕೋವಿಡ್‌ ತಪಾಸಣಾ ಫಲಿತಾಂಶವನ್ನು ನೇರವಾಗಿ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸರ್ಕಾರದ ಮಾರ್ಗಸೂಚಿ ಪ್ರಕಾರ ಜಿಲ್ಲೆಯಲ್ಲಿ ಕಾಲೇಜುಗಳನ್ನು ಆರಂಭಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಕಾಲೇಜು ಅಥವಾ ಹಾಸ್ಟೆಲ್‍ಗೆ ಪ್ರವೇಶಿಸುವ 72 ಗಂಟೆ ಪೂರ್ವದಲ್ಲಿ ನಡೆಸಿದ ತಪಾಸಣಾ ವರದಿಯನ್ನು ಕಡ್ಡಾಯವಾಗಿ ಹಾಜರು ಪಡಿಸಬೇಕು. ತಪಾಸಣಾ ವರದಿ ಐಸಿಎಂಆರ್ ಪೋರ್ಟಲ್‍ನಲ್ಲಿ ನೋಂದಣಿ ಮಾಡಲಾಗಿರುವ ಮೊಬೈಲ್‌ಗೆ ಎಸ್‍ಎಂಎಸ್ ಮೂಲಕ ಕಳುಹಿಸಲಾಗುತ್ತಿದೆ. ಇದೇ ರೀತಿ ವರದಿಯನ್ನು https://covidwar.karnataka.gov.in/service1 ಲಾಗ್‍ಇನ್ ಆಗುವ ಮೂಲಕ ಪಡೆಯಬಹುದಾಗಿದೆ ಎಂದರು.

ADVERTISEMENT

ಕರೋನಾ ತಪಾಸಣಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಆದ್ಯತೆ ಮೇರೆಗೆ ಸ್ಯಾಂಪಲ್ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಪರೀಕ್ಷೆ ಫಲಿತಾಂಶವನ್ನು ತಕ್ಷಣ ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಎಲ್ಲಾ ಕಾಲೇಜುಗಳಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಅಂತರ ಕಾಯ್ದುಕೊಳ್ಳಬೇಕು. ಎಲ್ಲಾ ಕಾಲೇಜುಗಳಲ್ಲಿ ಒಂದು ಐಸೋಲೇಶನ್ ಕೊಠಡಿ ಸಜ್ಜುಗೊಳಿಸಬೇಕು. ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಯನ್ನೂ ಮುಂದುವರಿಸಲು ನಿರ್ದೇಶನ ನೀಡಲಾಗಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ.ಕೆ.ಸಿ.ವೀರಭದ್ರಯ್ಯ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.