ADVERTISEMENT

ಸಾಲ ಮನ್ನಾ: ಬಿಜೆಪಿ ಮುಖಂಡರ ಸುಳ್ಳಿನ ಸರಮಾಲೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 16:17 IST
Last Updated 2 ಜನವರಿ 2019, 16:17 IST
ಮಂಜುನಾಥ ಗೌಡ
ಮಂಜುನಾಥ ಗೌಡ   

ಶಿವಮೊಗ್ಗ: ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯ ಪ್ರಯೋಜನ ಜಿಲ್ಲೆಯಲ್ಲೇ ಒಂದು ಲಕ್ಷ ರೈತರಿಗೆ ದೊರಕುತ್ತಿದೆ. ಆದರೂ, ಬಿಜೆಪಿ ನಾಯಕರು ಸುಳ್ಳುವದಂತಿ ಹಬ್ಬಿಸುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆದ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ದೂರಿದರು.

ರಾಜ್ಯ ಬಿಜೆಪಿ ಮುಖಂಡರಂತೆ ಪ್ರಧಾನಿ ಮೋದಿ ಅವರೂ ಸಾಲಮನ್ನಾ ವಿಚಾರವನ್ನು ಹಳದಿ ಕಣ್ಣಿನಿಂದ ನೋಡಿತ್ತಿದ್ದಾರೆ. ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ರಾಜ್ಯ ಸರ್ಕಾರ 800 ರೈತರ ಸಾಲ ಮನ್ನಾ ಮಾಡಿದೆ ಎಂದು ಹಸಿಸುಳ್ಳು ಹೇಳುತ್ತಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಒಂದರಲ್ಲೇ ₨ 412 ಕೋಟಿ ಮನ್ನಾ ಆಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಮಾಡಿದ ಸಾಲ ಮನ್ನಾದಿಂದ ಜಿಲ್ಲೆಯ 70 ಸಾವಿರ ರೈತರು ಪ್ರಯೋಜನ ಪಡೆದಿದ್ದರು. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿ ರೈತರ ₨ 2 ಲಕ್ಷದವರೆಗಿನ ಸಾಲ ಮನ್ನಾ ಮಾಡಿದ್ದಾರೆ. ₨ 265 ಕೋಟಿ ಡಿಸಿಸಿ ಬ್ಯಾಂಕ್‌ಗೆ ಸಂದಾಯವಾಗಿದೆ. ಎಲ್ಲ ಹಣ ರೈತರ ಖಾತೆಗೆ ಜಮೆ ಆಗಿದೆ. ಸಮ್ಮಿಶ್ರ ಸರ್ಕಾರದ ಸಾಲಮನ್ನಾದ ಹಣ ಹಂತಹಂತವಾಗಿ ಬಿಡುಗಡೆಯಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ವಾಣಿಜ್ಯ ಬ್ಯಾಂಕ್‌ಗಳಲ್ಲಿ ಜಿಲ್ಲೆಯ ರೈತರು ಮಾಡಿದ್ದ ಸಾಲವೂ ಮನ್ನಾ ಆಗುತ್ತಿದೆ. ₨ 938 ಕೋಟಿ ಬಿಡುಗಡೆ ಮಾಡಲಾಗುತ್ತಿದೆ. 70 ಸಾವಿರ ರೈತರು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ, ವಾಣಿಜ್ಯ ಬ್ಯಾಂಕ್‌ಗಳು ಸಹಕರಿಸುತ್ತಿಲ್ಲ. ರೈತರ ಹಿತಾಸಕ್ತಿಗೆ ಸ್ಪಂದಿಸುತ್ತಿಲ್ಲ. ಈ ವಿಷಯ ಬಿಜೆಪಿ ಮುಖಂಡರಿಗೂ ಗೊತ್ತಿದೆ. ಇಂತಹ ವಿಷಯಗಳಲ್ಲಿ ಸಹಕಾರ ನೀಡಬೇಕಾದ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ವದಂತಿ ಹಬ್ಬಿಸುತ್ತಿದ್ದಾರೆ ಎಂದು ಛೇಡಿಸಿದರು.

ರಾಜ್ಯ ಸರ್ಕಾರ ಕೈಗೊಳ್ಳುವ ಯಾವ ಅಭಿವೃದ್ಧಿ ಕಾರ್ಯವನ್ನೂ ಸರ್ಕಾರ ಸಹಿಸಿಕೊಳ್ಳುತ್ತಿಲ್ಲ. ಸರ್ಕಾರ ಕೆಡವಲು ಇಡೀ ಸಮಯ ವ್ಯಯಿಸುತ್ತಿದ್ದಾರೆ. ಸರ್ಕಾರ ಬೀಲುತ್ತದೆ ಎಂದು ಹಗಲು ಕನಸು ಕಾಣುತ್ತಿದ್ದಾರೆ. ಗಡುವು ಕೊಡುತ್ತಾ ಹೋಗುತ್ತಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ನಾಗರಾಜ ಕಂಕಾರಿ, ಜೆಡಿಎಸ್‌ ಮುಖಂಡರಾದ ರಾಮಕೃಷ್ಣ, ಜಗದೀಶ್, ತ್ಯಾಗರಾಜ್, ಆನಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.