ಭದ್ರಾವತಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕಂದಾಯ ಇಲಾಖೆ, ನಗರಸಭೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಪಿ.ಡಿ.ಓಗಳಿಗೆ ಏರ್ಪಡಿಸಲಾಗಿದ್ದ ವಿಪತ್ತು ನಿರ್ವಹಣಾ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಪರುಸಪ್ಪ ಕುರುಬರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ: ‘ತಾಲ್ಲೂಕಿನಾದ್ಯಂತ ಮಳೆ ಪ್ರಮಾಣ ಹೆಚ್ಚಾಗುತ್ತಿದ್ದು, ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಆದೇಶದ ಮೇರೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಿಕೊಂಡು ಅಗತ್ಯ ಮಾಹಿತಿ ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು’ ಎಂದು ತಹಶೀಲ್ದಾರ್ ಪರುಸಪ್ಪ ಕುರುಬರ ಸೂಚಿಸಿದರು.
ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಂದಾಯ ಇಲಾಖೆ, ನಗರಸಭೆ ಸೇರಿ ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಮತ್ತು ಪಿಡಿಒಗಳಿಗೆ ಏರ್ಪಡಿಸಿದ್ದ ವಿಪತ್ತು ನಿರ್ವಹಣಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅಧಿಕಾರಿಗಳು ವಿಪತ್ತು ನಿರ್ವಹಣಾ ಸಮಿತಿ ರಚಿಸಿಕೊಂಡು ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳು, ಸರ್ಕಾರಿ ಶಾಲೆಗಳು, ವಿದ್ಯಾರ್ಥಿ ನಿಲಯ ಮುಂತಾದವುಗಳನ್ನು ಗುರುತಿಸಿ ಆಗಬಹುದಾದ ತೊಂದರೆಗಳನ್ನು ಮೇಲಧಿಕಾರಿಗಳಿಗೆ ತಿಳಿಸಬೇಕು’ ಎಂದು ತಿಳಿಸಿದರು.
‘ಮಳೆ– ಗಾಳಿಗೆ ಮರ ಹಾಗೂ ಮರದ ರೆಂಬೆ– ಕೊಂಬೆಗಳು ಬೀಳುವಂತಿದ್ದರೆ ಅವುಗಳ ಮಾಹಿತಿಯನ್ನು ಅರಣ್ಯ ಇಲಾಖೆ, ವಿದ್ಯುತ್ ಇಲಾಖೆಗೆ, ರಸ್ತೆ ಮುಚ್ಚಿ ಹೋಗುವ ಅಥವಾ ಸೇತುವೆ ಮುಳುಗುವ ಸಾಧ್ಯತೆ ಕಂಡು ಬಂದರೆ ಹಾಗೂ ಮಳೆ ಕಾರಣ ಕೆರೆ ಕೋಡಿ ಒಡೆಯುವ ಸಾಧ್ಯತೆ ಇರುವುದು ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಹೇಳಿದರು.
‘ಮಾಹಿತಿ ನೀಡುವಲ್ಲಿ ವಿಫಲರಾದರೆ ಅಥವಾ ತಪ್ಪು ಮಾಹಿತಿ ನೀಡಿದರೆ ಅಧಿಕಾರಿಗಳು, ಸಿಬ್ಬಂದಿಯನ್ನು ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಎಲ್ಲೆಡೆ ಡೆಂಗಿ, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ತಾಲ್ಲೂಕಿನಲ್ಲಿ ರೋಗ ಉಲ್ಬಣಿಸದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಟೆಸ್ಟಿಂಗ್ ಸೇರಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಸಂಬಂಧ ನಾಗರಿಕರು ತಕ್ಷಣ ತಾಲ್ಲೂಕು ಕಚೇರಿಯಲ್ಲಿ ತೆರೆಯಲಾಗಿರುವ ಸಹಾಯವಾಣಿ ಕೇಂದ್ರಕ್ಕೆ ಸಂಪರ್ಕಿಸಬಹುದಾಗಿದೆ’ ಎಂದು ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಎಂ.ಗಂಗಣ್ಣ ಮಾತನಾಡಿ, ‘ಕಳೆದ ಬಾರಿ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಚಿಸಿಕೊಂಡಂತೆ ವಿಪತ್ತು ನಿರ್ವಹಣಾ ತಂಡ ರಚಿಸಿಕೊಳ್ಳಬೇಕು. ತಾಲ್ಲೂಕಿನಲ್ಲಿರುವ ಸರ್ಕಾರಿ ಶಾಲೆಗಳಿಗೆ ಮಳೆಯಿಂದ ಸಮಸ್ಯೆಗಳು ಎದುರಾದಲ್ಲಿ ಅದೇ ಶಾಲೆಗಳಲ್ಲಿ ಪಾಠ ಪ್ರವಚನ ಮುಂದುವರಿಸುವ ಅಥವಾ ಪರ್ಯಾಯ ವ್ಯವಸ್ಥೆ ಕೈಗೊಳ್ಳುವ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ, ಪಿಡಿಒಗಳಿಗೆ ಪೂರ್ವಭಾವಿಯಾಗಿ ತಿಳಿಸಬೇಕು. ವಿಪತ್ತು ನಿರ್ವಹಣಾ ತಂಡದವರು ಆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ನೈಜತೆಯನ್ನು ಅರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಮಾತನಾಡಿ, ‘ಶಾಲೆಗಳು ಮೇ 29ರಿಂದ ಪುನರಾರಂಭಗೊಳ್ಳಲಿವೆ. ಶಾಲೆಯ ಕಟ್ಟಡ ಹಾಗೂ ಅಲ್ಲಿ ಮಳೆ ಬಂದರೆ ಆಗಬಹುದಾದ ತೊಂದರೆಗಳ ಬಗ್ಗೆ ಅರಿಯುವ ಸಲುವಾಗಿ ಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ಕರೆದು ಚರ್ಚಿಸಲಾಗುತ್ತದೆ. ಅಲ್ಲಿ ಪಡೆದ ಮಾಹಿತಿಯನ್ನು ಪಿಡಿಓಗಳಿಗೆ ತಿಳಿಸುವ ವ್ಯವಸ್ಥೆ ಮಾಡಲಾಗುವುದು’ ಎಂದರು.
ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ.ಚನ್ನಣ್ಣನವರ್ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ಪ್ರಶಾಂತ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು, ಗ್ರಾಮಲೆಕ್ಕಿಗರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.