ADVERTISEMENT

ಶರಾವತಿ ಕೊಳ್ಳದಲ್ಲಿ ತಾರತಮ್ಯ: ಕೆಪಿಸಿ ಕಚೇರಿ ಮುಂಭಾಗ ಹಾಲಪ್ಪ ಧರಣಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 5:55 IST
Last Updated 12 ಜನವರಿ 2022, 5:55 IST
ಕಾರ್ಗಲ್‌ನ ಕೆಪಿಸಿ ಮುಖ್ಯ ಎಂಜಿನಿಯರ್ ಕಚೇರಿ ಮುಂಭಾಗದಲ್ಲಿ ಶಾಸಕ ಹಾಲಪ್ಪ ಹರತಾಳು ಪ್ರತಿಭಟನೆ ನಡೆಸಿದರು.
ಕಾರ್ಗಲ್‌ನ ಕೆಪಿಸಿ ಮುಖ್ಯ ಎಂಜಿನಿಯರ್ ಕಚೇರಿ ಮುಂಭಾಗದಲ್ಲಿ ಶಾಸಕ ಹಾಲಪ್ಪ ಹರತಾಳು ಪ್ರತಿಭಟನೆ ನಡೆಸಿದರು.   

ಪ್ರಜಾವಾಣಿ ವಾರ್ತೆ

ಕಾರ್ಗಲ್: ಶರಾವತಿ ಕೊಳ್ಳದಲ್ಲಿ ರೈತರು ಮತ್ತು ಜನ ಸಾಮಾನ್ಯರ ಜೀವನದ ಪ್ರತಿನಿತ್ಯದ ಆಗು ಹೋಗುಗಳಲ್ಲಿ ತಾರತಮ್ಯವನ್ನು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಶಾಸಕ ಹಾಲಪ್ಪ ಹರತಾಳು ಆಗ್ರಹಿಸಿದರು.

ಇಲ್ಲಿನ ಕೆಪಿಸಿ ಮುಖ್ಯ ಎಂಜಿನಿ ಯರ್ ಕಚೇರಿಯ ಮುಂಭಾಗದಲ್ಲಿ ಮಂಗಳವಾರ ನಡೆದ ಧರಣಿ ಸತ್ಯಾಗ್ರಹ ದಲ್ಲಿ ಅವರು ಮಾತನಾಡಿದರು.

ADVERTISEMENT

‘ರೈತರ ಜಮೀನುಗಳಲ್ಲಿ ಪೂರೈಕೆಯಾಗುವ ನೀರು, ಕುಡಿಯುವ ನೀರು, ಕೆಪಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಭೇದ– ಭಾವವನ್ನು ಸಹಿಸಲು ಸಾಧ್ಯವಿಲ್ಲ. ನಾಡಿಗೆ ಬೆಳಕನ್ನು ನೀಡಲು ತಮ್ಮ ಸರ್ವಸ್ವವನ್ನೂ ಕಳೆದುಕೊಂಡಿರುವ ಇಲ್ಲಿನ ನಿವಾಸಿಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಕೂಡಲೇ ನಿಲ್ಲಿಸಬೇಕು’ ಎಂದು ಅವರು ಮುಖ್ಯ ಎಂಜಿನಿಯರ್ ಅವರನ್ನು ಆಗ್ರಹಿಸಿದರು.

ಸ್ಥಳದಿಂದಲೇ ಇಂಧನ ಸಚಿವ ಸುನಿಲ್ ಕುಮಾರ್ ಅವರನ್ನು ಸಂಪರ್ಕಿಸಿ ಈ ಬಗ್ಗೆ ಸೂಕ್ತವಾದ ಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿ ಅಧಿಕಾರಿಗಳ ದೌರ್ಜನ್ಯದ ವಿರುದ್ದ ನಡೆದ ಪ್ರತಿಭಟನಾ ಧರಣಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಾಸಂತಿ ರಮೇಶ್, ಉಪಾಧ್ಯಕ್ಷ ಪಿ. ಮಂಜುನಾಥ, ವಾಟೇಮಕ್ಕಿ ನಾಗರಾಜ, ಮುಖಂಡರಾದ ಟಿ. ಸುರೇಶ್, ಎಸ್.ಎಚ್. ಜಗಧೀಶ್ ಮುಂತಾದವರು ಉಪಸ್ಥಿತರಿದ್ದರು.

‘ಕೆಪಿಸಿ ವ್ಯವಸ್ಥಾಪಕ ನಿರ್ದೇಶಕರ ಆದೇಶದ ಮೇರೆಗೆ ವಡನ್ ಬೈಲು ಟನಲ್ ಸಮೀಪದಲ್ಲಿ ಸ್ಥಳೀಯ ನಿವಾಸಿ ನಿತಿನ್ ಎಂಬಾತ ಕೊರೆಯುತ್ತಿರುವ ಬಾವಿಯಿಂದ ಟನಲ್, ಸರ್ಜ್ ಟ್ಯಾಂಕ್ ಅಥವಾ ಜಲವಿದ್ಯುದಾಗರ ಮಾರ್ಗಕ್ಕೆ ತೊಂದರೆ ಆಗಬಹುದೇ ಎಂಬುದನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡಿದ್ದೇವೆ. ರೈತರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ರಾಷ್ಟ್ರೀಯ ಸಂಪತ್ತನ್ನು ಉಳಿಸುವ ಜವಾಬ್ದಾರಿ ಕೆಪಿಸಿ ಮೇಲಿದೆ. ಈ ನಿಟ್ಟಿನಲ್ಲಿ ಕರ್ತವ್ಯಪಾಲನೆ ಮಾಡಿದ್ದೇವೆ. ಈ ವಿಚಾರಗಳನ್ನು ಶಾಸಕರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಇಲಾಖಾಧಿಕಾರಿಗಳು ಮತ್ತು ಸರ್ಕಾರದ ಆದೇಶಕ್ಕೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಿದ್ದೇವೆ’ ಎಂದು ಮುಖ್ಯ ಎಂಜಿನಿಯರ್ ಎಚ್.ಸಿ. ಮಹೀಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.