ಭದ್ರಾವತಿ: ರಸ್ತೆಯುದ್ದಕ್ಕೂ ಕೇಸರಿ ಧ್ವಜ, ಬಂಟಿಂಗ್ಸ್, ದೇಶಭಕ್ತರ ಭಾವಚಿತ್ರಗಳ ಪ್ರದರ್ಶನ.. ಪುನೀತ್ ಚಿತ್ರಕ್ಕೂ ಬೇಡಿಕೆ, ವಾದ್ಯಮೇಳ ಸದ್ದಿನೊಂದಿಗೆ ಸಹಸ್ರಾರು ಮಂದಿಯ ಹೆಜ್ಜೆ. ಇದು ಇಲ್ಲಿನಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕಂಡುಬಂದ ದೃಶ್ಯ.
ಬೆಳಿಗ್ಗೆ 10ಕ್ಕೆ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಯಲ್ಲಿ ಸಾಗಿ ರಾತ್ರಿಯವರೆಗೂ ನಡೆಯಿತು. ದಾರಿಯುದ್ದಕ್ಕೂ ವಿವಿಧ ಸಂಘ ಸಂಸ್ಥೆಗಳು, ಆಟೊ ಚಾಲಕರ ಸಂಘ, ವಿವಿಧ ಸಂಘ ಸಂಸ್ಥೆಗಳು ಪುಲಾವ್, ಕೇಸರಿಬಾತ್ ಸೇರಿದಂತೆ ವೈವಿಧ್ಯಮಯ ತಿಂಡಿಯ ವ್ಯವಸ್ಥೆ ಮಾಡಿದ್ದರು.
ವೀರಗಾಸೆ, ಡೊಳ್ಳು ಹಾಗೂ ಕೋಲಾಟದ ತಂಡಗಳೊಂದಿಗೆ ಯುವಕರು ಧ್ವಜ ಹಿಡಿದು ಹೆಜ್ಜೆ ಹಾಕಿದರು. ಭಾರತ್ ಮಾತಾ ಕೀ ಜೈ, ಸಾವರ್ಕರ್ ಜೈ, ವಂದೇ ಮಾತರಂ... ಘೋಷಣೆಗಳು ಮೊಳಗಿದವು.
ಮೆರವಣಿಗೆಯ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್, ಸಿ.ಸಿ.ಟಿ.ವಿ. ಕ್ಯಾಮೆರಾ ಕಣ್ಗಾವಲು ಇತ್ತು.ಈ ಬಾರಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಶಾಸಕ ಬಿ.ಕೆ. ಸಂಗಮೇಶ್ವರ, ಸಂಸದ ಬಿ.ವೈ. ರಾಘವೇಂದ್ರ, ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಜೆಡಿಎಸ್ ನಾಯಕಿ ಶಾರದ ಅಪ್ಪಾಜಿ ಅವರು ತಮ್ಮ ಬೆಂಬಲಿಗರ ಜತೆಯಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ರಂಗಪ್ಪವೃತ್ತದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹಿಂದೂ ಮಹಾಸಭಾ ಸಿಂಹದ್ವಾರ ಕಾಮಗಾರಿಗೆ ಶಾಸಕರು, ಸಂಸದರು ಭೂಮಿಪೂಜೆ ನೆರವೇರಿಸಿದರು. ಎಎಪಿಯ ಆನಂದ್ ನೇತೃತ್ವದಲ್ಲಿ ಜ್ಯೂಸ್, ಯುವ ಕಾಂಗ್ರೆಸ್ ನೇತೃತ್ವದಲ್ಲಿ ಮಜ್ಜಿಗೆ, ಕೇಸರಿಪಡೆ ಕಾರ್ಯಕರ್ತರು ಲಾಡು ವಿತರಿಸಿದರು. ದಾರಿಯುದ್ದಕ್ಕೂ ಭಕ್ತರು ತಮಗೆ ಇಷ್ಟವಾದ ರೀತಿಯಲ್ಲಿ ಹಾರವನ್ನು ಸಿದ್ಧಪಡಿಸಿ ಗಣಪತಿಗೆ ಅರ್ಪಿಸುತ್ತಿದ್ದರು. ಭೂತನಗುಡಿ ಬಳಿಯ ವ್ಯಾಪಾರಿಯೊಬ್ಬರು ಕುರ್ ಕುರೆ, ಲೇಸ್ ಹಾರ ಮಾಡಿ ಅರ್ಪಿಸಿದರು. ಕೆಲವರು ಸೇಬು, ದ್ರಾಕ್ಷಿ, ಕ್ರಾಕ್ ಜಾಕ್ ಬಿಸ್ಕತ್ ಹಾರವನ್ನು ಗಣಪತಿಗೆ ಅರ್ಪಿಸಿದರು.
ಸಾವರ್ಕರ್, ಬಾಲಗಂಗಾಧರ ತಿಲಕ್ ಅವರ ಭಾವಚಿತ್ರ ಹಾಗೂ ಅವರ ಘೋಷಣೆಗಳನ್ನು ಪ್ರದರ್ಶಿಸಿದ್ದು ಕಂಡುಬಂತು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಧರ್ಮಪ್ರಸಾದ್, ಬಿ.ಕೆ. ಶ್ರೀನಾಥ್, ಮಂಗೋಟೆ ರುದ್ರೇಶ್, ಎಸ್.ಕುಮಾರ್, ಜಿ.ಆನಂದಕುಮಾರ್, ವಿಶ್ವನಾಥರಾವ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸದಸ್ಯರಾದ ಅನುಪಮ ಚನ್ನೇಶ್, ಎನ್.ಮಂಜುನಾಥ್, ಮುಖಂಡರಾದ ಕರುಣಾಮೂರ್ತಿ, ಮಧುಕುಮಾರ್, ಡಿ.ಟಿ.ಶ್ರೀಧರ್, ಬಿ.ಟಿ.ನಾಗರಾಜ್, ಸುದೀಪಕುಮಾರ್, ಮಣಿ, ವಿ.ಕದಿರೇಶ್, ಮಂಜುನಾಥ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.
ಶಾಂತಿಯುತ ಮೆರವಣಿಗೆ: ಮೆರವಣಿಗೆ ಶಾಂತಿಯುತವಾಗಿ ನಡೆಯಿತು. ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.