ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಚಿಹ್ನೆ
ಶಿವಮೊಗ್ಗ: ಜಿಲ್ಲೆಯ ಕೆಲವು ಕಂಪ್ಯೂಟರ್ ಸೆಂಟರ್‌ಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ನೀಡುವ ಗುರುತಿನ ಚೀಟಿಗಳನ್ನೇ ನಕಲು (ಎಡಿಟ್) ಮಾಡಿ ಬೇರೆಯವರಿಗೆ ನೀಡುತ್ತಿರುವುದು ಕಾರ್ಮಿಕ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕಾರ್ಮಿಕ ಇಲಾಖೆ ಈಚೆಗೆ ಪರಿಶೀಲನೆ ನಡೆಸಿದ್ದು, ಜಿಲ್ಲೆಯಲ್ಲಿ 9,819 ನಕಲಿ ಕಾರ್ಮಿಕರ ಕಾರ್ಡ್‌ಗಳು ಪತ್ತೆಯಾಗಿವೆ. ಅವುಗಳಲ್ಲಿ ಹೆಚ್ಚಿನವು ಜಿಲ್ಲೆಯ ಕಂಪ್ಯೂಟರ್ ಸೆಂಟರ್‌ಗಳಿಂದ ವಿತರಣೆಯಾಗಿವೆ. ಹೀಗೆ ನಕಲಿ ಕಾರ್ಮಿಕರ ಗುರುತಿನ ಚೀಟಿ ನೀಡುವುದು ಅಪರಾಧ. ನೈಜ ಕಾರ್ಮಿಕರು ಇಂತಹವರಿಂದ ಮೋಸ ಹೋಗಬಾರದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ.ವೇಣುಗೋಪಾಲ್ ಹೇಳುತ್ತಾರೆ.
ಕಾರ್ಮಿಕ ನಿರೀಕ್ಷಕರ ನೇಮಕ:
ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಗುರುತಿಸಿ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳಾಗಿ ನೋಂದಾಯಿಸಲು ಕಾರ್ಮಿಕ ನಿರೀಕ್ಷಕರನ್ನು (ಲೇಬರ್ ಇನ್‌ಸ್ಟೆಕ್ಟರ್) ನೇಮಕ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಪ್ರತೀ ತಾಲ್ಲೂಕಿನಲ್ಲಿಯೂ ಕಾರ್ಮಿಕ ನಿರೀಕ್ಷಕರು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ನೋಂದಣಿ ಮಾಡಿ ಗುರುತಿನ ಚೀಟಿ (ಲೇಬರ್ ಕಾರ್ಡ್) ಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.
ಹಾಗಿದ್ದರೂ ಕೆಲವು ಕಂಪ್ಯೂಟರ್ ಸೆಂಟರ್‌ಗಳಲ್ಲಿ ಕಾರ್ಮಿಕರಿಗೆ ನೀಡುತ್ತಿರುವ ಗುರುತಿನ ಚೀಟಿಗಳನ್ನೇ ನಕಲು ಮಾಡಿ ಹೊಸಬರಿಗೆ ಹಾಗೂ ಅನರ್ಹರಿಗೆ ನೀಡಲಾಗುತ್ತಿದೆ. ಇದಕ್ಕೆ ಹೆಚ್ಚಿನ ಹಣ ಕೂಡ ಪಡೆಯುತ್ತಿರುವುದು ಕಚೇರಿಯ ಗಮನಕ್ಕೆ ಬಂದಿದೆ. ಇದು ಶಿಕ್ಷಾರ್ಹ ಅಪರಾಧ. ಅಂತಹ ಕಾರ್ಡ್‌ಗಳಿಗೆ ಯಾವುದೇ ಮಾನ್ಯತೆ ಇರುವುದಿಲ್ಲ ಹಾಗೂ ಇಲಾಖೆಯಿಂದ ಯಾವುದೇ ಸೌಲಭ್ಯಗಳೂ ದೊರೆಯುವುದಿಲ್ಲ ಎಂದು ಅವರು ಹೇಳುತ್ತಾರೆ.
ಹೊಸದಾಗಿ ಲೇಬರ್ ಕಾರ್ಡ್ ಮಾಡಿಸುವ ಫಲಾನುಭವಿಗಳು ಸಿಎಸ್ ಸೆಂಟರ್‌ಗಳಲ್ಲಿ ಅರ್ಜಿ ಸಲ್ಲಿಸಿದ್ದಲ್ಲಿ 'ಸ್ವೀಕೃತಿ ಪತ್ರ’ ಲಭ್ಯವಾಗುತ್ತದೆ. ತದನಂತರ ಕಾರ್ಮಿಕ ನಿರೀಕ್ಷಕರು ಕಾಲಮಿತಿಯೊಳಗೆ ಸ್ಥಳ ಪರಿಶೀಲನೆ ನಡೆಸಿ ಕಾರ್ಮಿಕ ಕಾರ್ಡ್‌ಗೆ ಅನುಮೋದನೆ ನೀಡುತ್ತಾರೆ. ಅದರ ಆಧಾರದ ಮೇಲೆ ಫಲಾನುಭವಿಗಳು ಸಿಎಸ್‌ಸಿ ಸೆಂಟರ್‌ಗಳಲ್ಲಿ ಕಾರ್ಡ್‌ಗಳನ್ನು ಪಡೆಯಬಹುದಾಗಿದೆ. ಇದರ ಹೊರತು ಬೇರೆ ಯಾವುದೇ ಕಂಪ್ಯೂಟರ್ ಸೆಂಟರ್ ಮತ್ತು ಇನ್ನಿತರ ಕಚೇರಿಗಳಲ್ಲಿ ಕಾರ್ಡ್‌ಗಳ ನೋಂದಣಿ ಮಾಡಿಸಲು ಅವಕಾಶ ಇರುವುದಿಲ್ಲ. ಈ ವಿಷಯದಲ್ಲಿ ಯಾರೂ ಮೋಸ ಹೋಗಬಾರದು ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
ನಕಲಿ ಲೇಬರ್ ಕಾರ್ಡ್ ವಿತರಣೆ ಮಾಡಿ ಕಾರ್ಮಿಕರನ್ನು ವಂಚಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ನಕಲಿ ಕಾರ್ಡ್ ಕೊಡುವುದು ಕಂಡುಬಂದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದುಎಂ.ಪಿ. ವೇಣುಗೋಪಾಲ್ ಜಿಲ್ಲಾ ಕಾರ್ಮಿಕ ಅಧಿಕಾರಿ ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.