ADVERTISEMENT

ಶಿವಮೊಗ್ಗ | ದೀಪಾವಳಿ ಹಬ್ಬ: ಬೆಲೆ ಏರಿಕೆ ನಡುವೆ ಖರೀದಿ ಜೋರು

ದೀಪಾವಳಿ ಹಬ್ಬ ಆಚರಿಸಲು ಸಕಲ ತಯಾರಿ; ಮಾರುಕಟ್ಟೆಯಲ್ಲಿ ಹೂವು, ಹಣ್ಣು ಖರೀದಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 14:30 IST
Last Updated 30 ಅಕ್ಟೋಬರ್ 2024, 14:30 IST
ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಖರೀದಿಯಲ್ಲಿ ನಿರತವಾಗಿರುವ ಜನಸ್ತೋಮ
ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಖರೀದಿಯಲ್ಲಿ ನಿರತವಾಗಿರುವ ಜನಸ್ತೋಮ   

ಶಿವಮೊಗ್ಗ: ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮದಿಂದ ಆಚರಣೆ ಮಾಡಲು ಜಿಲ್ಲೆಯ ಜನತೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದು,  ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಬುಧವಾರ ಜೋರಾಗಿ ಕಂಡು ಬಂದಿತು. 

ಹೂವು, ಹಣ್ಣು, ಹಣತೆ ಹಾಗೂ ವಿವಿಧ ಅಲಂಕಾರಿಕ ವಸ್ತುಗಳನ್ನು ಖರೀದಿಸುವಲ್ಲಿ ನಿರತರಾಗಿದ್ದರು. ನಗರದ ಶಿವಪ್ಪ ನಾಯಕ ವೃತ್ತದ ಎದುರಿಗಿನ ಹೂವಿನ ಮಾರುಕಟ್ಟೆ, ದುರ್ಗಿಗುಡಿ, ಗಾಂಧಿ ಬಜಾರ್‌, ನೆಹರೂ ರಸ್ತೆ, ಬಿ.ಎಚ್‌. ರಸ್ತೆ, ಪೊಲೀಸ್‌ ಚೌಕಿ, ಲಕ್ಷ್ಮಿ ಟಾಕೀಸ್‌, ಜಿಲ್ಲಾ ಗ್ರಂಥಾಲಯ ಎದುರಗಿನ ರಸ್ತೆ ಸೇರಿದಂತೆ ಹಲವೆಡೆ ಹೂವು ಮತ್ತು ಹಣ್ಣುಗಳ ವ್ಯಾಪಾರ ವಹಿವಾಟು ನಡೆಯಿತು. 

ಗುರುವಾರ ಮತ್ತು ಶುಕ್ರವಾರ ಲಕ್ಷ್ಮಿಪೂಜೆ ಮಾಡಲಾಗುತ್ತಿದೆ. ಈ ಪೂಜೆಗೆ ಬೇಕಾದ ಸಾಮಗ್ರಿಗಳನ್ನು ಜನರು ಖರೀದಿಸಿದರು. ಎಂದಿನಂತೆ ಹಬ್ಬದ ಹೊತ್ತಿನಲ್ಲಿ ಈ ಬಾರಿಯೂ ಹೂ ಮತ್ತು ಹಣ್ಣುಗಳ ಬೆಲೆ ಹೆಚ್ಚಳವಾಗಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ.

ADVERTISEMENT

ಒಂದು ಕೆ.ಜಿ. ದಾಳಿಂಬೆ ₹200, ಸೇಬು ₹250, ಮೋಸಂಬಿ ₹150, ಕಿತ್ತಳೆ ಹಣ್ಣು ₹180, ಸೀತಾಫಲ ₹200, ಬಾಳೆ ಹಣ್ಣು ₹100, ಒಂದು ಪೈನಾಪಲ್‌ಗೆ  ₹80ರಿಂದ ₹100, ಒಂದು ಬೂದುಗುಂಬಳಕಾಯಿಗೆ ₹40ರಿಂದ ₹50 ದರ ನಿಗದಿ ಮಾಡಲಾಗಿತ್ತು. ಎಲ್ಲ ಹಣ್ಣುಗಳು ಸೇರಿ ಪೂಜೆಗಾಗಿ ಪ್ಯಾಕೇಜ್‌ ದರವನ್ನು ₹150ಕ್ಕೆ ವ್ಯಾಪಾರಿಗಳು ನಿಗದಿ ಮಾಡಿದ್ದರು. 

ಕೆ.ಜಿ. ಚಂಡು ಹೂ ₹100, ಒಂದು ಮಾರು ಸೇವಂತಿಗೆ ₹100, ಮಾರು ಮಲ್ಲಿಗೆ ಹೂವು ₹100 ಹಾಗೂ ಹಾರಗಳಿಗೆ ₹150ರಿಂದ ₹400ವರೆಗೆ ಮಾರಾಟವಾದವು. ಬಾಳೆ ದಿಂಡು ₹50 ಹಾಗೂ ಮಾವಿನ ಸೊಪ್ಪಿಗೆ ₹20 ದರ ಇತ್ತು. ಸಣ್ಣ ಪ್ರಮಾಣದ ವಿವಿಧ ಮಣ್ಣಿನ ಹಣತೆ ₹50 ರಿಂದ ₹60 (ಒಂದು ಡಜನ್‌), ದೊಡ್ಡ ಪ್ರಮಾಣದ ಹಣತೆ ₹ 80ರಿಂದ ₹ 100ಕ್ಕೆ (ಒಂದು ಡಜನ್‌) ಮಾರಾಟವಾದವು. ವಿವಿಧ ಆಕಾರದ ಮಣ್ಣಿನ ಹಣತೆಗಳನ್ನು ಜನರು ಖರೀದಿಸಿದರು.

ಶಿವಮೊಗ್ಗದ ಹೂವಿನ ಮಾರುಕಟ್ಟೆಯಲ್ಲಿ ಹೂವು ಖರೀದಿಸುತ್ತಿರುವುದು
ಶಿವಮೊಗ್ಗದ ಮಾರುಕಟ್ಟೆಯಲ್ಲಿ ಹಣ್ಣು ಖರೀದಿಯಲ್ಲಿ ತೊಡಗಿದ್ದ ಮಹಿಳೆಯರು
ಶಿವಮೊಗ್ಗದ ಹೂ ಮತ್ತು ಹಣ್ಣಿನ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರು ಮಣ್ಣಿನ ಹಣತೆಗಳನ್ನು ಖರೀದಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.