
ಶಿವಮೊಗ್ಗ: ‘ಮನರೇಗಾ ಕಾಯ್ದೆ ಹಿಂಪಡೆದು ಹೊಸ ಯೋಜನೆ ಜಾರಿಗೊಳಿಸಿ ಕೇಂದ್ರ ಸರ್ಕಾರ ಗ್ರಾಮೀಣರಿಗೆ ಯಾವ ರೀತಿ ಅನ್ಯಾಯ ಮಾಡಿದೆ ಎಂಬುದನ್ನು ಜಾಹೀರಾತು ಮೂಲಕ ನಮ್ಮದೇ ಶೈಲಿಯಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಅದರಲ್ಲಿ ತಪ್ಪೇನಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಇಲ್ಲಿ ಪ್ರಶ್ನಿಸಿದರು.
ಮನರೇಗಾ ಪರ ಪತ್ರಿಕೆಗಳಿಗೆ ಕೊಟ್ಟಿರುವ ಜಾಹೀರಾತಿಗೆ ಬಿಜೆಪಿ ನಾಯಕರಿಂದ ವಿರೋಧ ವ್ಯಕ್ತವಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ‘ದೆಹಲಿಯಲ್ಲಿ ನಡೆದ ರೈತರ ಹೋರಾಟದ ಮಾದರಿಯಲ್ಲೇ ಮನರೇಗಾ ಮರು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ದೇಶದಾದ್ಯಂತ ಕೇಂದ್ರದ ವಿರುದ್ಧ ಹೋರಾಟ ಸಂಘಟಿಸಲಿದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.
‘ಮನರೇಗಾ ಅಡಿ ಈವರೆಗೂ ಪಂಚಾಯಿತಿಗಳಲ್ಲಿ ಅರ್ಜಿ ಕೊಟ್ಟು ಯಾರು ಬೇಕಾದರೂ ಉದ್ಯೋಗ ಪಡೆಯಬಹುದಿತ್ತು. ಗ್ರಾಮಗಳಲ್ಲಿ ಏನೇನು ಕೆಲಸ ಮಾಡಬೇಕು ಎಂಬುದನ್ನು ಪಂಚಾಯಿತಿ ಸದಸ್ಯರು ತೀರ್ಮಾನಿಸುತ್ತಿದ್ದರು. ಈಗ ಅವರ ಹಕ್ಕು ಕಿತ್ತುಕೊಂಡು ಮೇಲಿನಿಂದಲೇ (ಕೇಂದ್ರ ಸರ್ಕಾರ) ತೀರ್ಮಾನ ಮಾಡುತ್ತೇವೆ ಎಂದು ಹೊಸ ಯೋಜನೆಯಲ್ಲಿ ಹೇಳಲಾಗಿದೆ. ಇದನ್ನೇ ಜಾಹೀರಾತಿನಲ್ಲಿ ಮನವರಿಕೆ ಮಾಡಿಕೊಟ್ಟಿದ್ದೇವೆ’ ಎಂದರು.
ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹಸ್ತಕ್ಷೇಪಕ್ಕೆ ಬೇಸತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆಗೆ ಮುಂದಾಗಿದ್ದಾರೆ ಎಂಬ ಬಿಜೆಪಿ ಶಾಸಕ ಸುನಿಲ್‌ಕುಮಾರ್ ಅವರ ಆರೋಪವನ್ನು ನಿರಾಕರಿಸಿದ ಡಿ.ಕೆ.ಶಿವಕುಮಾರ್, ಈ ವಿಚಾರ ಈಗಷ್ಟೇ ನಿಮ್ಮಿಂದ (ಮಾಧ್ಯಮ) ಗೊತ್ತಾಗಿದೆ ಎಂದರು.
‘ಕಾರ್ಯಕರ್ತರು ಬಂದು ಕೇಳಿದಾಗ ಅವರಿಗೆ ಏನಾದರೂ ಒಳ್ಳೆಯದಾಗಲಿ ಎಂದು ಯತೀಂದ್ರ ಸಿದ್ದರಾಮಯ್ಯ ಬೇರೆ ಬೇರೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿರಬಹುದು. ಅದು ಸಹಜ. ಅದರಲ್ಲಿ ತಪ್ಪೇನಿದೆ?’ ಎಂದು ಪ್ರಶ್ನಿಸಿದ ಅವರು, ‘ವಿರೋಧ ಪಕ್ಷದವರು ಏನಾದರೊಂದು ಹೇಳುತ್ತಾ ಇರುತ್ತಾರೆ. ಅದಕ್ಕೆಲ್ಲ ಮಹತ್ವ ಕೊಡುವ ಅಗತ್ಯವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.