ADVERTISEMENT

ತಂತ್ರಾಂಶದಲ್ಲಿನ ಲೋಪ ಸರಿಪಡಿಸಿ: ದಸ್ತಾವೇಜು ಬರಹಗಾರರ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 5:01 IST
Last Updated 17 ಡಿಸೆಂಬರ್ 2025, 5:01 IST
ಶಿವಮೊಗ್ಗದ ಉಪನೋಂದಣಾಧಿಕಾರಿ ಕಚೇರಿ ಎದುರು ಸೋಮವಾರ ದಸ್ತಾವೇಜು ಬರಹಗಾರರು ಪ್ರತಿಭಟನೆ ನಡೆಸಿದರು
ಶಿವಮೊಗ್ಗದ ಉಪನೋಂದಣಾಧಿಕಾರಿ ಕಚೇರಿ ಎದುರು ಸೋಮವಾರ ದಸ್ತಾವೇಜು ಬರಹಗಾರರು ಪ್ರತಿಭಟನೆ ನಡೆಸಿದರು   

ಶಿವಮೊಗ್ಗ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ ದಸ್ತಾವೇಜು ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡುವಂತೆ ಹಾಗೂ ತಂತ್ರಾಂಶದಲ್ಲಿ ಆಗುತ್ತಿರುವ ಲೋಪ ಸರಿಪಡಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ದಸ್ತಾವೇಜು ಪರವಾನಗಿ ಬರಹಗಾರರ ಸಂಘದಿಂದ ಸೋಮವಾರ ಎಪಿಎಂಸಿ ಬಳಿ ಇರುವ ಉಪ ನೋಂದಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

‘ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಹೋರಾಟ ನಡೆಯುತ್ತಿದೆ. ಎಲ್ಲಾ ತಾಲೂಕಿನಲ್ಲಿ ಇರುವ ಉಪ ನೋಂದಣಾಧಿಕಾರಿ ಕಚೇರಿ ಮುಂದೆ ಬೇಡಿಕೆಗಳ ಈಡೇರಿಕೆಗಾಗಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದೇವೆ. ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು. ಕರ್ನಾಟಕ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮಹಾ ಪರಿವೀಕ್ಷಕರಿಂದ ರಾಜ್ಯದ ಎಲ್ಲಾ ಪತ್ರ ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿ ನೀಡಬೇಕು’ ಎಂದು ಒತ್ತಾಯಿಸಿದರು.

‘ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ನಾವು ಈ ವಿಷಯದ ಬಗ್ಗೆ ಕಂದಾಯ ಸಚಿವರು ಮತ್ತು ಮುಖ್ಯಮಂತ್ರಿಯವರಿಗೆ ಈಗಾಗಲೇ ಬೇಡಿಕೆ ಸಲ್ಲಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ಇದೆ. ಬೆಳಗಾವಿ ಚಲೋ ಕೂಡ ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜಿ.ಎಂ.ಸುರೇಶ್ ಬಾಬು, ಪ್ರಧಾನ ಕಾರ್ಯದರ್ಶಿ ಉಮೇಶ್ ಮಾನೆ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಎಂ.ಜಿ. ಬಾಲಕೃಷ್ಣ, ಅಧ್ಯಕ್ಷ ಎಸ್.ಎಚ್. ರೋಹಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಕೆ. ಆಂಜನೇಯ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.