ADVERTISEMENT

ಭದ್ರಾವತಿ: ವಿಐಎಸ್‌ಎಲ್ ಮುಚ್ಚುವ ದುಸ್ಸಾಹಸ ಬೇಡ ಎಚ್‌ಡಿಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 6:47 IST
Last Updated 4 ಫೆಬ್ರುವರಿ 2023, 6:47 IST
ಭದ್ರಾವತಿಯಲ್ಲಿ ಶುಕ್ರವಾರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು
ಭದ್ರಾವತಿಯಲ್ಲಿ ಶುಕ್ರವಾರ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು   

ಭದ್ರಾವತಿ: ‘ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆ ಸಾವಿರಾರು ಕುಟುಂಬಗಳಿಗೆ ಜೀವನ ಕೊಟ್ಟಿವೆ. ಆದರೆ ಈಗ ಕೇಂದ್ರ ಸರ್ಕಾರ ಅದನ್ನು ಮುಚ್ಚಲು ಹೊರಟಿದೆ. ಕಾರ್ಖಾನೆ ಉಳಿಸಲು ಕನ್ನಡಿಗರು ಇನ್ನೂ ಬದುಕಿದ್ದೇವೆ. ಕೇಂದ್ರ ಸರ್ಕಾರ ಅಂತಹ ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

ಇಲ್ಲಿನ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಕಾರ್ಮಿಕರು ನಡೆಸುತ್ತಿರುವ ಬೃಹತ್ ಹೋರಾಟದಲ್ಲಿ ‍ಶುಕ್ರವಾರ ಪಾಲ್ಗೊಂಡು ಪಕ್ಷದಿಂದ ಬೆಂಬಲ ಸೂಚಿಸಿ ಮಾತನಾಡಿದರು.

‘ಸಾವಿರಾರು ಗುತ್ತಿಗೆ ಕಾರ್ಮಿಕರನ್ನು ಬೀದಿಗೆ ಬಿಟ್ಟು ಜಿಲ್ಲೆಯಲ್ಲಿ ವಿಮಾನ ನಿಲ್ದಾಣದ ಉದ್ಘಾಟನೆಗೆ ಬಿಜೆಪಿ ಸರ್ಕಾರ ಹೊರಟಿದೆ. ವಿಮಾನ ನಿಲ್ದಾಣ ಆರಂಭದ ಉದ್ದೇಶ ಏಕೆ ಎಂದು ತಿಳಿಯುತ್ತಿಲ್ಲ. ಜಿಲ್ಲೆಯ ಸಂಸದ ಬಿ.ವೈ ರಾಘವೇಂದ್ರ ಜನರ ಋಣತೀರಿಸುವುದಿದ್ದರೆ ಈ ಕಾರ್ಖಾನೆಯನ್ನು ಉಳಿಸಿ ಕೊಡಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದೇವೇಗೌಡರು ಪ್ರಧಾನಿ ಆಗಿದ್ದಾಗ ವಿಐಎಸ್‌ಎಲ್ ಅನ್ನು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ (ಸೇಲ್‌) ಹಸ್ತಾಂತರಿಸುವುದನ್ನು ವಿರೋಧಿಸಿದ್ದರು. ₹ 650 ಕೋಟಿ ವೆಚ್ಚದಲ್ಲಿ ಕಾರ್ಖಾನೆಗೆ ಜೀವ ಕೊಡಲು ಪ್ರಯತ್ನಿಸಿದ್ದರು. ಆದರೆ ಷಡ್ಯಂತ್ರದಿಂದಾಗಿ ದಿಢೀರನೆ ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗೆ ಇಳಿದಿದ್ದರಿಂದ ಅವರ ಕನಸು ಆಗ ನನಸಾಗಲಿಲ್ಲ’ ಎಂದರು.

‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಮಕ್ಕಳು ಅರಾಮವಾಗಿ ಕುರ್ಚಿ ಮೇಲೆ ಕೂತು ಸರ್ಕಾರದ ಕೀ ತಿರುಗಿಸುತ್ತಿದ್ದಾರೆ. ಅವರಿಗೆ ಕಾರ್ಖಾನೆ ಉಳಿಸುವ ಬಗ್ಗೆ ಚಿಂತೆ ಇಲ್ಲ. ಯಡಿಯೂರಪ್ಪ ಅವರು ರಾಜ್ಯವನ್ನು ಹಲವಾರು ಬಾರಿ ಮುಖ್ಯಮಂತ್ರಿ ಆಗಿ ಆಳಿದ್ದಾರೆ. ಆದರೆ ಜಿಲ್ಲೆಯ ಜನರನ್ನು ಮಾತ್ರ ಏಕೆ ಬೀದಿ ಪಾಲು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಹಲವಾರು ಕಾರ್ಖಾನೆಗಳನ್ನು ಬಿಜೆಪಿ ಸರ್ಕಾರ ಮುಚ್ಚಿದೆ. ಅದಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ಕೊಟ್ಟು ಬಿಜೆಪಿಯನ್ನು ಮನೆಗೆ ಕಳಿಸುತ್ತಾರೆ ಎಂದರು.

‘ಕೇಂದ್ರ ಸರ್ಕಾರಕ್ಕೆ ಕಾರ್ಖಾನೆ ಉಳಿಸಲು ಸಾಧ್ಯವಾಗದೇ ಹೋದರೆ ನಮಗೆ ಬಿಟ್ಟು ಕೊಡಲಿ. ನಾವು ಉಳಿಸಿಕೊಳ್ಳುತ್ತೇವೆ. ನಾನೂ ಕೂಡ ಈ ಕಾರ್ಖಾನೆಯಲ್ಲಿ ಕಾಂಟ್ರಾಕ್ಟರ್ ಕೆಲಸ ಮಾಡಿದ್ದೇನೆ. ಆ ಋಣ ನನ್ನ ಮೇಲೆ ಇದೆ. ಹಿಂದೆ ಇಲ್ಲಿ ವಿಐಎಸ್‌ಎಲ್ ಆಸ್ಪತ್ರೆ ಇತ್ತು. ಸೇಲ್‌ನವರು ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಸ್ಮಶಾನ ಮಾಡಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ ಇಬ್ರಾಹಿಂ ದೂರಿದರು.

‘ಎಂಪಿಎಂ ಜಾಗ 70 ಸಾವಿರ ಎಕರೆ ಇದ್ದು, ಅದನ್ನು ಅರಣ್ಯ ಇಲಾಖೆಯವರು ತಿನ್ನುತ್ತಿದ್ದಾರೆ. ವಿಐಎಸ್‌ಎಲ್ ಕಾರ್ಖಾನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಡೆದುಕೊಂಡು ತಿನ್ನುತ್ತಿವೆ’ ಎಂದು ಆರೋಪಿಸಿದರು.
‘ಬಿ.ಎಸ್. ಯಡಿಯೂರಪ್ಪ ಅವರ ಹಣ ವಕೀಲರಿಗೆ ಮಾತ್ರ ಸೀಮಿತ. ಕುಮಾರಸ್ವಾಮಿ ಅಧಿಕಾರದಲ್ಲಿ ಇದ್ದಾಗ
₹ 25,000 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇವರು ಏನು ಮಾಡಿದ್ದಾರೆ’ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ, ಮಾಜಿ ಶಾಸಕಿ ಶಾರದಾ ಪೂರ‍್ಯಾನಾಯ್ಕ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶ್ರೀಕಾಂತ್, ಜೆಡಿಎಸ್ ಅಭ್ಯರ್ಥಿ ಶಾರದಾ ಅಪ್ಪಾಜಿ ಗೌಡ, ಗುತ್ತಿಗೆ ಕಾರ್ಮಿಕ ಸಂಘ ಅಧ್ಯಕ್ಷ ಸುರೇಶ್, ಪ್ರಮುಖರಾದ ರವಿ, ಮುತ್ತು ರಾಜ್ ಖಾನ್, ವಿಶ್ವನಾಥ್, ಆನಂದ್, ವಿಶಾಲಾಕ್ಷಿ, ಮಲ್ಲೇಶ್, ಶೈಲಜಾ
ಇದ್ದರು.

‘ಪ್ರಧಾನಿಗೆ ಪ್ರಶ್ನೆ ಮಾಡಿ’

‘ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ಲೆಗೆ ಬಂದಾಗ ಅವರಿಗೆ ಮುತ್ತಿಗೆ ಹಾಕಿ, ಪ್ರಶ್ನೆ ಮಾಡಿ ವಿಐಎಸ್‌ಎಲ್‌ ಉಳಿವಿಗೆ ಹೋರಾಡಿ. ಅನಿವಾರ್ಯತೆ ಇದ್ದರೆ ನಾನೂ ಕೂಡ ಬಂದು ನಿಮ್ಮ ಬೆನ್ನಿಗೆ ನಿಲ್ಲುತ್ತೇನೆ’ ಎಂದು ಪ್ರತಿಭಟನಾ ನಿರತರಿಗೆ ಕುಮಾರಸ್ವಾಮಿ ಸಲಹೆ ನೀಡಿದರು.

‘ವಿಐಎಸ್‌ಎಲ್‌ ಉಳಿಸುವಂತೆ ಈಗಾಗಲೇ ದೇವೆಗೌಡರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಅದಕ್ಕೆ ಮೊದಲು ಉತ್ತರಿಸಲಿ’ ಎಂದು ಆಗ್ರಹಿಸಿದರು.

27ಕ್ಕೆ ಭದ್ರಾವತಿ ಬಂದ್‌ಗೆ ನಿರ್ಧಾರ

ಪ್ರಧಾನಿ ನರೇಂದ್ರ ಮೋದಿ ಅವರು ಸೋಗಾನೆ ವಿಮಾನ ನಿಲ್ದಾಣ ಉದ್ಘಾಟನೆಗೆ ಫೆ.27 ಬರುತ್ತಿದ್ದಾರೆ. ಅಂದು ಭದ್ರಾವತಿ ನಗರವನ್ನು ಬಂದ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾನವ ಹಕ್ಕು ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ರಾಜು ಹೇಳಿದರು.

‘ಬೀದಿ ವ್ಯಾಪಾರಿಗಳು, ಬಡವರು, ಕೆಳವರ್ಗದವರಲ್ಲಿ ಕಾರ್ಖಾನೆಯ ಋಣ ಇದೆ. ಈಗಾಗಲೆ ಎಂಪಿಎಂ ಕಾರ್ಖಾನೆ ಮುಚ್ಚಿದಾಗಲೇ ಅರ್ಧ ನಗರದ ಜನರು ಸತ್ತು ಹೋಗಿದ್ದಾರೆ. ವಿಐಎಸ್‌ಎಲ್ ಮುಚ್ಚಿದರೆ ಸಂಪೂರ್ಣ ಜೀವ ಬಿಟ್ಟ ಹಾಗೆಯೇ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.