ADVERTISEMENT

ಮಂಗನಕಾಯಿಲೆ ನಿಯಂತ್ರಣ, ಆತಂಕ ಅನಗತ್ಯ: ರಾಜೇಶ್ ಸುರಗಿಹಳ್ಳಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 15:34 IST
Last Updated 18 ಡಿಸೆಂಬರ್ 2019, 15:34 IST

ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗನ ಕಾಯಿಲೆ ತಡೆಯಲು ಎಲ್ಲಾ ಮುಂಜಾಗ್ರತಾಕ್ರಮ ಕೈಗೊಳ್ಳಲಾಗಿದೆ. ಮುಂಗಾರು ಆರಂಭವಾದ ನಂತರ ಕೆಎಫ್‍ಡಿ ವೈರಾಣು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರದೇಶದಲ್ಲಿ ಮಂಗನ ಕಾಯಿಲೆ ಕಂಡು ಬಂದಿಲ್ಲ. ರೋಗ ನಿಯಂತ್ರಣಕ್ಕೆ ಈ ವರ್ಷ 2.20 ಲಕ್ಷ ಡೋಸ್ ಲಸಿಕೆ ನೀಡಲುನಿರ್ಧರಿಸಲಾಗಿದೆ.ಈಗಾಗಲೇ 1.60 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ.ಉಳಿದ60 ಸಾವಿರ ಡೋಸ್ ಲಸಿಕೆ ನೀಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಜಿಲ್ಲೆಯಲ್ಲಿ 45 ಸಾವಿರ ಡಿಎಂಪಿ ತೈಲ ದಾಸ್ತಾನು ಲಭ್ಯವಿದೆ.ಈಗಾಗಲೇ 30 ಸಾವಿರ ತೈಲವನ್ನು ಫಲಾನುಭವಿಗಳಿಗೆ ನೀಡಲಾಗಿದೆ. 50 ಮೀಟರ್ ವ್ಯಾಪ್ತಿಯಲ್ಲಿ ಮೆಲಾಥಿಯಾನ್ ಸಿಂಪಡಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ 2 ಕ್ವಿಂಟಲ್ ಮೆಲಾಥಿಯಾನ್ ಸರಬರಾಜು ಮಾಡಲಾಗಿದೆ. ಸರ್ವೇಕ್ಷಣಾ ಕಾರ್ಯ ನಿರಂತರವಾಗಿ ನಡೆಸಲಾಗುತ್ತಿದೆ. 205 ಉಣುಗುಗಳನ್ನು ಸಂಗ್ರಹಿಸಿ ವೈರಾಣು ಪರೀಕ್ಷೆ ನಡೆಸಲಾಗಿದೆ.ಕಾಯಿಲೆ ಇರುವ ಶಂಕಿತ 467 ಜ್ವರ ಪ್ರಕರಣಗಳ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ಇದುವರೆಗೂ ಯಾವುದೇ ರೋಗಾಣು ದೃಢಪಟ್ಟಿಲ್ಲ ಎಂದು ವಿವರ ನೀಡಿದ್ದಾರೆ.

ADVERTISEMENT

ಸಾಗರ ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯತಿ,ಹೆದ್ದೂರು, ಶೇಡ್ಗಾರ್, ಸಾಲ್ಗಡಿ ಗ್ರಾಮ ಪಂಚಾಯಿತಿ,ತೀರ್ಥಹಳ್ಳಿ ತಾಲ್ಲೂಕಿನ ತಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಭೆ ನಡೆಸಲಾಗಿದೆ. ಎಲ್ಲೆಡೆ ಇಲಾಖಾ ಸಮನ್ವಯ ಸಭೆ ನಡೆಸಲಾಗಿದೆ.ಜಿಲ್ಲಾ ಮಟ್ಟದಲ್ಲಿ ತಂಡ ರಚಿಸಿ, ಅವರಿಗೆ ಸೂಕ್ತ ತರಬೇತಿ ನೀಡಲಾಗಿದೆ. ಜಿಲ್ಲೆಯ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಕ್ಷೇತ್ರ ಸಿಬ್ಬಂದಿಗೆ ರೋಗ ನಿಯಾಂತ್ರಣ ಕಾರ್ಯಕ್ರಮದ ಪುನರ್‌ಮನನತರಬೇತಿ ನೀಡಲಾಗಿದೆ ಎಂದುಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.