ADVERTISEMENT

ಅಂಬುತೀರ್ಥ ಅಭಿವೃದ್ಧಿಗೆ ಇಂದು ಚಾಲನೆ

ಶರಾವತಿ ಭೂಗರ್ಭ ಜಲ ವಿದ್ಯುತ್‌ ಯೋಜನೆಗೆ ಈಶ್ವರಪ್ಪ ವಿರೋಧ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 17:29 IST
Last Updated 27 ಜೂನ್ 2020, 17:29 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ:ಕಾವೇರಿ ನದಿ ಉಗಮ ಸ್ಥಳ ತಲಕಾವೇರಿಯನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿರುವ ಶರವಾತಿ ಉಗಮ ಸ್ಥಾನ ಅಂಬುತೀರ್ಥವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದ್ದು, ಅಂಬುತೀರ್ಥ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ.ಅಭಿವೃದ್ಧಿ ಕಾಮಗಾರಿಗೆ ಜೂನ್ 28ರಂದುಚಾಲನೆ ನೀಡಲಾಗುವುದು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವರು’ಎಂದು ತಿಳಿಸಿದರು.

ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಪಂಚಾಯತ್‍ರಾಜ್ ಇಲಾಖೆ, ಸಹ್ಯಾದ್ರಿ ಪರಂಪರೆ ಪ್ರಾಧಿಕಾರ, ತುಂಗಾ ಮೇಲ್ದಂಡೆ ನೀರಾವರಿ ಇಲಾಖೆ, ಮುಜರಾಯಿ ಇಲಾಖೆ ಸಹಯೋಗದಲ್ಲಿ ಕಾಮಗಾರಿ ನಡೆಯಲಿವೆ ಎಂದರು.

ADVERTISEMENT

₹ 15 ಕೋಟಿ ಅಂದಾಜು ವೆಚ್ಚ: ಅಂಬುತೀರ್ಥ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲು ಒಟ್ಟು ₹ 10 ಕೋಟಿಯಿಂದ ₹ 15 ಕೋಟಿ ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಅಲ್ಲಿನ ರಾಮೇಶ್ವರ ದೇವಸ್ಥಾನ ಸಮಿತಿಯು ಕೈ ಜೋಡಿಸುತ್ತಿದೆ. ಪುಷ್ಕರಣಿ ನಿರ್ಮಾಣ, ಅಂಬುತೀರ್ಥ ಕೆರೆ ಸುತ್ತಲೂ ಬದು ಗೋಡೆ, ವಾಕಿಂಗ್ ಪಾಥ್, ನದಿ ಉಗಮದ ಹಿಂಭಾಗದಲ್ಲಿ ತಡೆಗೋಡೆ ನಿರ್ಮಾಣ, ಸಮುದಾಯ ಭವನ ನಿರ್ಮಾಣ, ನೊಣಬೂರು ವೃತ್ತದಿಂದ ಅಂಬುತೀರ್ಥ, ಆರಗ ರಸ್ತೆ ನಿರ್ಮಾಣ, ಶಿಲಾ ದೇಗುಲ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದುಎಂದು ಮಾಹಿತಿ ನೀಡಿದರು.

‘ಶರಾವತಿ ಭೂಗರ್ಭ ಜಲ ವಿದ್ಯುತ್‌ ಯೋಜನೆಗೆ ನನ್ನ ಬೆಂಬಲ ಇಲ್ಲ. ಸರ್ಕಾರ ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಚಿಂತನೆ ನಡೆಸಿದೆ. ಈ ಸಂದರ್ಭದಲ್ಲಿ ಯೋಜನೆ ಅಭಿವೃದ್ಧಿಗೆ ಅವಕಾಶ ನೀಡುವುದಿಲ್ಲ’ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಸುವರ್ಣಾ ಶಂಕರ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್,ಜಿಲ್ಲಾ ಪಂಚಾಯಿತಿ ಸಿಇಒಎಂ.ಎಲ್.ವೈಶಾಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.