
ರಿಪ್ಪನ್‌ಪೇಟೆ ಸಮೀಪದ ನೆಣೆಬಸ್ತಿ ಗ್ರಾಮದಲ್ಲಿ ದುರ್ಗಾಪರಮೇಶ್ವರಿ ದೇವಿಯ ವಾರ್ಷಿಕ ವರ್ಧಂತ್ಯುತ್ಸವ ಜರಗಿತು
ರಿಪ್ಪನ್‌ಪೇಟೆ: ಸಮೀಪದ ನೆಣೆಬಸ್ತಿ ಗ್ರಾಮ ದೇವತೆ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ವರ್ಧಂತ್ಯುತ್ಸವ ಅತ್ಯಂತ ವಿಜೃಂಭಣೆಯಿಂದ ಶುಕ್ರವಾರ ನೆರವೇರಿತು.
ಕೆಂಜಿಗಾಪುರ ಶ್ರೀಧರ್ ಭಟ್ ಹಾಗೂ ಕಮ್ಮಚ್ಚಿ ನಾಗರಾಜ ಭಟ್ ಅವರ ಪೌರೋಹಿತ್ಯದಲ್ಲಿ ವಿಶೇಷ ಅಲಂಕಾರ ಪೂಜೆ,
ಗಣಪತಿ ಪೂಜೆ- ಪುಣ್ಯಾಹ, ಕಲಾತತ್ವ ಹವನ, ದುರ್ಗಾ ಹೋಮ - ಪೂರ್ಣಾಹುತಿಗಳು ನೆರವೇರಿದವು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಗ್ರಾಮಸ್ಥರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.
ತದನಂತರದಲ್ಲಿ ಪಂಚಾಮೃತಾಭಿಷೇಕ ವಿಶೇಷ ಪೂಜೆ ಹಾಗೂ ಸಾಮೂಹಿಕ ಸತ್ಯನಾರಾಯಣಸ್ವಾಮಿ ವ್ರತ ಜರುಗಿದವು.
ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸ್ಥಳೀಯ ಕಲಾವಿದರಿಂದ ಭಜನೆ ಹಾಗೂ ಭಕ್ತಿ ಗೀತೆಗಳು ಗಾಯನ ಜರುಗಿದವು.
ರಾತ್ರಿ ಬೈಂದೂರು ತಾಲ್ಲೂಕಿನ ಈಶ್ವರ ಮಾರಿಕಾಂಬಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಳವಾಡಿ ತಂಡದವರಿಂದ ಶ್ರೀ ದೇವಿ ದುರ್ಗಾಪರಮೇಶ್ವರಿ ಮಹಾತ್ಮೆ ಎಂಬ ವಿನೂತನ ಯಕ್ಷ ಪ್ರಸಂಗ ಅಹೋರಾತ್ರಿ ನಡೆಯಿತು .
ನಿವಾಸಿಗಳಿಗಿಲ್ಲ ನೆಲೆ: ಮಡೆನೂರು ಹಾಗೂ ಶರಾವತಿ ಮುಳುಗಡೆ ಸಂತ್ರಸ್ತ ಪ್ರದೇಶದಿಂದ ಬಂದ 45 ಕುಟುಂಬಗಳು 7-8 ದಶಕಗಳಿಂದ ಇಲ್ಲಿಯೇ ನೆಲೆ ನಿಂತಿವೆ. ಉಳುಮೆ ಮಾಡಿ ಜೀವನೋಪಾಯಕ್ಕೆ ಕೃಷಿ ಕಾಯಕ ನೆಚ್ಚಿಕೊಂಡಿದ್ದಾರೆ.
ಈ ಪ್ರದೇಶದಲ್ಲಿದ್ದ ಹುತ್ತದ ಸ್ಥಳದಲ್ಲಿ ದೇವಿ ನೆಲೆ ನಿಂತಿರುವ ಬಗ್ಗೆ ತಿಳಿದ ಪೂರ್ವಜರು, ಕ್ರಮೇಣ ಹುತ್ತಕ್ಕೆ ಪೂಜೆ ಮಾಡುತ್ತಾ, ಅದಕ್ಕೊಂದು ಗರ್ಭಗುಡಿ ಕಟ್ಟಿಸಿ ದೇವಸ್ಥಾನದ ರೂಪ ಕೊಟ್ಟಿದ್ದಾರೆ.
‘ಕಾಲಕ್ರಮೇಣ ಹಬ್ಬ ಹರಿ ದಿನಗಳಲ್ಲಿ ವಂತಿಕೆ ಸಂಗ್ರಹಿಸಿ, ಅಮ್ಮನವರ ದೇವಸ್ಥಾನವನ್ನು ವೇದೋಕ್ತ ಶಾಸ್ತ್ರದ ಪ್ರಕಾರ ಜೀರ್ಣೋದ್ಧಾರ ಮಾಡುತ್ತಾ ಬಂದಿದ್ದೇವೆ. ಕಾಲಕ್ರಮೇಣ ಊರು ಸಹ ಅಭಿವೃದ್ಧಿ ಹೊಂದುತ್ತಾ ಬಂದಿದೆ. ಗ್ರಾಮದ ದೇವಿಗೆ ನೆಲೆ ಇದೆ. ಆದರೆ, ಮುಳುಗಡೆ ಸಂತ್ರಸ್ತರಾದ ನಮಗೆ ಇಂದಿಗೂ ಸ್ವಂತ ಸೂರು ಕಟ್ಟಲು ಜಾಗ ಮಂಜೂರು ಮಾಡಿಲ್ಲ. ಬಗರ್ ಹುಕುಂ ಸಾಗುವಳಿ ಭೂಮಿಯೇ ಇಲ್ಲಿ ನೆಲೆ ನಿಂತ ಕುಟುಂಬಕ್ಕೆ ಆಧಾರವಾಗಿದೆ’ ಎನ್ನುತ್ತಾರೆ ಗ್ರಾಮದ 95ರ ಹರೆಯದ ಮಂಜಪ್ಪನಾಯ್ಕ.
‘ನಮ್ಮ ಮೊಮ್ಮಕ್ಕಳ ಕಾಲದಲ್ಲಾದರೂ ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ಭೂಮಿ ನೀಡಲಿ, ನೆಮ್ಮದಿಯ ಬದುಕು ಕಟ್ಟಿಕೊಡಲಿ’ ಎಂಬುದು ಹಿರಿಯ ಜೀವಿಗಳ ಆಶಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.