
ಶಿವಮೊಗ್ಗ: ‘ಸಮಾಜದ ಪ್ರಗತಿಯಲ್ಲಿ ಶಿಕ್ಷಕರು ಮತ್ತು ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅಭಿಪ್ರಾಯಪಟ್ಟರು.
ಇಲ್ಲಿನ ಸಹ್ಯಾದ್ರಿ ವಿಜ್ಞಾನ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದಿಂದ ಶನಿವಾರ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಹಿರಿಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ವೈದ್ಯರು ಇಲ್ಲವೆಂದರೆ ಆರೋಗ್ಯ ಇಲ್ಲ. ಪೊಲೀಸ್ ಇಲ್ಲವೆಂದರೆ ರಕ್ಷಣೆ ಇಲ್ಲ. ವಕೀಲರು ಇಲ್ಲದಿದ್ದರೆ ನ್ಯಾಯವಿಲ್ಲ. ಆದರೆ, ಇವರೆಲ್ಲ ಸಮಾಜದ ಕಷ್ಟಕ್ಕೆ ನೆರವಾಗಲು ಸಹ್ಯಾದ್ರಿ ಕಾಲೇಜಿನಂತಹ ಶೈಕ್ಷಣಿಕ ಸಂಸ್ಥೆಯಿಂದ ರೂಪುಗೊಂಡಿದ್ದಾರೆ’ ಎಂದು ಸ್ಮರಿಸಿದರು.
ಆಧುನಿಕ ಜಗತ್ತಿನಲ್ಲಿ ಜನರು ಕೇವಲ ಅಂಕ ಮತ್ತು ಹಣದ ಹಿಂದೆ ಓಡುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ‘ವಿದ್ಯೆ ಹಾಳಾದರೆ ಕೇವಲ ಜೀವನ ನಷ್ಟವಾಗುತ್ತದೆ. ಆದರೆ, ಸಂಸ್ಕಾರದಿಂದ ಮನುಷ್ಯ ಮಹಾದೇವನಾಗುತ್ತಾನೆ. ಜೀವನದಲ್ಲಿ ನಾವು ಸಂಗ್ರಹಿಸಬೇಕಾದ ಶಾಶ್ವತ ಸಂಪತ್ತು ಎಂದರೆ ದಾನ– ಧರ್ಮ. ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಿಕ್ಷಣ ಸಂಸ್ಥೆಗಳನ್ನು ಮರೆಯಬಾರದು’ ಎಂದು ಸಲಹೆ ನೀಡಿದರು.
ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಮಾತನಾಡಿ, ‘ಕಾಲೇಜಿನ ಸುಧಾರಣೆ ಮತ್ತು ಬೆಳವಣಿಗೆಗೆ ಸರ್ಕಾರ ಕೊಡುತ್ತಿರುವ ಆರ್ಥಿಕ ನೆರವು ಸದ್ಯದ ಪರಿಸ್ಥಿತಿಯಲ್ಲಿ ಸಾಕಾಗುತ್ತಿಲ್ಲ. ವಿದ್ಯಾಸಂಸ್ಥೆಗಳು ಚೆನ್ನಾಗಿ ನಡೆಯಲು ಹಳೆಯ ವಿದ್ಯಾರ್ಥಿಗಳಿಂದ ನೆರವು ಅಗತ್ಯವಿದೆ’ ಎಂದರು.
ನಿವೃತ್ತ ಪ್ರಾಧ್ಯಾಪಕಿ ಗಾಯತ್ರಿ ದೇವಿ ಸಜ್ಜನ್, ಡಾ.ವಾಗ್ದೇವಿ, ಶಕುಂತಲಾ, ಡಾ.ಜಯದೇವಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ನಾಗರಾಜ್, ಲಕ್ಷ್ಮಣಪ್ಪ, ಬಾಗಲಕೋಟೆ ವಿ.ವಿ ಪರೀಕ್ಷಾಂಗ ಕುಲಸಚಿವರಾದ ಕೆ.ಪಿ. ಲತಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.