ಶಿವಮೊಗ್ಗ: ‘ನಾಡಿನಲ್ಲಿ ಮಠಗಳ ಮೂಲಕ ನಡೆಯುತ್ತಿರುವ ಶೈಕ್ಷಣಿಕ ಸೇವೆ, ತ್ರಿವಿಧ ದಾಸೋಹ, ಮಕ್ಕಳಿಗೆ ಮೌಲ್ಯಯುತ ಬದುಕು ಕಟ್ಟಿಕೊಡುವ ರೀತಿ ಜಗತ್ತಿಗೆ ಆದರ್ಶ ಪ್ರಾಯ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಇಲ್ಲಿನ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ ಜಿಲ್ಲಾ ಘಟಕದಿಂದ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಿದ್ಧಗಂಗಾ ಮಠಕ್ಕೆ ಅಕ್ಕಿ ಸಮರ್ಪಣೆ, ಯಡಿಯೂರಪ್ಪ ಹಾಗೂ ಮೈತ್ರಾದೇವಿ ಯಡಿಯೂರಪ್ಪ ಹೆಸರಿನ ಹಾಸ್ಟೆಲ್‌ಗಳ ಲೋಕಾರ್ಪಣೆ, ಪ್ರತಿಭಾ ಪುರಸ್ಕಾರ, ಅಭಿನಂದನೆ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಉತ್ತಮ ಶಿಕ್ಷಣ, ಮಾರ್ಗದರ್ಶನ, ಸಾಮಾಜಿಕ ಭದ್ರತೆ, ಪ್ರತಿಭೆಗೆ ತಕ್ಕ ಪ್ರೋತ್ಸಾಹ ಕೊಡುವುದು ನಮ್ಮೆಲ್ಲರ ಜವಾಬ್ದಾರಿ. ಪ್ರತಿಭಾವಂತ ಮಕ್ಕಳ ಬೆನ್ನ ಹಿಂದೆ ಸಮುದಾಯ ಮಾತ್ರವಲ್ಲ ಇಡೀ ಸಮಾಜ ನಿಲ್ಲಬೇಕು. ವಿಕಸಿತ ಭಾರತ ನಿರ್ಮಾಣಕ್ಕೆ ಇದು ಅತ್ಯಂತ ಅವಶ್ಯಕ ಎಂದರು.
ಎಲ್ಲರೂ ನಗುವಾಗ ನೀ ಅಳುತ್ತಾ ಬಂದೆ. ಎಲ್ಲರೂ ಅಳುವಾಗ ನೀವು ನಗುತ್ತಾ ಹೋಗು ಎಂಬ ಕವಿವಾಣಿಯಂತೆ ಬದುಕಬೇಕಿದೆ. ಜನರು ನೆನಪಿಡುವ ಜೀವನ ನಡೆಸಿದಾಗ ಮಾತ್ರ ಸಾರ್ಥಕತೆ. ಎಲ್ಲರ ಸಹಕಾರದಿಂದ ನನಗೂ ಅಪರೂಪದ ಕೆಲಸ ಮಾಡಲು ಸಾಧ್ಯವಾಗಿದೆ. ಸಾಧನೆಯೇ ಮಾತು ಎಂಬಂತೆ ಜೀವನ ನಡೆಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರ ಜೀವನ, ಕಾರ್ಯವ್ಯಾಪ್ತಿ ಇಡೀ ಕರುನಾಡ ಸಂಸ್ಕೃತಿ, ಪರಂಪರೆಯನ್ನು ಒಳಗೊಂಡಿದೆ. ಅಕ್ಕಿ ಸಮರ್ಪಣೆ ಬಸವಣ್ಣ ತೋರಿದ ಕಾಯಕ–ದಾಸೋಹದ ಆದರ್ಶದ ಪಾಲನೆ ಆಗಿದೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ವಿಧಾಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ್ರು, ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿಪ‍್ರಕಾಶ್, ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ, ಪ್ರಮುಖರಾದ ರುದ್ರಮುನಿ ಎನ್.ಸಜ್ಜನ್, ಪದವೀಧರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ಬಳ್ಳೇಕೆರೆ ಸಂತೋಷ, ಶಿವಯೋಗಿ ಬಿ.ಯಲಿ ಇದ್ದರು.
ಉಪಪಂಗಡಗಳು ವಿಜೃಂಭಿಸಬಾರದು: ಆಯನೂರು ಮಂಜುನಾಥ
‘ಬೇಡ ಬೇಡ ಎಂದರೂ ವೀರಶೈವ ಲಿಂಗಾಯತರು ಬಸವಣ್ಣನ ಹೆಸರಲ್ಲಿ ಉಪಜಾತಿಗಳ ವಿಜೃಂಭಿಸಿಕೊಂಡು ಹೊಡೆದಾಟ ಮಾಡುತ್ತಿದ್ದೇವೆ’ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಬೇಸರ ವ್ಯಕ್ತಪಡಿಸಿದರು. ‘ಬಾಯಲ್ಲಿ ಬಸವಣ್ಣನ ಹೆಸರು ಹೇಳುತ್ತೇವೆ. ಆದರೆ ಬಸವಣ್ಣ ಯಾವುದನ್ನು ವಿರೋಧಿಸಿ ಒಗ್ಗಟ್ಟು ತಂದು ಜಾತಿಗಳ ಅಳಿಸಿ ಹಾಕಿದನೋ ಅವರ ಅನುಯಾಯಿಗಳಾಗಿ ನಾವು ಉಪಜಾತಿಗಳನ್ನು ಆಂತರ್ಯದಲ್ಲಿ ಬೆಳೆಸಿಕೊಳ್ಳುತ್ತಾ ಸಾಗಿದ್ದೇವೆ. ಉಪಪಂಗಡಗಳು ವಿಜೃಂಭಿಸಬಾರದು. ಉಪಜಾತಿ ಮಾತು ಆಡಿದರೆ ಪೋಷಿಸಿದರೆ ನಮ್ಮನ್ನು ನಾವು ಬಸವ ತತ್ವದ ವಿರೋಧಿಗಳಾಗಿ ಬಿಂಬಿಸಿಕೊಂಡಂತೆ ಬಸವಣ್ಣನ ಆತ್ಮ ಸುಟ್ಟಂತೆ ಎಂದರು. ‘ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಉಪಪಂಗಡದವರು ಒಪ್ಪಿದ ಏಕೈಕ ನಾಯಕ ಯಡಿಯೂರಪ್ಪ. ಹಾಸ್ಟೆಲ್‌ಗೆ ಅವರ ಹೆಸರು ಇಟ್ಟಿರುವುದು ಬಹಳ ಸೂಕ್ತ’ ಎಂದು ಹೇಳಿದರು.
‘ಉಚಿತ ವಿದ್ಯಾರ್ಥಿ ನಿಲಯ
ಬಡ ಮಕ್ಕಳಿಗೆ ನೆರವು’ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ 2003 ರಲ್ಲಿ ಶಿವಕುಮಾರ ಸ್ವಾಮೀಜಿ ನೌಕರರ ಸಂಘ ಆರಂಭಗೊಂಡಿತು. ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಜ್ಯೋತಿಪ್ರಕಾಶ್ ದಾನವಾಗಿ ಕೊಟ್ಟ ನಿವೇಶನದಲ್ಲಿ ಡಾಲರ್ಸ್ ಕಾಲೊನಿಯಲ್ಲಿ ವಿದ್ಯಾರ್ಥಿ ನಿಲಯ ಕಟ್ಟಲಾಗಿದೆ. ಪ್ರಸ್ತುತ ‘ಮೈತ್ರಾದೇವಿ ಯಡಿಯೂರಪ್ಪ ವೀರಶೈವ ವಿದ್ಯಾರ್ಥಿ ವಸತಿ ನಿಲಯ ಉದ್ಘಾಟಿಸಲಾಗಿದೆ. ಇದರಿಂದ ಸಮಾಜದ ಬಡ ಮಕ್ಕಳಿಗೆ ಅನುಕೂಲವಾಗಿದೆ ಎಂದರು. ಸಿದ್ದಗಂಗಾ ಮಠಕ್ಕೆ ಅಕ್ಕಿ ಸಮರ್ಪಣೆಗೆ ವೀರಶೈವ ಲಿಂಗಾಯತ ಸಮಾಜ ಮಾತ್ರವಲ್ಲ ಶಿವಮೊಗ್ಗದ ಎಲ್ಲ ಜನರೂ ನಿರೀಕ್ಷೆಗೂ ಮೀರಿ ಸ್ಪಂದನೆ ತೋರಿದ್ದಾರೆ. ಮುಂದೆಯೂ ಇಂತಹ ಸಾಮಾಜಿಕ ಕಾರ್ಯ ಕೈಗೊಳ್ಳಲಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.