ADVERTISEMENT

ಬಿಜೆಪಿ, ಮೈತ್ರಿ ಪಕ್ಷಗಳ ಆರೋಪ–ಪ್ರತ್ಯಾರೋಪ

ದೇವೇಗೌಡರದು ಧೃತರಾಷ್ಟ್ರನ ಆಲಿಂಗನ- ಶ್ರೀನಿವಾಸ ಪೂಜಾರಿ, ಬಿಜೆಪಿ ಮಣಿಸಲು ಕೊನೆಯ 2 ದಿನ ಸಾಕು – ದೇವೇಗೌಡ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 15:30 IST
Last Updated 23 ಅಕ್ಟೋಬರ್ 2018, 15:30 IST
ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ
ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ   

ಶಿವಮೊಗ್ಗ:ಮತದಾನಕ್ಕೆ ಹನ್ನೊಂದು ದಿನಗಳು ಬಾಕಿ ಉಳಿದಿರುವಂತೆ ಮೈತ್ರಿ ಪಕ್ಷಗಳಾದ ಜೆಡಿಎಸ್–ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರ ಅಪ್ಪ–ಮಕ್ಕಳ ಪಕ್ಷವೇ ಎಂದು ಪ್ರಶ್ನಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ನಿಮ್ಮದು ವಂಶಪಾರಂಪರ್ಯ ಪಕ್ಷವಲ್ಲವೇ?. ರಾಮನಗರದಲ್ಲಿ ನಿಮ್ಮ ಮಿತ್ರಪಕ್ಷದ ಮುಖ್ಯಮಂತ್ರಿ ಪತ್ನಿಯನ್ನೇ ಕಣಕ್ಕೆ ಇಳಿಸಿಲ್ಲವೇ ಎಂದು ಪ್ರಶ್ನಿಸಿದರು.

ದೇವೇಗೌಡರದು ಧೃತರಾಷ್ಟ್ರನ ಆಲಿಂಗನ. ಅವರ ಆಲಿಂಗನಕ್ಕೆ ಸಿಲುಕಿರುವ ಕಾಂಗ್ರೆಸ್ ಪುಡಿಪುಡಿಯಾಗಲಿದೆ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ADVERTISEMENT

ದೇವೇಗೌಡರು ಏನು ಮಾಡಿದ್ದಾರೆ ಎಂದು ರಾಜಕೀಯ ಚರಿತ್ರೆ ಹೇಳುತ್ತದೆ. 1983ರಲ್ಲಿ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಿದವರೆ ಈ ದೇವೇಗೌಡರು. ಅವರು ಪ್ರಧಾನಿಯಾದ ಮೇಲೆ ಕೇಂದ್ರದಲ್ಲಿ ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಕೊಡಲಿಲ್ಲ. ಈಗ ಆ ಕುಟುಂಬದ ರುಣ ತೀರಿಸುತ್ತೇವೆ ಎನ್ನುತ್ತಿದ್ದಾರೆ ಹೇಳುತ್ತಿದ್ದಾರೆ ಎಂದು ಹಾಲಪ್ಪ ಹರತಾಳು ವ್ಯಂಗ್ಯವಾಡಿದರು.

ಮಧುಬಂಗಾರಪ್ಪ ಅವರಿಗೆ ಕುಮ್ಮಕ್ಕು ಕೊಟ್ಟವರೆ ಕಾಗೋಡು ತಿಮ್ಮಪ್ಪ. ಬಂಗಾರಪ್ಪ ಅವರನ್ನು ಕಾಂಗ್ರೆಸ್ ಬಳಸಿಕೊಂಡಿದೆಯೇ ಹೊರತು ಅವರಿಗೆ ಏನೂ ಮಾಡಲಿಲ್ಲ. ಈಗ ಮಧು ಬಂಗಾರಪ್ಪ ಅವರನ್ನೂ ಅದೇ ಸ್ಥಿತಿಗೆ ತಳ್ಳುತ್ತಿದ್ದಾರೆ ಎಂದು ಕುಮರ್ ಬಂಗಾರಪ್ಪ ಆರೋಪಿಸಿದರು.

ಬಿಜೆಪಿ ಮುಖಂಡರ ಹೇಳಿಕೆಗಳಿಗೆ ಅಷ್ಟೇ ತೀಷ್ಣವಾಗಿ ಪ್ರತಿಕ್ರಿಯಿಸಿರುವ ದೇವೇಗೌಡ, 2004ರಲ್ಲಿ ಬಂಗಾರಪ್ಪ ಅವರು ಬಿಜೆಪಿಗೆ ಬಂದ ಕಾರಣ ಆ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿತ್ತು. ನಂತರ ಬಂಗಾರಪ್ಪ ಅವರನ್ನು ಕೆಟ್ಟದಾಗಿ ನಡೆಸಿಕೊಂಡರು. ಅಲ್ಲಿ ಉಸಿರುಗಟ್ಟುವ ವಾತಾವರಣ ಇದೆ ಎಂಬ ಕಾರಣಕ್ಕೆ ಪಕ್ಷ ತೊರೆದಿದ್ದರು. ಅಂತಹ ಬಿಜೆಪಿಗೆ ಬಂಗಾರಪ್ಪ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದರು.

ಕುಮಾರ್ ಬಂಗಾರಪ್ಪ ಬಗ್ಗೆ ಅನವಶ್ಯಕವಾಗಿ ಮಾತನಾಡುವುದಿಲ್ಲ. ಮಧು ಅವರನ್ನು ಜೆಡಿಎಸ್‌ಗೆ ಕರೆ ತಂದಿದ್ದೇ ಬಂಗಾರಪ್ಪ. ತಂದೆಯ ಅಣತಿಯಂತೆ ಅವರು ಪಕ್ಷ ಸೇರಿದ್ದಾರೆ. ಇಲ್ಲೇ ಉಳಿದಿದ್ದಾರೆ. ಅವರ ಆಶಯದಂತೆ ಜೆಡಿಎಸ್ ಮಧು ಅವರನ್ನು ನಡೆಸಿಕೊಳ್ಳುತ್ತಿದೆ. ಅವರ ಗೆಲುವಿಗೆ ಶ್ರಮಿಸುತ್ತದೆ ಎಂದು ಕುಟುಕಿದರು.

ಚುನಾವಣೆ ಘೋಷಣೆಗೂ ಮೊದಲೇ ಪ್ರಚಾರ ಆರಂಭಿಸಿದ್ದೇವೆ. ಗೆದ್ದೇ ಬಿಟ್ಟಿದ್ದೇವೆ ಎಂದು ಬೀಗುವ ಬಿಜೆಪಿ ಮುಖಂಡರು ಮತದಾರರಿಗೂ ಪ್ರಜ್ಞೆ ಇದೆ ಎಂದು ಅರ್ಥಮಾಡಿಕೊಳ್ಳಬೇಕು. 15 ಚುನಾವಣೆ ಎದುರಿಸಿದ್ದೇನೆ. ಎಲ್ಲವೂ ನಿರ್ಧಾರವಾಗುವುದು ಕೊನೆಯ 2 ದಿನಗಳಲ್ಲಿ ಕಾದು ನೋಡಿ ಎಂದು ಬಿಜೆಪಿ ಮುಖಂಡರಿಗೆ ಟಾಂಗ್ ನೀಡಿದರು.

ಲೋಕಸಭಾ ಉಪ ಚುನಾವಣೆಗೆ ಯಡಿಯೂರಪ್ಪ–ರಾಘವೇಂದ್ರ ಕಾರಣ ಎಂಬ ದಿನೇಶ್ ಗುಂಡೂರಾವ್ ಆರೋಪಕ್ಕೆ ತಿರುಗೇಟು ನೀಡಿದ ಕುಮಾರ್ ಬಂಗಾರಪ್ಪ, ರಾಮನಗರ, ಮಂಡ್ಯ ಉಪ ಚುನಾವಣೆಗೆ ಯಾರು ಹೊಣೆ? ಈ ವಿಷಯದ ಅರಿವಿಲ್ಲವೇ ಎಂದು ಛೇಡಿಸಿದರು.

ಕುಮಾರ್ ಬಂಗಾರಪ್ಪ ಕೂಡ ಬಂಗಾರಪ್ಪ ಕುಟುಂಬ ಎಂದು ಜೆಡಿಎಸ್‌ಗೆ ಗೊತ್ತಿಲ್ಲವೇ? ಜೆಡಿಎಸ್‌ ಆಕಳು ಇದ್ದ ಕಡೆ ಚೊಂಬು ತೆಗೆದುಕೊಂಡು ಹೋಗಿ ಹಾಲು ಕರೆಯುವುದಿಲ್ಲ. ಚೊಂಬು ಇದ್ದ ಕಡೆಯೇ ಆಕಳು ಹೊಡೆದುಕೊಂಡು ಬರುತ್ತಾರೆ ಎಂದು ಹಾಲಪ್ಪ ಹರತಾಳು ವ್ಯಂಗ್ಯವಾಡಿದರು.

ಉಪಚುನಾವಣೆಗೆ ಯಡಿಯೂರಪ್ಪ ಅವರೇ ಕಾರಣ ಎಂದು ಹೇಳುವ ಬುದ್ಧಿಜೀವಿ ಕಿಮ್ಮನೆ ರತ್ನಾಕರ ಅವರು ಮಂಡ್ಯ ಹಾಗೂ ರಾಮನಗರದಲ್ಲಿ ಉಪಚುನಾವಣೆ ಕುರಿತು ಏಕೆ ಬಾಯಿ ಬಿಡುತ್ತಿಲ್ಲ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.