ADVERTISEMENT

ಬಂಗಾರಪ್ಪ, ಆಯನೂರು ಹಾವು–ಏಣಿ ಆಟ!

ಶಿವಮೊಗ್ಗ ಲೋಕಸಭೆಗೆ ನಡೆದ 5 ಚುನಾವಣೆಗಳಲ್ಲಿ ಸಾಂಪ್ರದಾಯಿಕ ಎದುರಾಳಿಗಳ ಸೆಣಸಾಟ

ಚಂದ್ರಹಾಸ ಹಿರೇಮಳಲಿ
Published 21 ಮಾರ್ಚ್ 2019, 13:29 IST
Last Updated 21 ಮಾರ್ಚ್ 2019, 13:29 IST
ಎಸ್.ಬಂಗಾರಪ್ಪ 
ಎಸ್.ಬಂಗಾರಪ್ಪ    

ಶಿವಮೊಗ್ಗ: ಜಿಲ್ಲೆಯ ಲೋಕಸಭಾ ಕ್ಷೇತ್ರದ ರಾಜಕೀಯ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪಕ್ಷ ಬದಲಿಸಿ, ಬೇರೆಬೇರೆ ಪಕ್ಷಗಳಿಂದ ಕಣಕ್ಕೆ ಇಳಿದವರು ಸಾರೆಕೊಪ್ಪ ಬಂಗಾರಪ್ಪ. ಅವರ ವಿರುದ್ಧದ ನೆಲೆಯಲ್ಲಿ ನಿಂತು 5 ಬಾರಿ ಸೆಣಸಿದವರುಆಯನೂರು ಮಂಜುನಾಥ್.

ಮೂರು ದಶಕಗಳು ರಾಜ್ಯ ರಾಜಕೀಯದಲ್ಲಿ ಮುಂಚೂಣಿಯಲ್ಲಿದ್ದ ಎಸ್‌.ಬಂಗಾರಪ್ಪ ಅವರು 1992ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ದೃಷ್ಟಿ ಹರಿಸಿದ್ದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೇಲೆ. ಕಾಂಗ್ರೆಸ್ ವಿರುದ್ಧ ಸೆಡ್ಡು ಹೊಡೆದಿದ್ದ ಅವರು ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದ್ದರು. ಅದೇ ಪಕ್ಷದಿಂದ ಮೊದಲ ಬಾರಿ 1996ರಲ್ಲಿ ನಡೆದ ಲೋಕಸಭಾ ಚುನಾವಣೆ ಎದುರಿಸಿದ್ದರು.

ಹಿಂದುಳಿದ ವರ್ಗಗಳ ನಾಯಕ ಎಂದೇ ಆ ಕಾಲಘಟ್ಟದಲ್ಲಿ ಖ್ಯಾತರಾಗಿದ್ದ ಅವರನ್ನು ಎದುರಿಸಲು ಬಿಜೆಪಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಆಗ ಹೊಸನಗರ ಶಾಸಕರಾಗಿದ್ದ ಆಯನೂರು ಮಂಜುನಾಥ್‌ ಅವರನ್ನು ಬಿಜೆಪಿ ಮನವೊಲಿಸಿತ್ತು. ನಿರೀಕ್ಷೆಯಂತೆ ಭಾರತೀಯ ಮಜ್ದೂರ್ ಸಂಘದ ಕಾರ್ಮಿಕ ನಾಯಕ ಮಂಜುನಾಥ್ ತೀವ್ರ ಪೈಪೋಟಿ ನೀಡಿದ್ದರು. ಬಂಗಾರಪ್ಪ ಅವರು 3,03,152 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದರೆ, ಮಂಜುನಾಥ್ 2,30,916 ಮತಗಳನ್ನು ಪಡೆದಿದ್ದರು. ಬಂಗಾರಪ್ಪ ಅವರನ್ನು ಎದುರು ಹಾಕಿಕೊಂಡು ಕಾಂಗ್ರೆಸ್‌ನಲ್ಲೇ ಉಳಿದಿದ್ದ ಕೆ.ಜಿ.ಶಿವಪ್ಪ ಪಡೆದ ಮತಗಳು ಕೇವಲ 66,135

ADVERTISEMENT

ಸೋಲಿಲ್ಲದ ಸರದಾರನಿಗೆ ಮೊದಲ ಕಹಿ:

1998ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಬಂಗಾರಪ್ಪ ಮತ್ತೊಂದು ಪಕ್ಷ ಕಟ್ಟಿದ್ದರು. ಅದು ಕರ್ನಾಟಕ ವಿಕಾಸ ಪಕ್ಷ. ಆಯನೂರು ಯಥಾ ಪ್ರಕಾರ ಬಿಜೆಪಿಯಿಂದ ಕಣಕ್ಕೆ ಇಳಿದಿದ್ದರು. ಕಾಂಗ್ರೆಸ್ ಶಿವಪ್ಪ ಅವರ ಬದಲು ಡಿ.ಬಿ.ಚಂದ್ರೇಗೌಡರಿಗೆ ಟಿಕೆಟ್‌ ನೀಡಿತ್ತು. ಈ ಚುನಾವಣೆಯಲ್ಲಿ ಆಯನೂರು 1.60 ಲಕ್ಷ ಮತಗಳ ಅಂತರದಿಂದ ಜಯಭೇರಿಭಾರಿಸಿದ್ದರು. ಬಂಗಾರಪ್ಪ ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದರು.1999ರಲ್ಲಿ ನಡೆದ ಚುನಾವಣೆ ವೇಳೆಗೆ ಮತ್ತೆ ಕಾಂಗ್ರೆಸ್ ಸೇರಿದ್ದ ಬಂಗಾರಪ್ಪ ಸಾಂಪ್ರದಾಯಿಕ ಎದುರಾಳಿ ಆಯನೂರು ಅವರನ್ನು ಮಣಿಸಿ, ಸೋಲಿನ ಸೇಡು ತೀರಿಸಿಕೊಂಡಿದ್ದರು.

ಅದಲು ಬದಲಾದ ಪಕ್ಷಗಳು:

2004ರ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಸೇರಿದ ಬಂಗಾರಪ್ಪ ಅವರ ನಿರ್ಧಾರ ಹಲವರ ಹುಬ್ಬೇರಿಸಿತ್ತು. ತಕ್ಷಣ ಬಿಜೆಪಿ ಮುಖಂಡ ಆಯನೂರು ಅವರಿಗೆ ಗಾಳ ಹಾಕಿದ್ದ ಕಾಂಗ್ರೆಸ್‌ ಚುನಾವಣೆಗೆ ಸ್ಪರ್ಧಿಸಲು ಬಿ–ಫಾರಂ ನೀಡಿತ್ತು. ಬದಲಾದ ಪಕ್ಷಗಳ ಮೂಲಕ ಸೆಣಸಿದ್ದ ಇಬ್ಬರೂ ಸಮಬಲದ ಹೋರಾಟ ನಡೆಸಿದ್ದರು. ಆಯನೂರು ಬಂಗಾರಪ್ಪ ಅವರ ಎದುರು ಸೋಲು ಕಂಡಿದ್ದರು.

ಬಿಜೆಪಿ ಟಿಕೆಟ್‌ ಪಡೆದು ಲೋಕಸಭೆ ಪ್ರವೇಶಿಸಿದ್ದ ಬಂಗಾರಪ್ಪ ಅವರು ಒಂದೇ ವರ್ಷಕ್ಕೆ ರಾಜೀನಾಮೆ ನೀಡಿದ್ದರು. ಮರು ವರ್ಷ ನಡೆದ ಉಪ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕೆ ಇಳಿದರು. ಆಯನೂರು ಕಾಂಗ್ರೆಸ್‌ನಿಂದಲೇ ಸ್ಪರ್ಧಿಸಿದ್ದರು. ಬಿಜೆಪಿ ಹೊಸಮುಖ ಎಂ.ಬಿ.ಭಾನುಪ್ರಕಾಶ್ ಅವರಿಗೆ ಟಿಕೆಟ್‌ ನೀಡಿತ್ತು. ಮೊದಲ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಕಂಡುಬಂದಿತ್ತು. ಆಯನೂರು ಕೇವಲ 16,637 ಮತಗಳ ಅಂತರದಿಂದ ಬಂಗಾರಪ್ಪ ಅವರಿಗೆ ಮಣಿದಿದ್ದರು.

2009ರ ಚುನಾವಣೆ ವೇಳೆಗೆ ಬಂಗಾರಪ್ಪ ಮತ್ತೆ ತವರು ಪಕ್ಷ ಕಾಂಗ್ರೆಸ್ ಸೇರಿದರು. ಆಯನೂರು ಮರಳಿ ಬಿಜೆಪಿ ತೆಕ್ಕೆಗೆ ಜಾರಿದರು. ಕಾಂಗ್ರೆಸ್‌ನಿಂದ ಬಂಗಾರಪ್ಪ ಕಣಕ್ಕೆ ಇಳಿದರೆ, ಬಿಜೆಪಿ ಆಯನೂರು ಬದಲು ಬಿ.ಎಸ್.ಯಡಿಯೂರಪ್ಪ ಪುತ್ರ ರಾಘವೇಂದ್ರ ಅವರಿಗೆ ಟಿಕೆಟ್‌ ನೀಡಿತ್ತು. ಬಂಗಾರಪ್ಪ ತಾವು ಎದುರಿಸಿದ ಕೊನೆಯ ಚುನಾವಣೆಯಲ್ಲಿ ಸೋಲು ಕಂಡರು. ರಾಘವೇಂದ್ರ ಲೋಕಸಭೆ ಪ್ರವೇಶಿಸಿದರು. ನಂತರ ಆಯನೂರು ಅವರನ್ನು ಬಿಜೆಪಿ ರಾಜ್ಯಸಭೆಗೆ ಕಳುಹಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.