ADVERTISEMENT

ಹಕ್ಕುಪತ್ರ ನೀಡದಿದ್ದರೆ ಚುನಾವಣೆ ಬಹಿಷ್ಕಾರ

ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ ಹಳವಗೋಡು ಗ್ರಾಮಸ್ಥರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 6:51 IST
Last Updated 17 ಡಿಸೆಂಬರ್ 2020, 6:51 IST
ಸಾಗರ ತಾಲ್ಲೂಕಿನ ಹಳವಗೋಡು ಗ್ರಾಮಸ್ಥರು ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು
ಸಾಗರ ತಾಲ್ಲೂಕಿನ ಹಳವಗೋಡು ಗ್ರಾಮಸ್ಥರು ಬುಧವಾರ ಉಪವಿಭಾಗಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು   

ಸಾಗರ: ಜಮೀನಿಗೆ ಹಕ್ಕುಪತ್ರ ನೀಡದೆ ಹೋದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಸೇರಿ ಮುಂಬರುವ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹಳವಗೋಡು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಉಪವಿಭಾಗಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.

‘ತಾಲ್ಲೂಕಿನ ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳವಗೋಡು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿದ್ದು, ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣದ ನಂತರ ಮನೆ, ಆಸ್ತಿ, ಜಮೀನು ಕಳೆದುಕೊಂಡು ಗ್ರಾಮದ ಸರ್ವೆ ನಂ. 12 ಮತ್ತು 13ರಲ್ಲಿ ವಾಸ ಮಾಡುತ್ತಾ, ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ’ ಎಂದು ದೂರಿದರು.

ADVERTISEMENT

‘ಸರ್ವೆ ನಂ. 12, 13ರಲ್ಲಿ 19 ಕುಟುಂಬಗಳು ವಾಸ ಮಾಡುತ್ತಿದ್ದು, ಸರ್ವೆ ನಂ. 12ರಲ್ಲಿ ಎಕರೆ ಪ್ರದೇಶ ಉಳುಮೆಗೆ ಯೋಗ್ಯವಾಗಿಲ್ಲ. ಈ ಜಮೀನಿನ ಬದಲು ಸರ್ವೆ ನಂ. 12ರಲ್ಲಿ ಇರುವ 46 ಎಕರೆ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದೇವೆ. ಈ ಜಮೀನು ಉಮಾ ಮಹಾದೇವನ್ ಎಂಬುವವರು ಉಪವಿಭಾಗಾಧಿಕಾರಿಗಳಾಗಿದ್ದಾಗ ಅರಣ್ಯ ಇಲಾಖೆಗೆ ಸೇರಿಸಿದ್ದಾರೆ. ಇದು ಅವೈಜ್ಞಾನಿಕ ಕ್ರಮ’ ಎಂದು ಆರೋಪಿಸಿದರು.

‘ಉಳುಮೆ ಮಾಡುತ್ತಿರುವ ಜಮೀನನ್ನು ಪುನಃ ಕಂದಾಯ ಭೂಮಿಯಾಗಿ ಪರಿವರ್ತನೆ ಮಾಡಿ, ಹಕ್ಕುಪತ್ರ ನೀಡಲು ಹಲವು ವರ್ಷಗಳಿಂದ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡುತ್ತಾ ಬಂದಿದ್ದೇವೆ. ಆದರೆ ಅಧಿಕಾರಿಗಳು ಮತ್ತು ಸರ್ಕಾರ ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಮುಳುಗಡೆ ಸಂತ್ರಸ್ತರನ್ನು ಸರ್ಕಾರ ಕಡೆಗಣಿಸಿರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಈ ಬಗ್ಗೆ ನಿಗಾ ವಹಿಸದೆ ಹೋದರೆ ಎಲ್ಲ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ತಾಲ್ಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಈ. ಕೆಳದಿ, ಗ್ರಾಮಸ್ಥರಾದ ಅಶೋಕ್, ನಾರಾಯಣಪ್ಪ, ಈಶ್ವರ, ಷಣ್ಮುಖ, ಚಂದ್ರಶೇಖರ್, ನಿರಂಜನ್, ರಾಜಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.