ಶಿವಮೊಗ್ಗ: ‘ರಾಜ್ಯದಲ್ಲಿ ಅತಿ ಬೇಡಿಕೆಯ ಅವಧಿಯಲ್ಲಿ ಪ್ರತೀ ವರ್ಷ ಶೇ 5ರಿಂದ 6ರಷ್ಟು ವಿದ್ಯುತ್ ಬಳಕೆ ಹೆಚ್ಚುತ್ತಿದೆ. ಹೀಗಾಗಿ ಭವಿಷ್ಯದ ಅಗತ್ಯತೆ, ತೀರಾ ಸಮೀಪದಲ್ಲಿ ಎರಡು ಅಣೆಕಟ್ಟುಗಳ (ಗೇರುಸೊಪ್ಪಾ–ತಳಕಳಲೆ) ಲಭ್ಯತೆ ಹಾಗೂ ಅತ್ಯಂತ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಉತ್ಪಾದನೆಗೆ ಅವಕಾಶವಿರುವ ಕಾರಣ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದೇವೆ’ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (ಕೆಪಿಸಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎಂ.ವಿಜಯ್ ತಿಳಿಸಿದರು.
‘ಅಗ್ಗದ ದರದಲ್ಲಿ ಯೋಜನೆಯ ಅನುಷ್ಠಾನದ ಹೊರತಾಗಿ ಜನರ ವಿರೋಧವನ್ನು ಧಿಕ್ಕರಿಸುವ ಯಾವುದೇ ಉದ್ದೇಶ ಕೆಪಿಸಿಎಲ್ ಹೊಂದಿಲ್ಲ’ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ ಅವರು, ‘ವದಂತಿಗಳಿಗೆ ಕಿವಿಗೊಡದೇ ನೇರವಾಗಿ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿ ವಾಸ್ತವ ಸಂಗತಿ ಅರಿಯಬೇಕು’ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
‘ಶರಾವತಿ ಪಂಪ್ಡ್ ಸ್ಟೋರೇಜ್ ಏಕಾಏಕಿ ಕೈಗೆತ್ತಿಕೊಂಡಿದ್ದಲ್ಲ. ರಾಜ್ಯ ಹಾಗೂ ರಾಷ್ಟ್ರದ ಭವಿಷ್ಯದ ವಿದ್ಯುತ್ ಬೇಡಿಕೆಯನ್ನು ಪರಿಗಣಿಸಿ ನವೀಕರಿಸಬಹುದಾದ ಇಂಧನ ಶೇಖರಣಾ ಯೋಜನೆಯಾಗಿ ರೂಪಿಸಲಾಗಿದೆ. ಇದರಲ್ಲಿ ಲಾಭ ಮಾಡುವ ಯಾವುದೇ ಉದ್ದೇಶ ಕೆಪಿಸಿಎಲ್ ಹೊಂದಿಲ್ಲ. ಖರ್ಚು ಮಾಡಿದ ಹಣ, ನಿರ್ವಹಣೆಯ ಮೊತ್ತವನ್ನು ವಾಪಸ್ ಪಡೆಯುವ ಆಶಯ ಮಾತ್ರ ಹೊಂದಿದೆ. 2017ರಿಂದಲೂ ಅಧ್ಯಯನ ನಡೆಸಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ರೂಪಿಸಲಾಗಿದೆ. ಪರಿಸರ ಸಚಿವಾಲಯ, ವನ್ಯಜೀವಿ ವಿಭಾಗ ಸೇರಿದಂತೆ ಕೇಂದ್ರ ಸರ್ಕಾರದ 13 ನಿರ್ದೇಶನಾಲಯಗಳು ಪರಾಮರ್ಶಿಸಿ ಇದಕ್ಕೆ ಒಪ್ಪಿಗೆ ನೀಡಲಿವೆ’ ಎಂದು ಹೇಳಿದರು.
‘ತಳಕಳಲೆ, ಗೇರುಸೊಪ್ಪಾ ಜಲಾಶಯಗಳು ಒಳಗೊಂಡಂತೆ ಶರಾವತಿ ಯೋಜನಾ ಪ್ರದೇಶದ ಅತ್ಯಂತ ಸೂಕ್ಷ್ಮ ಮಾಹಿತಿಗಳು ಶರಾವತಿ ಪಂಪ್ಡ್ ಸ್ಟೋರೇಜ್‌ನ ವಿಸ್ತೃತ ಯೋಜನಾ ವರದಿಯಲ್ಲಿದೆ. ಹೀಗಾಗಿ ಡಿಪಿಆರ್ ಸಾರ್ವಜನಿಕವಾಗಿ ಬಹಿರಂಗಗೊಳಿಸಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಾಗೆಂದು ಎಲ್ಲ ಸಂಗತಿಯನ್ನು ಮುಚ್ಚಿಟ್ಟಿಲ್ಲ. ಸಾರ್ವಜನಿಕರಿಗೆ ಕೊಡಬಹುದಾದ ಪ್ರತಿಯೊಂದು ಮಾಹಿತಿಯೂ ಎನ್ವಿರಾನ್‌ಮೆಂಟ್ ಇಂಪ್ಯಾಕ್ಟ್ ಅಸೆಸ್ (ಇಐಎ) ಹೆಸರಲ್ಲಿ ಪರಿವೇಶ್ ಪೋರ್ಟಲ್‌ನಲ್ಲಿ ಲಭ್ಯವಿದೆ’ ಎಂದರು.
‘ಈಗ ಗೇರುಸೊಪ್ಪಾದಿಂದ ತಾಳಗುಪ್ಪವರೆಗೆ ಅಸ್ತಿತ್ವದಲ್ಲಿರುವ 220 ಕೆ.ವಿ. ವಿದ್ಯುತ್ ಮಾರ್ಗದ 35 ಮೀ. ಕಾರಿಡಾರ್‌ನಲ್ಲಿಯೇ ಮಲ್ಟಿ ಸರ್ಕ್ಯೂಟ್ ಪವರ್ ಹೆಡ್‌ಲೈನ್, ವಿಶೇಷ ವಿನ್ಯಾಸದ ಟವರ್ ಹಾಗೂ ವಿ–ಸ್ಟ್ರಿಂಗ್ ತಾಂತ್ರಿಕತೆಯನ್ನು ಬಳಸಿಕೊಂಡು ಪಂಪ್ಡ್ ಸ್ಟೋರೇಜ್ ಯೋಜನೆಯಲ್ಲಿ ಉತ್ಪಾದನೆಗೊಂಡ 2,000 ಮೆಗಾವ್ಯಾಟ್ ವಿದ್ಯುತ್ ಅನ್ನು ಪೂರೈಕೆ ಮಾಡಲಾಗುವುದು. ಹೀಗಾಗಿ ಯಾವುದೇ ಕಾಡು ಕಡಿಯುವ ಪ್ರಸಂಗ ಬರುವುದಿಲ್ಲ’ ಎಂದು ಕೆಪಿಸಿಎಲ್ ಮುಖ್ಯ ಎಂಜಿನಿಯರ್ ಮಾದೇಶ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕೆಪಿಟಿಸಿಎಲ್ ಸೂಪರಿಟೆಂಡೆಂಟ್ ಎಂಜಿನಿಯರ್ ಸುರೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.