ADVERTISEMENT

ಸೊರಬ | ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಒತ್ತು: ಮಧು ಬಂಗಾರಪ್ಪ

ಕುಬಟೂರು ಗ್ರಾಮದ ದೊಡ್ಡಕೆರೆಗೆ ಬಾಗಿನ ಅರ್ಪಿಸಿದ ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:35 IST
Last Updated 16 ಆಗಸ್ಟ್ 2025, 7:35 IST
ಸೊರಬ ತಾಲ್ಲೂಕಿ‌ನ ಕುಬಟೂರು ಗ್ರಾಮದ ದೊಡ್ಡಕೆರೆಗೆ ಸಚಿವ ಮಧು ಬಂಗಾರಪ್ಪ ಬಾಗಿನ ಅರ್ಪಿಸಿದರು
ಸೊರಬ ತಾಲ್ಲೂಕಿ‌ನ ಕುಬಟೂರು ಗ್ರಾಮದ ದೊಡ್ಡಕೆರೆಗೆ ಸಚಿವ ಮಧು ಬಂಗಾರಪ್ಪ ಬಾಗಿನ ಅರ್ಪಿಸಿದರು   

ಸೊರಬ: ತಾಲ್ಲೂಕಿನ ಜನರ ಬಹುದಿನಗಳ ಬೇಡಿಕೆಯಾದ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಹಾಗೂ ಗಾರ್ಮೆಂಟ್ಸ್ ಆರಂಭಿಸಲು ಚಿಂತನೆ ನಡೆಸಲಾಗಿದ್ದು, ಪಾಲಿಟೆಕ್ನಿಕ್ ಕಾಲೇಜನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು. 

ತಾಲ್ಲೂಕಿನ ಕುಬಟೂರು ಗ್ರಾಮದ ದೊಡ್ಡಕೆರೆಗೆ ಶುಕ್ರವಾರ ಬಾಗಿನ ಅರ್ಪಿಸಿ ಮಾತನಾಡಿದರು. 

ತಾಲ್ಲೂಕಿನಲ್ಲಿ ಎಂಜಿನಿಯರ್ ಕಾಲೇಜು ಸ್ಥಾಪನೆಗೆ ಹುದ್ದೆಗಳ ಕೊರತೆಯಿದೆ. ಕೈಗಾರಿಕೆಗೆ ಒತ್ತು ನೀಡುವ ದೃಷ್ಟಿಯಿಂದ ಗಾರ್ಮೆಂಟ್ಸ್ ನಿರ್ಮಿಸಲು ಚಿಂತನೆ ನಡೆಸಲಾಗಿದ್ದು, ಜಾಗದ ಕೊರತೆಯಿದೆ. ಪಟ್ಟಣ ವ್ಯಾಪ್ತಿಯಲ್ಲಿ‌ ಸೂಕ್ತ ಜಾಗ ಸಿಕ್ಕರೆ ಗಾರ್ಮೆಂಟ್ಸ್ ನಿರ್ಮಾಣಕ್ಕೆ ಅನುಕೂಲವಾಗಲಿದೆ ಎಂದರು. 

ADVERTISEMENT

ತಾಲ್ಲೂಕಿ‌ನ ಸಮಗ್ರ ಅಭಿವೃದ್ಧಿಗೆ ಸರ್ಕಾರ ನೀಡಿರುವ ಅನುದಾನದಲ್ಲಿ ನೀರಾವರಿ, ರಸ್ತೆ, ಪ್ರವಾಸೋದ್ಯಮ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ತಾಲ್ಲೂಕು ಅಭಿವೃದ್ಧಿಗೆ ಸರ್ಕಾರ ಈಗಾಗಲೇ ₹50 ಕೋಟಿ ಅನುದಾನ ನೀಡಿದೆ. ರಸ್ತೆ ಕಾಮಗಾರಿ, ಸಮುದಾಯ ಭವನ ಹಾಗೂ ಇತರೆ ಕಾಮಗಾರಿಗೆ ಅನುದಾನ ಬಳಸಲಾಗುವುದು ಎಂದರು. 

ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಈಗಾಗಲೇ ₹1,500 ಕೋಟಿ ನೀಡಿದ್ದು, ನೀರಾವರಿ ಮತ್ತು ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ, ಜೋಗ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ವೇಳೆ ಅನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಸೊರಬ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಶಿಮುಲ್ ನಿರ್ದೇಶಕ ದಯಾನಂದ ಗೌಡ ತ್ಯಾವಗೋಡು, ಸಹಕಾರ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ, ಮಂಜಣ್ಣ, ಗಣಪತಿ ಹುಲ್ತಿಕೊಪ್ಪ, ಎಂ.ಡಿ. ಶೇಖರ್, ಅಂಜಲಿ, ಕಮಲಾಕ್ಷಿ, ಮಧು ಗೌಡ ಅನವಟ್ಟಿ, ಸಂಜೀವ್ ತರಕಾರಿ, ಸುರೇಶ್ ಹಾವಣ್ಣನವರ್, ಚಂದ್ರಣ್ಣ, ಸುರೇಶ್ ಬಿಳವಾಣಿ, ಶ್ರೀಕಾಂತ್ ಶಕುನವಳ್ಳಿ ಮಂಜು, ನಾಗರಾಜ್ ಸೇರಿದಂತೆ ಗ್ರಾಮಸ್ಥರು ಇದ್ದರು.

ದೇವಸ್ಥಾನದ ಉದ್ಘಾಟನೆ ನಾಳೆ  ಆನವಟ್ಟಿ: ಸಚಿವ ಮಧು ಬಂಗಾರಪ್ಪ ಅವರ ಸ್ವಗ್ರಾಮ ಕುಬಟೂರಿನ ದೊಡ್ಡಕೆರೆ ತುಂಬಿ ಹರಿಯುತ್ತಿದೆ. ಸಚಿವರು ಗ್ರಾಮಸ್ಥರೊಂದಿಗೆ ಶುಕ್ರವಾರ ತೆರಳಿ ಕೆರೆಗೆ ಬಾಗಿನ ಅರ್ಪಿಸಿದರು.  ಗ್ರಾಮ ದೇವತೆ ದ್ಯಾಮವ್ವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗ್ರಾಮಸ್ಥರೊಂದಿಗೆ ದೊಡ್ಡಕೆರೆವರೆಗೂ ನಡೆದು ಸಾಗಿದರು. ನಂತರ ಕೆರೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.  ಮಳೆಗಾಲದಲ್ಲಿ ಕುಬಟೂರಿನ ದೊಡ್ಡಕೆರೆ ಭರ್ತಿಯಾದರೆ ವರ್ಷಪೂರ್ತಿ ನೀರು ಇರುತ್ತದೆ. ಕುಬಟೂರು ಸೇರಿದಂತೆ ಸುತ್ತಲ ಗ್ರಾಮಗಳ ಜಮೀನುಗಳ ಕೊಳವೆಬಾವಿಗಳ ಅಂತರ್ಜಲ ಹೆಚ್ಚುತ್ತದೆ.  ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಾಯಮ್ಮ ದೇವಸ್ಥಾನದ ಉದ್ಘಾಟನೆ ಆಗಸ್ಟ್ 17ರಂದು ನಡೆಯಲಿದೆ. ದೇವಸ್ಥಾನಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಚರ್ಚೆ ಮಾಡಿ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.