ADVERTISEMENT

ಎಂಜಿನಿಯರ್‌ಗಳ ಕೊಡುಗೆ ಅಪಾರ

‘ಇನೋವೇಟಿವ್ ಮಾದರಿ ಪ್ರದರ್ಶನ’ ಉದ್ಘಾಟಿಸಿದ ಶಾಸಕ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 20 ಜೂನ್ 2018, 11:35 IST
Last Updated 20 ಜೂನ್ 2018, 11:35 IST
ಶಿವಮೊಗ್ಗ ಜೆಎನ್ಎನ್‌ಸಿಇ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಇನೋವೇಟಿವ್ ಮಾದರಿ ಪ್ರದರ್ಶನ’ವನ್ನು ಶಾಸಕ ಕೆ.ಎಸ್‌.ಈಶ್ವರಪ್ಪ ಉದ್ಘಾಟಿಸಿ ವೀಕ್ಷಿಸಿದರು.
ಶಿವಮೊಗ್ಗ ಜೆಎನ್ಎನ್‌ಸಿಇ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಇನೋವೇಟಿವ್ ಮಾದರಿ ಪ್ರದರ್ಶನ’ವನ್ನು ಶಾಸಕ ಕೆ.ಎಸ್‌.ಈಶ್ವರಪ್ಪ ಉದ್ಘಾಟಿಸಿ ವೀಕ್ಷಿಸಿದರು.   

ಶಿವಮೊಗ್ಗ: ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಎಂಜಿನಿಯರಗಳ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು. ನಗರದ ಜೆಎನ್ಎನ್‌ಸಿಇ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಇನೋವೇಟಿವ್ ಮಾದರಿ ಪ್ರದರ್ಶನ’ ಉದ್ಘಾಟಿಸಿ ಅವರು ಮಾತನಾಡಿದರು.

ಎಂಜಿನಿಯರ್‌ಗಳು ದೇಶದ ಆಸ್ತಿಯಾಗಿದ್ದಾರೆ. ಹಾಗಾಗಿ ಎಂಜಿನಿಯರ್‌ಗಳು ತಮ್ಮ ಕರ್ತವ್ಯ ಏನೆಂಬುದನ್ನು ಅರಿತು ಸದೃಢ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರವೇ ಮಾದರಿ ಸಿದ್ಧಪಡಿಸುವುದರಲ್ಲಿ ಅರ್ಥವಿಲ್ಲ. ಅದು ಭವಿಷ್ಯಕ್ಕೆ ಉಪಯೋಗಬೇಕು. ದೇಶದ ಅಭಿವೃದ್ಧಿಗೆ ಪೂರಕವಾಗಬೇಕು. ಹೊಸ ಆವಿಷ್ಕಾರಗಳತ್ತ ತಮ್ಮ ಚಿತ್ತ ಹರಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ತಯಾರಿ ಸುವ ಮಾದರಿಗಳು ವ್ಯರ್ಥವಾಗ ಬಾರದು. ಹೊಸ ಬಗೆಯ ಆವಿಷ್ಕಾರಗಳಿದ್ದರೆ, ಸಮಾಜಕ್ಕೆ ಉಪಯೋಗ ವಾಗುವಂತಿದ್ದರೆ ಅವುಗಳನ್ನು ಸರ್ಕಾರ ಹಾಗೂ ಸಾರ್ವಜನಿಕರ ಗಮನಕ್ಕೆ ತರಬೇಕು. ಇದರಿಂದ ತಮ್ಮ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ADVERTISEMENT

‘ನಮ್ಮ ದೇಶದಲ್ಲಿ ಸಾಕಷ್ಟು ಕಾಮಗಾರಿಗಳು ಕೇವಲ ಉದ್ಘಾಟನೆಗೆ ಸೀಮಿತವಾಗುತ್ತಿವೆ. ವರ್ಷಗಳೇ ಕಳೆದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಇಂತಹ ಸಂದರ್ಭದಲ್ಲಿ ಎಂಜನಿಯರ್‌ಗಳು ಮಹತ್ತರವಾದ ಪಾತ್ರ ನಿರ್ವಹಿಸಬೇಕು. ಆಗ ಮಾತ್ರ ಕಾಮಗಾರಿಗಳು ಗುಣಮಟ್ಟದಲ್ಲಿ ಹಾಗೂ ನಿಗದಿತ ವೇಳೆಯಲ್ಲಿ ಪೂರ್ಣಗೊಳ್ಳಲು ಸಾಧ್ಯ’ ಎಂದು ಹೇಳಿದರು.

ವಿದ್ಯಾರ್ಥಿಗಳು ಎಂಜಿನಿಯರಿಂಗ್‌ ಕ್ಷೇತ್ರವನ್ನು ಸವಾಲಾಗಿ ಸ್ವೀಕರಿಸಬೇಕು. ಆಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಚಿಂತನೆ ನಡೆಸಬೇಕು. ಉದ್ಯಮ ಹುಟ್ಟುಹಾಕುವುದರ ಮೂಲಕ ಉದ್ಯೋಗಾವಕಾಶವನ್ನು ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ 200ಕ್ಕೂ ಹೆಚ್ಚು ಮಾದರಿಗಳಲ್ಲಿ ಆಯ್ದ 35ಕ್ಕೂ ಹೆಚ್ಚು ಮಾದರಿಗಳನ್ನು ಪ್ರದರ್ಶಿಸಲಾಯಿತು. ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ್, ಖಜಾಂಚಿ ಪಿ.ಆರ್.ನಾಗರಾಜ್, ಕಾಲೇಜು ಪ್ರಾಂಶುಪಾಲ ಡಾ.ಮಹದೇವಸ್ವಾಮಿ, ಉಪ ಪ್ರಾಂಶುಪಾಲ ಎಲ್.ಕೆ..ಶ್ರೀಪತಿ, ಪ್ರೊ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.