ADVERTISEMENT

ಶಾಲೆ ಬಿಟ್ಟ ಮಕ್ಕಳ ದಾಖಲಾತಿ: ಶಿಕ್ಷಕನಿಗೆ ಒಲಿದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 4:35 IST
Last Updated 5 ಸೆಪ್ಟೆಂಬರ್ 2021, 4:35 IST
ಆನಂದಪುರ ಸಮೀಪದ ಬಿ. ಹೊಸೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಮಕ್ಕಳ ಕಲಿಕೆಗೆ ಪೂರಕವಾದ ಚಿತ್ರಗಳು
ಆನಂದಪುರ ಸಮೀಪದ ಬಿ. ಹೊಸೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಮಕ್ಕಳ ಕಲಿಕೆಗೆ ಪೂರಕವಾದ ಚಿತ್ರಗಳು   

ಆನಂದಪುರ: ಉತ್ತಮ ಕಲಿಕಾ ವಾತಾವರಣ ಹಾಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದ ಸಮೀಪದ ಸರ್ಕಾರಿ ಕಿರಿಯ ಪ್ರಾಥಮಿಕ ಬಿ. ಹೊಸೂರು ಶಾಲೆಯ ಶಿಕ್ಷಕಪ್ರಕಾಶ್ ಕೆ.ಎಸ್. ಅವರು ಈ ಬಾರಿಯ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

23 ವರ್ಷಗಳಿಂದ ಇದೇ ಶಾಲೆಯಲ್ಲಿ ವೃತ್ತಿಯನ್ನು ನಿರ್ವಹಿಸುತ್ತಿರುವ ಅವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದ್ದಾರೆ. ಪ್ರಾರಂಭದಲ್ಲಿ 10ರಿಂದ 15 ಮಕ್ಕಳಿದ್ದ ಶಾಲೆಯಲ್ಲಿ ಇವರ ಪರಿಶ್ರಮದಿಂದ ಇಂದು 25 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪೋಷಕರ ಆರ್ಥಿಕ ಸಮಸ್ಯೆಯಿಂದ ಶಾಲೆ ಮಧ್ಯದಲ್ಲೇ ಬಿಟ್ಟು ಹೋದ ಮಕ್ಕಳನ್ನು ಪುನಃ ದಾಖಲಾತಿ ಮಾಡಿ ವಿದ್ಯಾಭ್ಯಾಸ ಮುಂದುವರಿಸುವಲ್ಲಿ ನೆರವಾಗಿದ್ದಾರೆ.

ಪ್ರಕಾಶ್ ಅವರು ಶಿಕ್ಷಣದಲ್ಲಿ ಮಾಡಿದ ಬದಲಾವಣೆ ಹಾಗೂ ಕೆಲಸ ಕಾರ್ಯಗಳನ್ನು ಗಮನಿಸಿ ಶಿಕ್ಷಣ ಇಲಾಖೆ ಹಾಗೂ ಸಂಘ ಸಂಸ್ಥೆಗಳು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ನಾವೀನ್ಯ ಯಶೋಗಾಥೆ ಪ್ರಶಸ್ತಿ, ಹಳದಿ ಶಾಲಾ ಪ್ರಶಸ್ತಿ, ಉತ್ತಮ ನಲಿ ಕಲಿ ಪ್ರಶಸ್ತಿ, ಶಾಲಾ ಹಿತ್ತಲ ತೋಟ ಜೀವ ವೈವಿಧ್ಯ ಸಂರಕ್ಷಕ ಶಾಲಾ ಪ್ರಶಸ್ತಿ, ಗಾಂಧಿ ಜ್ಞಾನಸುಧಾ ಅಭಿನಂದನಾ ಪತ್ರ ದೊರಕಿದೆ.

ADVERTISEMENT

ಶಾಲೆಯಲ್ಲಿ ದಾಖಲಾತಿಯನ್ನು ಹೆಚ್ಚಿಸಲು, ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಆಗಬೇಕಾದ ಕೆಲಸಗಳನ್ನು ಉಚಿತವಾಗಿ ಮಾಡಿಕೊಡುತ್ತಾರೆ. 2003ರಿಂದ ಶಾಲಾ ಆವರಣದಲ್ಲೇ ಬಿಸಿ ಊಟಕ್ಕೆ ಬೇಕಾದ ಸೊಪ್ಪು ತರಕಾರಿ ಬೆಳೆಯಲಾಗುತ್ತಿದ್ದಾರೆ. ಅಲ್ಲದೆ 1.5 ಎಕರೆ ಪ್ರದೇಶದಲ್ಲಿ 100 ಅಡಿಕೆ ಸಸಿ, ಹಣ್ಣಿನ ಗಿಡಗಳಾದ ಸಪೋಟ, ಬಾಳೆ, ವಾಟರ್ ಆ್ಯಪಲ್, ಬಟರ್ ಫ್ರೂಟ್, ನೆಲ್ಲಿ, ನೆರಳೆ, ಮಾವು, ಪಪ್ಪಾಯಿ ಇನ್ನಿತರ ಹಣ್ಣಿನ ಗಿಡಗಳನ್ನು ಬೆಳೆಸಿ ಮಕ್ಕಳಿಗೆ ನೀಡುತ್ತಿದ್ದಾರೆ. ಸಂಬಾರ್ ಪದಾರ್ಥ, ಔಷಧೀಯ ಸಸ್ಯಗಳನ್ನು ಸಹ ಬೆಳೆಸಲಾಗಿದೆ.

ಪೋಷಕರು ಹಾಗೂ ದಾನಿಗಳಿಂದ ₹ 75 ಸಾವಿರ ಸಹಾಯ ಪಡೆದು ಶಾಲೆಯ ಅಭಿವೃದ್ಧಿ ಕೈಗೊಂಡಿದ್ದಾರೆ. ಆಕರ್ಷಿತವಾಗಿ ಕಾಣಲು ಹಾಗೂ ಮಕ್ಕಳಿಗೆ ಕಲಿಕೆಗೆ ಪೂರಕವಾದ ವರ್ಣ ರಂಜಿತ ಚಿತ್ರಗಳನ್ನು ಶಾಲಾ ಕಾಂಪೌಂಡ್ ಕೊಠಡಿಯ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಸ್ಮಾರ್ಟ್ ಕ್ಲಾಸ್ ಹಾಗೂ ಕಂಪ್ಯೂಟರ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆಯಾಗಿ ವಿವಿಧ ಸಂಘ ಸಂಸ್ಥೆಗಳಿಂದ ₹ 20. 62 ಲಕ್ಷ ದೇಣಿಗೆ ಸಂಗ್ರಹಿಸಿ ಶಾಲೆಯನ್ನು ಅಭಿವೃದ್ಧಿ ಪಡಿಸಿ ಮಾದರಿ ಶಾಲೆಯಾಗಿ ರೂಪಿಸಿದ್ದಾರೆ.

‘ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರಕುತ್ತಿರುವುದು ಸಂತಸದ ವಿಷಯ. ಉತ್ತಮ ಶಾಲೆಯನ್ನಾಗಿಸಲು ಸಲಹೆ ಹಾಗೂ ಸಹಾಯ ನೀಡಿದ ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು, ವಿವಿಧ ಸಂಘ–ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಪ್ರಕಾಶ್ ಕೆ.ಎಸ್. ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.